ಶನಿವಾರ, ಡಿಸೆಂಬರ್ 14, 2019
24 °C
ಶಿವರಾಮ ಹೆಬ್ಬಾರ್ ನಾಮಪತ್ರ ಸಲ್ಲಿಕೆಯ ಸಮಾವೇಶದಲ್ಲಿ ನಳಿನ್‌ಕುಮಾರ್ ಕಟೀಲ್ ಹೇಳಿಕೆ

ರಾಹುಲ್ ಗಾಂಧಿ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ‘ಯಲ್ಲಾಪುರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಜನರಿಲ್ಲ. ಹೊರಗಿನಿಂದ ಆಮದು ಮಾಡಿಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯೇ ಬಂದು ಸ್ಪರ್ಧಿಸಿದರೂ ಕಾಂಗ್ರೆಸ್‌ ಗೆಲ್ಲುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ ಹೆಬ್ಬಾರ್ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಕಾಂಗ್ರೆಸ್‌ನಲ್ಲಿ ಏಕಚಕ್ರಾಧಿಪತ್ಯದ ಆಡಳಿತ ನಡೆಯುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಲ್ಲವಾಗಿದ್ದಾರೆ. ಪಕ್ಷದ ಹಿರಿಯರೆಲ್ಲ ಹೊರಹೋಗಿದ್ದಾರೆ. ಕೆಲವರು ಕೋಪದಿಂದ ಮನೆಯಲ್ಲಿ ಕುಳಿತಿದ್ದಾರೆ. ಇನ್ನು ಕೆಲವರು ಜೈಲಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ಜೊತೆ ಪ್ರಚಾರಕ್ಕೆ ಬರುವುದಿಲ್ಲ ಎನ್ನುವವರು ಹಲವರಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಕಾಂಗ್ರೆಸ್ ಪಕ್ಷ ಇದೆ. ಕೇಂದ್ರದಂತೆ ಕರ್ನಾಟಕದಲ್ಲೂ ವಿರೋಧ ಪಕ್ಷವಾಗಲು ಕಾಂಗ್ರೆಸ್ ನಾಲಾಯಕ್ ಆಗುವ ಸ್ಥಿತಿ ಇದೆ’ ಎಂದು ಟೀಕಿಸಿದರು.

‘ಯಡಿಯೂರಪ್ಪ ಈ ರಾಜ್ಯದ ಬಡವರ ಕಲ್ಯಾಣದ ಬಗ್ಗೆ ಚಿಂತನೆ ಮಾಡಿದವರು. ಮೊದಲ ಬಾರಿ ಕೃಷಿ ಬಜೆಟ್ ಮಂಡಿಸಿದವರು. ಹೀಗಾಗಿ ರಾಜ್ಯದ ಜನರು ಅವರೇ ಮುಖ್ಯಮಂತ್ರಿ ಆಗಲೆಂದು ಬಯಸಿದರು. ನೆರೆ ಮತ್ತು ಬರದ ಸಂದರ್ಭವನ್ನು ಸಮರ್ಥವಾಗಿ ನಿರ್ವಹಿಸಿರುವ ಯಡಿಯೂರಪ್ಪ, ಮೂರು ತಿಂಗಳುಗಳಲ್ಲಿ ಯಲ್ಲಾಪುರ ಕ್ಷೇತ್ರಕ್ಕೆ ₹ 365 ಕೋಟಿ ಅನುದಾನ ನೀಡಿದ್ದಾರೆ’ ಎಂದು ಮಾತಿನುದ್ದಕ್ಕೂ ಮುಖ್ಯಮಂತ್ರಿಯನ್ನು ಹೊಗಳಿದರು.

ಸಂಸದ ಅನಂತಕುಮಾರ್ ಹೆಗಡೆ ಮಾತನಾಡಿ, ‘ನಾವು ಹೋಗುವ ದಾರಿ ಒಮ್ಮುಖವಾಗಿರಬೇಕು. ಎದುರಿಗೆ ಯಾರೂ ಇರಬಾರದು ಎಂದು ಬಹಳ ಹಿಂದೆಯೇ ಹೇಳಿದ್ದೆ. ಯಲ್ಲಾಪುರ ಮತ್ತು ಹಳಿಯಾಳ ಎರಡು ಕ್ಷೇತರ ಮಾತ್ರ ಬಿಟ್ಟು ಹೋಗಿದ್ದವು ಎನ್ನುವ ಬೇಸರವಿತ್ತು. ಯಲ್ಲಾಪುರದ ದಾರಿ ಸುಗಮವಾಯಿತು. ಇನ್ನು ಹಳಿಯಾಳ ಒಂದು ಉಳಿದಿದೆ. ಇನ್ನೊಬ್ಬರು ಉಳಿದಿದ್ದಾರೆ. ಒಬ್ಬೊಬ್ಬರನ್ನಾಗಿಯೇ ಬಿಜೆಪಿಗೆ ಕರೆದುಕೊಳ್ಳುತ್ತೇವೆ. ವೈಚಾರಿಕ ಸಂಘರ್ಷದ ಕಾರಣಕ್ಕಾಗಿ ಕಾಂಗ್ರೆಸ್ ಈ ದೇಶದಲ್ಲಿ ಕಾಂಗ್ರೆಸ್ ಇರಬಾರದು’ ಎಂದರು.

ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ಹರೀಶ ಪೂಂಜಾ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ರೇಖಾ ಹೆಗಡೆ ಇದ್ದರು. ಶಿರಸಿ ತಾಲ್ಲೂಕಿನ ಬನವಾಸಿ, ಮುಂಡಗೋಡ, ಯಲ್ಲಾಪುರ ಸುತ್ತಮುತ್ತಲಿನ ಸಹಸ್ರಾರು ಜನರು ಸಮಾವೇಶದಲ್ಲಿ ಭಾಗಹಿಸಿದ್ದರು.

ನಾಮಪತ್ರ ಸಲ್ಲಿಕೆ: ಸಭೆಯ ಮಧ್ಯೆ ಎದ್ದು ಹೋದ ಶಿವರಾಮ ಹೆಬ್ಬಾರ್ ಅವರು, ಮಧ್ಯಾಹ್ನ 1 ಗಂಟೆಗೆ ಪತ್ನಿ ವನಜಾಕ್ಷಿ ಹೆಬ್ಬಾರ್, ವಿ.ಎಸ್.ಪಾಟೀಲ, ಎಲ್‌.ಟಿ.ಪಾಟೀಲ, ದ್ಯಾಮಣ್ಣ ದೊಡ್ಮನಿ ಜೊತೆಗೂಡಿ ನಾಮಪತ್ರ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು