ಸೋಮವಾರ, ಜನವರಿ 17, 2022
21 °C
ಬನವಾಸಿ: ಇಕ್ಕಟ್ಟಾದ ಗ್ರಾಮ ಚಾವಡಿಯಲ್ಲಿ ದಿನದೂಡುತ್ತಿರುವ ಅಧಿಕಾರಿಗಳು

ಉದ್ಘಾಟನೆ ಭಾಗ್ಯ ಕಾಣದ ನಾಡಕಚೇರಿ ಕಟ್ಟಡ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಹೊಸ ಕಟ್ಟಡ ನಿರ್ಮಾಣಗೊಂಡು ನಾಲ್ಕು ತಿಂಗಳು ಕಳೆದರೂ ಅದು ಉದ್ಘಾಟನೆ ಭಾಗ್ಯ ಕಂಡಿಲ್ಲ. ಇಕ್ಕಟ್ಟಾದ ಗ್ರಾಮ ಚಾವಡಿಯಲ್ಲಿ ಉಪತಹಶೀಲ್ದಾರ್ ಸೇರಿದಂತೆ ಇತರ ಸಿಬ್ಬಂದಿ ಕೆಲಸ ಮಾಡುವುದು ತಪ್ಪುತ್ತಿಲ್ಲ.

ಇದು ತಾಲ್ಲೂಕಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಬನವಾಸಿ ಹೋಬಳಿಯ ನಾಡಕಚೇರಿ ಸ್ಥಿತಿ. ಬನವಾಸಿ ನಾಡಕಚೇರಿಗೆ ಹೊಸ ಕಟ್ಟಡ ನಿರ್ಮಾಣಗೊಂಡು ನಾಲ್ಕು ತಿಂಗಳು ಕಳೆದರೂ ಅದು ಉದ್ಘಾಟನೆ ಭಾಗ್ಯ ಕಂಡಿಲ್ಲ ಎಂಬ ದೂರು ಸಾರ್ವಜನಿಕರದ್ದು.

ಬನವಾಸಿಯ ಹೃದಯ ಭಾಗದಲ್ಲೇ ನಾಡ ಕಚೇರಿಗೆ ₹18.5 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದೆ. ನೀರು, ವಿದ್ಯುತ್ ಸೌಕರ್ಯಗಳನ್ನೂ ಒದಗಿಸಲಾಗಿದೆ. ಆದರೆ, ಕಟ್ಟಡ ಬಳಕೆ ಮಾಡದೆ ಅದರ ಸುತ್ತ ಗಿಡಗಂಟಿಗಳು ಬೆಳೆದು ನಿಂತಿವೆ.

ಪ್ರತ್ಯೇಕ ಕಟ್ಟಡ ಇಲ್ಲದ ಕಾರಣ ನಾಡಕಚೇರಿ ಗ್ರಾಮ ಲೆಕ್ಕಾಧಿಕಾರಿ ಕಾರ್ಯನಿರ್ವಹಿಸುವ ಗ್ರಾಮ ಚಾವಡಿಯಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿದೆ. ಸಣ್ಣ ಕಟ್ಟಡದಲ್ಲಿ ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕ, ಇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕೆಲಸದ ನಿಮಿತ್ತ ಬರುವ ಜನರು ಇಕ್ಕಟ್ಟಿನ ಸ್ಥಳದಲ್ಲಿ ಸೇರುವಂತಾಗುತ್ತಿದೆ.

‘ಪ್ರತಿ ಬಾರಿ ಸಭೆಗಳಲ್ಲಿ ಬನವಾಸಿ ನಾಡಕಚೇರಿಗೆ ಪ್ರತ್ಯೇಕ ಕಟ್ಟಡ ನಿರ್ಮಿಸುವ ಪ್ರಸ್ತಾಪ ಇಡುತ್ತಿದ್ದೆ. ಕಂದಾಯ ಇಲಾಖೆಯಿಂದ ಅನುದಾನ ಮಂಜೂರು ಮಾಡುವವರೆಗೂ ಪಟ್ಟು ಬಿಟ್ಟಿರಲಿಲ್ಲ. ಈಗ ಹೊಸ ಕಟ್ಟಡ ನಿರ್ಮಾಣವಾದರೂ ಅದನ್ನು ಉದ್ಘಾಟಿಸಿ, ಬಳಕೆಗೆ ನೀಡಲು ನಿರ್ಲಕ್ಷ್ಯ ಉಂಟಾಗಿರುವುದು ಬೇಸರ ತಂದಿದೆ’ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಬೇಸರ ಹೊರಹಾಕಿದರು.

‘ಬನವಾಸಿ ಹೋಬಳಿ ವಿಸ್ತಾರವಾಗಿರುವ ಕಾರಣ ಪ್ರತಿದಿನ ನಾಡಕಚೇರಿ ಕೆಲಸಕ್ಕೆ ಹೆಚ್ಚಿನ ಜನರು ತೆರಳುತ್ತಾರೆ. ಈಗಿರುವ ಕಟ್ಟಡದಲ್ಲಿ ಹೆಚ್ಚು ಜನ ಸೇರುವುದು ಕಷ್ಟ. ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಜನರಿಗೂ ಅನುಕೂಲವಾಗಬಹುದು. ಕಡತಗಳನ್ನು ಜೋಪಾನವಾಗಿಟ್ಟುಕೊಳ್ಳಲು ಉತ್ತಮ ಸ್ಥಳಾವಕಾಶ ಇಲಾಖೆಗೂ ಒದಗುತ್ತದೆ’ ಎಂದು ಹೇಳಿದರು.

ಅಧಿಕಾರಿಗಳ ಹಾಜರಾತಿಯೇ ಅಪರೂಪ:

‘ಬನವಾಸಿ ನಾಡ ಕಚೇರಿಯಲ್ಲಿ ಅಧಿಕಾರಿಗಳ ಹಾಜರಾತಿ ಕಾಣುವುದೇ ಅಪರೂಪ. ಇದರಿಂದ ವೃದ್ಧಾಪ್ಯ ವೇತನವೂ ಸೇರಿದಂತೆ ಎಲ್ಲ ಕೆಲಸಕ್ಕೆ ಅಡಚಣೆಯಾಗುತ್ತಿದೆ. ಉಪತಹಶೀಲ್ದಾರ್ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿವರೆಗೆ ಎಲ್ಲರೂ ಕಚೇರಿಗೆ ಆಗೊಮ್ಮೆ ಈಗೊಮ್ಮೆ ಹಾಜರಾಗುತ್ತಾರೆ’ ಎಂದು ಸ್ಥಳೀಯರಾದ ಸದಾನಂದ, ವೀರೇಶ, ಪರಶುರಾಮ ಇನ್ನಿತರರು ಆರೋಪಿಸಿದರು.

‘ಸಿಬ್ಬಂದಿ ಕೊರತೆ ಕಾರಣ ನಾಡಕಚೇರಿ ಹೊರತಾಗಿ ಮಿನಿ ವಿಧಾನಸೌಧದಲ್ಲೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಇದೆ. ತಾಲ್ಲೂಕಿನ ಬಹುತೇಕ ಗ್ರಾಮ ಲೆಕ್ಕಾಧಿಕಾರಿಗಳಿಗೆ ಎರಡು, ಮೂರು ಗ್ರಾಮಗಳ ಹೆಚ್ಚುವರಿ ಪ್ರಭಾರವೂ ಇದೆ. ಅದನ್ನು ನಿಭಾಯಿಸಬೇಕಿರುವುದರಿಂದ ಎಲ್ಲ ಸಮಯದಲ್ಲಿ ಹಾಜರಾತಿ ಕಷ್ಟ’ ಎಂಬುದು ಅಧಿಕಾರಿಯೊಬ್ಬರ ಪ್ರತಿಕ್ರಿಯೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.