ಅಜಿತ ನಾಯಕ ಕೊಲೆ ಒಪ್ಪಿಕೊಂಡ ದೀಪಕ

7
ದಾಂಡೇಲಿ: ಆ.8ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಹಳಿಯಾಳ ಸಿವಿಲ್ ನ್ಯಾಯಾಲಯ

ಅಜಿತ ನಾಯಕ ಕೊಲೆ ಒಪ್ಪಿಕೊಂಡ ದೀಪಕ

Published:
Updated:
Deccan Herald

ದಾಂಡೇಲಿ: ನಗರದ ಹಿರಿಯ ವಕೀಲ ಅಜಿತ ನಾಯಕ ಅವರನ್ನು ತಾನೇ ಕೊಲೆ ಮಾಡಿದ್ದಾಗಿ ಬಂಧಿತ ಆರೋಪಿ ದೀಪಕ ಅಲಿಯಾಸ್ ಪಾಂಡುರಂಗ ಕಾಂಬಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೋಮವಾರ ಆತನನ್ನು ಯಲ್ಲಾಪುರದಲ್ಲಿ ಬಂಧಿಸಿದ್ದ ಪೊಲೀಸರು, ಹಳಿಯಾಳ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಿದರು. ನ್ಯಾಯಾಲಯದ ಆದೇಶದಂತೆ ಹೆಚ್ಚಿನ ತನಿಖೆಗೆ ಆ.8ರವರೆಗೆ ಕಸ್ಟಡಿಗೆ ಪಡೆದರು.

ಸ್ಥಳ ಮಹಜರು: ಇದಕ್ಕೂ ಮೊದಲು ಪೊಲೀಸರು, ಅಜಿತ ನಾಯಕ ಅವರ ಕೊಲೆ ನಡೆದ ಸ್ಥಳ ಮಹಜರು ಮಾಡಿದರು. ಆರೋಪಿಯು ಕೊಲೆ ಮಾಡಿದ ರೀತಿ, ಬಳಸಿದ ಆಯುಧ, ಅಲ್ಲಿಗೆ ಬರಲು ಬಳಸಿದ ದ್ವಿಚಕ್ರ ವಾಹನ, ನಂತರ ಓಡಿ ಹೋದ ಸ್ಥಳವನ್ನು ಪರಿಶೀಲಿಸಿದರು. ಕೊಲೆ ಮಾಡಲು ಬಳಸಿದ ಎಲ್ಲ ಉಪಕರಣಗಳನ್ನೂ ವಶಪಡಿಸಿಕೊಂಡರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಮೋಹನಪ್ರಸಾದ, ಸಿಪಿಐ ಅನೀಶ ಮುಜಾವರ ಹಾಗೂ ತನಿಖಾ ತಂಡದ ಅಧಿಕಾರಿಗಳು ಹಾಜರಿದ್ದರು. 

ಪೊಲೀಸರಿಗೆ ವ್ಯಾಪಕ ಶ್ಲಾಘನೆ: ಅಜಿತ ನಾಯಕ ಅವರ ಕೊಲೆಯ ಜಾಡನ್ನು ಬಿಡಿಸಿದ ಪೊಲೀಸ್ ಇಲಾಖೆಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ.ಎಂ.ಬ್ಯಾಕೋಡ ಅವರ ನೇತೃತ್ವದಲ್ಲಿ ಡಿವೈಎಸ್‌ಪಿ ಮೋಹನಪ್ರಸಾದ, ಸಿಪಿಐ ಅನೀಶ ಮುಜಾವರ ಮುಂದಾಳತ್ವ ವಹಿಸಿದ್ದರು.

ವಿಶೇಷ ತನಿಖಾ ತಂಡದ ಅಧಿಕಾರಿಗಳಾದ ಶರಣಗೌಡ ಪಾಟೀಲ, ರಂಗನಾಥ ನೀಲಮ್ಮನವರ, ಶ್ರೀಧರ ಹಾಗೂ ಸ್ಥಳೀಯ ಪೊಲೀಸರ ಶ್ರಮವನ್ನು ನಗರದ ಜನ ಶ್ಲಾಘಿಸಿದ್ದಾರೆ.

ಕಾರಿನ ಕೆಳಗಿತ್ತು ಕತ್ತಿ: ಅಜಿತ್‌ ನಾಯಕರನ್ನು ಕೊಲೆ ಮಾಡಿದ ಜೆ.ಎನ್.ರಸ್ತೆಯ ಸಂಡೆ ಮಾರ್ಕೆಟ್ ಎದುರಿನಲ್ಲಿರುವ ಅಜಿತ ನಾಯಕ ಅವರ ಕಚೇರಿಯ ಬಳಿಗೆ ಆರೋಪಿಯನ್ನು ಪೊಲೀಸರು ಕರೆ ತಂದಿದ್ದರು.

ಕೊಲೆ ಮಾಡಿದ ನಂತರ ಚಿಕನ್ ಮಾರ್ಕೆಟ್‌ಗೆ ಹೋಗುವ ಸಂದ್ರಿ ರಸ್ತೆಯಲ್ಲಿ ಪರಾರಿಯಾದ ಬಗೆಯನ್ನು ಆರೋಪಿ ವಿವರಿಸಿದ.  ಸಮೀಪದ ಮಸೀದಿ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿದ್ದ, ಕೆಟ್ಟುನಿಂತ ಕಾರೊಂದರ ಬಳಿಗೆ ಬಂದ. ಕೃತ್ಯಕ್ಕೆ ಬಳಸಲಾದ ಕತ್ತಿ ಹಾಗೂ ತಾನು ಧರಿಸಿದ್ದ ಜಾಕೆಟ್ ಅನ್ನು ಅದರ ಕೆಳಗೆ ಬಚ್ಚಿಟ್ಟಿದ್ದನ್ನು ಪೊಲೀಸರಿಗೆ ತೋರಿಸಿದ.ಈ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದರು. ಎಲ್ಲವನ್ನೂ ವಿಡಿಯೊ ಮಾಡಿದರು.

ಮುಖಂಡರೊಬ್ಬರ ಬಂಧನ?: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎನ್ನಲಾದ ದಲಿತ ಸಂಘಟನೆಯ ಮುಖಂಡರೊಬ್ಬರನ್ನು ಬಂಧಿಸಲಾಗಿದೆ  ಎಂಬ ಮಾಹಿತಿಯಿದೆ. ಆದರೆ, ತನಿಖೆ ಪ್ರಗತಿಯಲ್ಲಿ ಇರುವ ಕಾರಣ ಪೊಲೀಸರು ಖಚಿತಪಡಿಸಿಲ್ಲ. ಈ ಬಗ್ಗೆ ಗುರುವಾರ ಸಂಜೆಯೊಳಗಡೆ ಪೊಲೀಸರು ನೀಡುವ ಸಾಧ್ಯತೆಯಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !