ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕನ್ನಡ: ಹಾಲ್ನೊರೆ ಚೆಲ್ಲಿ ಮುನ್ನುಗ್ಗುವ ‘ನಗೆ’

ದೇವಳಮಕ್ಕಿ ಗ್ರಾಮದಿಂದ ಮಚ್ಚಳ್ಳಿಗೆ ಸಾಗುವಾಗ ಹರಿಯುವ ಹಳ್ಳದ ಸೌಂದರ್ಯ
Last Updated 27 ಜೂನ್ 2020, 19:30 IST
ಅಕ್ಷರ ಗಾತ್ರ

ಕಾರವಾರ: ಮಳೆಗಾಲ ಶುರುವಾದ ಕೂಡಲೇ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹತ್ತಾರು ತೊರೆಗಳು, ಝರಿಗಳು ಜೀವ ತಳೆಯುತ್ತವೆ. ಹಳ್ಳಗಳು ಜಲಪಾತಗಳಾಗಿ ಹಾಲ್ನೊರೆ ಸುರಿಸುತ್ತ ಧುಮ್ಮಿಕ್ಕುತ್ತವೆ.

ಇವುಗಳ ಸಾಲಿನಲ್ಲಿ ತಾಲ್ಲೂಕಿನ ದೇವಳಮಕ್ಕಿ ಗ್ರಾಮದ ನಗೆ ಹಳ್ಳದ ಜಲಧಾರೆಯೂ ಪ್ರಮುಖವಾಗಿದೆ. ನಗೆ ಊರಿನಿಂದ ಸುಮಾರುಮೂರುಕಿಲೋಮೀಟರ್ ದೂರ ಬೆಟ್ಟದಲ್ಲಿ ಕಾಡಿನೊಳಗೆ ಸಾಗಿದಾಗ ದಾರಿಯ ಎಡ ಭಾಗದಲ್ಲಿ ನೀರು ಭೋರ್ಗರೆಯುತ್ತದೆ. ಮಳೆಗಾಲ ಪೂರ್ತಿ ಅಬ್ಬರಿಸುವ ಈ ಹಳ್ಳಕ್ಕೆ ಇಡೀ ಕಾಡಿನಲ್ಲಿ ಬಿದ್ದ ಮಳೆ ನೀರು ಬಂದು ಸೇರುತ್ತದೆ.

ಬೆಟ್ಟದ ಕೆಳಗೆತಣ್ಣಗೆ ಹರಿಯುವ ಹಳ್ಳದ ರೌದ್ರಾವತಾರವು ಕಾಡಿನ ಒಳಹೊಕ್ಕ ಬಳಿಕವೇ ಅರಿವಿಗೆ ಬರುತ್ತದೆ. ದೊಡ್ಡ ದೊಡ್ಡ ಬಂಡೆಗಳನ್ನು ಸೀಳಿಕೊಂಡು ಸಾಗುವ ನೀರು, ಹಲವು ಟಿಸಿಲುಗಳಾಗಿ ಭಾರಿ ವೇಗದಿಂದ ಹರಿಯುತ್ತದೆ. ಬೆಟ್ಟದ ಅರ್ಧ ಭಾಗ ತಲುಪುತ್ತಿದ್ದಂತೆ ಸ್ವಲ್ಪ ಸಮತಟ್ಟಾದ ಜಾಗ ಸಿಗುತ್ತದೆ. ಚಾರಣಪ್ರಿಯರು ತಮ್ಮೊಂದಿಗೆ ತಂದ ಉಪಾಹಾರವನ್ನು ಇಲ್ಲಿ ಸ್ವೀಕರಿಸಿ ಮುಂದುವರಿಯಬಹುದು.

ಬೆಟ್ಟದ ಮೇಲಿರುವ ಕುಗ್ರಾಮ ಮಚ್ಚಳ್ಳಿ, ಅದರಾಚೆ ಇರುವ ಮುದಗಾ ಭಾಗದ ಜನರಿಗೆ ನಗೆ, ಕೋವೆ ಮುಂತಾದ ಊರುಗಳಿಗೆ ಇದೇ ದಾರಿಯಲ್ಲಿ ನಡೆದುಕೊಂಡು ಬರಬೇಕು. ಸುಮಾರು ಏಳು ಕಿಲೋಮೀಟರ್ ಕಡಿದಾದ ದಾರಿಯಲ್ಲಿ ಹೆಜ್ಜೆ ಇಡುತ್ತಾ ಸಾಗಬೇಕು. ದಟ್ಟವಾದ ಕಾನನದ ಮಧ್ಯೆ ದಾರಿ ಇರುವ ಕಾರಣ, ಕಾಡುಪ್ರಾಣಿಗಳು, ಕ್ರಿಮಿಕೀಟಗಳ ಬಗ್ಗೆಯೂ ಗಮನ ಹರಿಸುವುದು ಅನಿವಾರ್ಯ.

‘ಇದು ನಾವು ನಿತ್ಯವೂ ಸಂಚರಿಸುವ ದಾರಿ. ಕಾಡಿನ ಮಧ್ಯೆ ಸಾಗುವಾಗ ಸಿಗುವ ಇಂತಹ ಪ್ರಕೃತಿ ಸೌಂದರ್ಯಗಳು, ಹಕ್ಕಿಗಳ ಕೂಗಿನಿಂದದಾರಿ ಸವೆದಿದ್ದೇ ತಿಳಿಯುವುದಿಲ್ಲ’ ಎನ್ನುತ್ತಾರೆ ಮಚ್ಚಳ್ಳಿಯ ರೇಣು ಗೌಡ.

ಸಾಕಷ್ಟು ಎಚ್ಚರಿಕೆ ಅಗತ್ಯ:ನಗೆ ಹಳ್ಳದ ಜಲಪಾತವು ಅತ್ಯಂತ ಸುರಕ್ಷಿತ ಕಾಡಿನ ಮಧ್ಯೆ ಇದೆ. ಆದ್ದರಿಂದ ಅಲ್ಲಿಗೆ ಚಾರಣ ಮಾಡುವವರು ಪ್ಲಾಸ್ಟಿಕ್‌ನಂತಹ ತ್ಯಾಜ್ಯಗಳನ್ನು ಎಸೆಯಬಾರದು. ಸೂಕ್ಷ್ಮ ಅರಣ್ಯ ಪ್ರದೇಶವಾಗಿರುವ ಕಾರಣ ಅಲ್ಲಿ ಕಟ್ಟಿಗೆ, ತರಗೆಲೆಗೆ ಬೆಂಕಿ ಹಚ್ಚುವ ಕಾರ್ಯ ಮಾಡಬಾರದು. ವೇಗವಾಗಿ ಗಾಳಿಯೂ ಬೀಸುವುದರಿಂದ ಅಪಾಯಕಾರಿಯಾಗಬಹುದು.

ಒಂದುವೇಳೆ, ಬಂಡೆಗೆ ಕಾಲಿಟ್ಟವರು ಬಿದ್ದು ಪೆಟ್ಟಾದರೆ ತಕ್ಷಣ ಚಿಕಿತ್ಸೆ ಕೊಡಿಸಲು ಬೇಕಾದ ಸೌಲಭ್ಯವೂ ಸಮೀಪದಲ್ಲಿ ಸಿಗುವುದಿಲ್ಲ. ಅವರನ್ನು ಜೊತೆಗಿದ್ದವರು ಹೆಗಲ ಮೇಲೆ ಹೊತ್ತುಕೊಂಡು ಪುನಃ ಬೆಟ್ಟದ ಬುಡಕ್ಕೇ ಕರೆದುಕೊಂಡು ಬರಬೇಕು. ನೀರು ರಭಸವಾಗಿ ಹರಿಯುವ ಕಾರಣ ಬಿದ್ದವರು ಕೊಚ್ಚಿಕೊಂಡು ಹೋಗುವ ಸಾಧ್ಯತೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT