ಗುರುವಾರ , ನವೆಂಬರ್ 26, 2020
21 °C
ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನ.3ರಂದು

ಮುಂಡಗೋಡದಲ್ಲೂ ರೆಸಾರ್ಟ್ ರಾಜಕಾರಣ!

ಶಾಂತೇಶ ಬೆನಕನಕೊಪ್ಪ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಇಲ್ಲಿನ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನ.3ರಂದು ನಡೆಯಲಿದೆ. ಬಿ.ಜೆ.ಪಿ.ಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಅಲ್ಲದೇ ಅಭ್ಯರ್ಥಿಗಳ ಬಗ್ಗೆ ಒಮ್ಮತದ ಅಭಿಪ್ರಾಯ ಮೂಡಿಲ್ಲ.

ಪಕ್ಷದ ಸದಸ್ಯರನ್ನು ಸೋಮವಾರ ಸಂಜೆ ಯಲ್ಲಾಪುರದ ರೆಸಾರ್ಟ್‌ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪಕ್ಷದ ಹಿರಿಯರನ್ನು ಭೇಟಿ ಮಾಡಿ ಮುಂಡಗೋಡಕ್ಕೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ನ.3ರಂದು ನಡೆಯುವ ಚುನಾವಣೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಎಂದು ನಿಗದಿಯಾಗಿದೆ. ಅಧ್ಯಕ್ಷ ಸ್ಥಾನದ ಮೀಸಲಾತಿಯಂತೆ ಬಿ.ಜೆ.ಪಿ.ಯಲ್ಲಿ ರೇಣುಕಾ ಹಾವೇರಿ ಹಾಗೂ ಜಯಸುಧಾ ಭೋವಿ ಪ್ರಬಲ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ.ಯ ಫಣಿರಾಜ ಹದಳಗಿ, ಮಂಜುನಾಥ ಹರಮಲಕರ್, ಶ್ರೀಕಾಂತ ಸಾನು ಹೆಸರು ಮುಂಚೂಣಿಯಲ್ಲಿವೆ.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯ್ಕ ನೇತೃತ್ವದ ಸಮಿತಿಯು ಚುನಾಯಿತ ಸದಸ್ಯರ ಅಭಿಪ್ರಾಯವನ್ನು ಭಾನುವಾರ ಸಂಗ್ರಹಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಸಂಸದ ಅನಂತಕುಮಾರ ಹೆಗಡೆ ಅವರಿಗೆ ವರದಿ ನೀಡಿದೆ.

‘ಪಕ್ಷದ ತೀರ್ಮಾನವನ್ನು ಸದಸ್ಯರಿಗೆ ತಿಳಿಸಿ, ಭಿನ್ನಮತಕ್ಕೆ ಅವಕಾಶ ನೀಡದಂತೆ ಮಾಡಲು ಸದಸ್ಯರನ್ನು ಒಂದೆಡೆ ಸೇರಿಸಲಾಗಿದೆ. ಬಿ.ಜೆ.ಪಿ.ಯಲ್ಲಿ ಭಿನ್ನಮತ ಉಂಟಾದರೆ, ಕಾಂಗ್ರೆಸ್ ಬೆಂಬಲದಿಂದ ಅಧಿಕಾರಕ್ಕೇರುವ ಸಾಧ್ಯತೆಯಿತ್ತು. ಆದರೆ, ಕಾಂಗ್ರೆಸ್ ಪಕ್ಷದಿಂದ ನಾಲ್ವರು ಸದಸ್ಯರು ಇತ್ತೀಚೆಗೆ ಬಿ.ಜೆ.ಪಿ.ಗೆ ಸೇರ್ಪಡೆಯಾಗಿದ್ದಾರೆ. ವರಿಷ್ಠರ ನಿರ್ಣಯವನ್ನು ಧಿಕ್ಕರಿಸುವ ಧೈರ್ಯ ಈಗ ಬಿ.ಜೆ.ಪಿ..ಯ ಯಾವ ಸದಸ್ಯರಲ್ಲಿಯೂ ಉಳಿದಿಲ್ಲ’ ಎಂದು ಮುಖಂಡರೊಬ್ಬರು ಹೇಳುತ್ತಾರೆ.

ಬಿ.ಜೆ.ಪಿ.ಯಲ್ಲಿ ರೇಣುಕಾ ಹಾವೇರಿ ಹಾಗೂ ಜಯಸುಧಾ ಭೋವಿ ಇಬ್ಬರೂ ಹೊಸಬರು. ಇಬ್ಬರಲ್ಲಿ ಯಾರೇ ಅಧ್ಯಕ್ಷರಾದರೂ ಮೊದಲ ಬಾರಿ ಗೆದ್ದು ಅಧ್ಯಕ್ಷ ಗಾದಿಗೆ ಏರಿದ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ತಮಗೇ ಅವಕಾಶ ನೀಡಬೇಕೆಂದು ಇಬ್ಬರೂ ಪಟ್ಟು ಹಿಡಿದಿದ್ದು, ಮೊದಲ ಅವಧಿಯನ್ನು ತಲಾ ಇಬ್ಬರಿಗೆ ಹಂಚುವ ಸಾಧ್ಯತೆಯಿದೆ.

‘ಉಪಾಧ್ಯಕ್ಷ ಸ್ಥಾನಕ್ಕೆ ಹಿರಿಯ ಹಾಗೂ ಅನುಭವಿ ಸದಸ್ಯನ ಆಯ್ಕೆಗೆ ಪಕ್ಷ ಮುಂದಾದರೆ, ಈ ಹಿಂದೆ ಅಧ್ಯಕ್ಷರಾಗಿದ್ದ ಫಣಿರಾಜ ಹದಳಗಿ ಉಪಾಧ್ಯಕ್ಷ ಆಗಬಹುದು. ಹೊಸಬರಿಗೆ ಅವಕಾಶ ಕೊಡಲು ಪಕ್ಷ ಯೋಚಿಸಿದರೆ, ಇನ್ನುಳಿದ ಇಬ್ಬರ ಬಗ್ಗೆ ಮುಖಂಡರು ಚರ್ಚಿಸಬಹುದು’ ಎಂದು ಮುಖಂಡರು ಹೇಳಿದರು.

‘ಒಮ್ಮತದ ಆಯ್ಕೆಗೆ ಆದ್ಯತೆ’: ‘ಸದಸ್ಯರ ಅಭಿಪ್ರಾಯವನ್ನು ಈಗಾಗಲೇ ಸಂಗ್ರಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಜಿಲ್ಲಾ ಮುಖಂಡರು ಪಕ್ಷದ ತೀರ್ಮಾನವನ್ನು ಸದಸ್ಯರಿಗೆ ತಿಳಿಸಲಿದ್ದಾರೆ. ಒಮ್ಮತದ ಆಯ್ಕೆಗೆ ಪಕ್ಷ ಹೆಚ್ಚಿನ ಒತ್ತು ನೀಡಲಿದೆ’ ಎಂದು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ನಾಗಭೂಷಣ ಹಾವಣಗಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು