ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಯೂರಿಯಾ ಗೊಬ್ಬರಕ್ಕಾಗಿ ಮುಂದುವರಿದ ರೈತರ ಅಲೆದಾಟ

‘ಲಿಂಕೇಜ್‌’ ಇಲ್ಲದೇ ಸಿಗುತ್ತಿಲ್ಲ ಯೂರಿಯಾ
Last Updated 20 ಜುಲೈ 2022, 19:30 IST
ಅಕ್ಷರ ಗಾತ್ರ

ಮುಂಡಗೋಡ: ಒಂದು ವಾರ ಸುರಿದ ಮಳೆ, ಎರಡು ದಿನಗಳಿಂದ ಕಡಿಮೆಯಾಗಿದೆ. ಇದರಿಂದ ಗೋವಿನಜೋಳ ಹಾಗೂ ಭತ್ತ ಬೆಳೆಗಾರರಿಗೆ ಹೊಲಕ್ಕೆ ಗೊಬ್ಬರ ಹಾಕಲು ಬಿಡುವು ಸಿಕ್ಕಿದೆ. ಆದರೆ, ಯೂರಿಯಾ ಗೊಬ್ಬರಕ್ಕಾಗಿ ರೈತರು ಸೊಸೈಟಿಗಳಿಗೆ ಅಲೆದಾಡುವುದು ಮುಂದುವರಿದಿದೆ. ಲಿಂಕೇಜ್‌ ಇಲ್ಲದೇ ಯೂರಿಯಾ ಸಿಗುತ್ತಿಲ್ಲ ಎನ್ನುವ ಆರೋಪ ಬಲವಾಗಿ ಕೇಳಿಬರುತ್ತಿದೆ.

ಯೂರಿಯಾ ಗೊಬ್ಬರಕ್ಕಾಗಿ ರೈತರು ಬೆಳಿಗ್ಗೆಯಿಂದಲೇ ಮಾರಾಟ ಕೇಂದ್ರಗಳ ಮುಂದೆ ನಿಲ್ಲುತ್ತಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಲು ಕೆಲವೆಡೆ ಟೋಕನ್‌ ನೀಡಲಾಗುತ್ತಿದೆ. ಟೋಕನ್‌ ಪಡೆದರೂ ಗೊಬ್ಬರ ಸಿಗುತ್ತಿಲ್ಲ ಎಂಬ ಅಸಮಾಧಾನ ರೈತರದ್ದಾಗಿದೆ.

ಈ ನಡುವೆ, ಯೂರಿಯಾ ಜೊತೆ ಕೆಲವೆಡೆ ಲಿಂಕೇಜ್‌ ಆಗಿ ಇತರ ಗೊಬ್ಬರವನ್ನು ಖರೀದಿಸಬೇಕು ಎಂದು ಅಂಗಡಿಕಾರರ ಒತ್ತಾಯವು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಲಿಂಕೇಜ್‌ ಆಗಿ ನೀಡುವ ಬೇವಿನ ಹಿಂಡಿಯು ಬಿತ್ತನೆ ಸಮಯದಲ್ಲಾದರೆ ಉಪಯೋಗಕ್ಕೆ ಬರುತ್ತದೆ. ಗೋವಿನಜೋಳವು ಮಾರುದ್ದ ಬೆಳೆದಾಗ ಬೇವಿನಹಿಂಡಿ ಖರೀದಿಸಿ ಏನು ಮಾಡಬೇಕು ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಜಮಾಯಿಸಿದ ರೈತರು:

ಇಲ್ಲಿನ ಟಿ.ಎಸ್‌.ಎಸ್‌ ಗೊಬ್ಬರ ಮಾರಾಟ ಕೇಂದ್ರಕ್ಕೆ ಬುಧವಾರ ಹಲವು ರೈತರು ಯೂರಿಯಾ ಖರೀದಿಗೆಂದು ಬಂದಿದ್ದರು. ಆದರೆ, ಯೂರಿಯಾ ದಾಸ್ತಾನು ಇಲ್ಲ ಎಂದು ಮಾರಾಟಗಾರರು ಹೇಳಿದರು. ಇದರಿಂದ ಆಕ್ರೋಶಗೊಂಡ ರೈತರು, ಕೃಷಿ ಇಲಾಖೆ ಕಚೇರಿ ಮುಂದೆ ಜಮಾವಣೆಗೊಂಡು ಯೂರಿಯಾ ಬೇಕೆಂದು ಪಟ್ಟು ಹಿಡಿದರು.

‘ಬೆಳಿಗ್ಗೆಯಿಂದ ನೀರು, ಚಹಾ ಕುಡಿಯದೇ ಯೂರಿಯಾ ಗೊಬ್ಬರಕ್ಕಾಗಿ ಗಂಟೆಗಟ್ಟಲೆ ನಿಂತಿದ್ದೇವೆ. ಗೋದಾಮಿನಲ್ಲಿ ಗೊಬ್ಬರ ಇದ್ದರೂ ರೈತರಿಗೆ ಸಿಗುತ್ತಿಲ್ಲ. ಗೊಬ್ಬರ ಹಾಕಲು ಹದವಾದ ವಾತಾವರಣ ಇರುವಾಗ ಯೂರಿಯಾಕ್ಕಾಗಿ ಊಟ, ನೀರು ಬಿಟ್ಟು ಅಲೆದಾಡಬೇಕಾಗಿದೆ. ಪಕ್ಕದ ತಾಲ್ಲೂಕಿಗೆ ಇಲ್ಲಿನ ಗೊಬ್ಬರ ಹೋಗುತ್ತಿದೆ. ಈ ತಾಲ್ಲೂಕಿನ ರೈತರಿಗೆ ಯೂರಿಯಾ ಸಿಗುವ ವ್ಯವಸ್ಥೆ ಆಗಬೇಕು’ ಎಂದು ರೈತರಾದ ಮನೋಹರ, ರಾಮಚಂದ್ರ ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದರು.

ಅನ್ಯ ಕೆಲಸದ ಅಂಗವಾಗಿ ಹೊರಗಡೆ ಹೋಗಿದ್ದ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ, ರೈತರೊಂದಿಗೆ ಹಾಗೂ ಟಿ.ಎಸ್‌.ಎಸ್‌ ಗೊಬ್ಬರ ಮಾರಾಟ ಕೇಂದ್ರದ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಮಧ್ಯಾಹ್ನದ ನಂತರ ಇಲ್ಲಿ ಯೂರಿಯಾ ವಿತರಣೆಗೆ ಕ್ರಮ ಕೈಗೊಳ್ಳಲಾಯಿತು.

ಬಗೆಹರಿಯದ ಲಿಂಕೇಜ್‌ ಸಮಸ್ಯೆ:

‘ಯೂರಿಯಾ ಜೊತೆ ಲಿಂಕೇಜ್‌ ಆಗಿ (ಬೇವಿನಹಿಂಡಿ, ಜಿಂಕ್‌, ಪೊಟ್ಯಾಷ್, ಲಘು ಪೋಷಕಾಂಶಗಳು) ಇತರ ಗೊಬ್ಬರ, ದ್ರಾವಣ ನೀಡದಂತೆ ಕೃಷಿ ಸಚಿವರು ಸೂಚನೆ ನೀಡಿದ್ದಾರೆ. ಆದರೆ, ಹಲವು ಸೊಸೈಟಿಗಳಲ್ಲಿ ಎರಡು ಚೀಲ ಯೂರಿಯಾ ಗೊಬ್ಬರಕ್ಕೆ ಒಂದು ಚೀಲ ಲಿಂಕೇಜ್‌ ಗೊಬ್ಬರ ಖರೀದಿಸಲೇಬೇಕಾಗಿದೆ. ಇನ್ನೂ ಕೆಲವೆಡೆ ಐದು ಚೀಲ ಯೂರಿಯಾ ಜೊತೆ ಒಂದು ಚೀಲ ಲಿಂಕೇಜ್‌ ಖರೀದಿಸಬೇಕಾಗಿದೆ. ಲಿಂಕೇಜ್‌ ಬೇಡವೆಂದರೆ ಯೂರಿಯಾ ಇಲ್ಲ ಎನ್ನುತ್ತಿದ್ದಾರೆ.

‘ಎರಡು ಚೀಲ ಯೂರಿಯಾಗೆ ಇರುವ ದರಕ್ಕಿಂತ ಹೆಚ್ಚಿನ ದರ ಒಂದು ಚೀಲ ಲಿಂಕೇಜ್‌ ಗೊಬ್ಬರಕ್ಕಿದೆ. ಭತ್ತ, ಗೋವಿನ ಜೋಳ ಬೆಳೆದಿರುವ ರೈತರಿಗೆ ಲಿಂಕೇಜ್‌ ಗೊಬ್ಬರ ಉಪಯೋಗವಾಗುವುದಿಲ್ಲ. ಕೃಷಿ ಸಚಿವರ ಹಾಗೂ ಅಧಿಕಾರಿಯ ಸೂಚನೆ ಪಾಲನೆಯಾಗುತ್ತಿಲ್ಲ’ ಎಂದು ರೈತರಾದ ವಿ.ಎಂ.ಪಾಟೀಲ, ಕಲ್ಲಪ್ಪ, ವಿರೇಶ, ಪರುಶುರಾಮ ರಾಣಿಗೇರ ದೂರಿದ್ದಾರೆ.

‘ಲಿಂಕೇಜ್ ನೀಡಬಾರದು’:

‘ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಲ್ಲ ಲಿಂಕೇಜ್‌ ಗೊಬ್ಬರದ ಬಗ್ಗೆ ರೈತರಿಗೆ ಮನವರಿಕೆ ಮಾಡಿ ನೀಡಬಹುದು. ಆದರೆ, ಬಲವಂತದಿಂದ ನೀಡಬಾರದು. ಬಡ ಮತ್ತು ಸಣ್ಣ ರೈತರು 2– 3 ಚೀಲ ಯೂರಿಯಾ ಖರೀದಿಸಲು ಮುಂದಾದರೆ, ಅವರಿಗೆ ಯಾವುದೇ ಲಿಂಕೇಜ್‌ ಗೊಬ್ಬರ ನೀಡಬಾರದು. ಈ ಬಗ್ಗೆ ಎಲ್ಲ ಗೊಬ್ಬರ ಮಾರಾಟ ಕೇಂದ್ರದವರಿಗೆ ಸೂಚನೆ ನೀಡಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT