ಶನಿವಾರ, ಅಕ್ಟೋಬರ್ 19, 2019
27 °C

ಸಿದ್ದರಾಮಯ್ಯ ವಿಲನ್, ಕುಮಾರಸ್ವಾಮಿ ಸೈಡ್ ಆ್ಯಕ್ಟರ್‌: ನಳಿನ್‌ಕುಮಾರ್ ಕಟೀಲ್ ಟೀಕೆ

Published:
Updated:
Prajavani

ಶಿರಸಿ: ಸಿದ್ದರಾಮಯ್ಯ ವಿಲನ್ ಮುಖ್ಯಮಂತ್ರಿಯಾಗಿದ್ದರೆ, ಎಚ್.ಡಿ.ಕುಮಾರಸ್ವಾಮಿ ಸೈಡ್ ಆ್ಯಕ್ಟರ್‌ ಆಗಿದ್ದರು ಎನ್ನುವ ಮೂಲಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಟೀಕಿಸಿದರು.

ಪಕ್ಷ ಸಂಘಟನೆ ಉದ್ದೇಶದಿಂದ ಬುಧವಾರ ನಗರಕ್ಕೆ ಭೇಟಿ ನೀಡಿದ್ದ ಅವರು, ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ‘ಲಿಂಗಾಯತ ಸಮಾಜವನ್ನು ಒಡೆಯುವ ಕಾರ್ಯ ಮಾಡಿದ, ಯಾರಿಗೂ ಬೇಡದ ಟಿಪ್ಪು ಜಯಂತಿ ಆಚರಿಸಿದ, ಹಿಂದೂ ಕಾರ್ಯಕರ್ತರ ಹತ್ಯಗೆ ರಾಜಕೀಯ ಬಣ್ಣ ಲೇಪಿಸಿದ ಇವರಿಗೆ ವಿಲನ್ ಎನ್ನದೇ ಇನ್ನೇನು ಹೇಳಬೇಕು ? ಪಾರ್ಟ್‌ ಟೈಮ್ ಮುಖ್ಯಮಂತ್ರಿಯಾಗಿದ್ದ ಇನ್ನೊಬ್ಬರು ಅಧಿಕಾರಾವಧಿಯಲ್ಲಿ ತಾಜ್‌ ಹೋಟೆಲ್ ಬಿಟ್ಟು ಹೊರಗೆ ಬಂದೇ ಇಲ್ಲ. ಇವರು ಯಾರು’ ಎಂದು ಪ್ರಶ್ನಿಸುವ ಮೂಲಕ ಕಾರ್ಯಕರ್ತರ ಬಾಯಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹೆಸರನ್ನು ಹೇಳಿಸಿದರು.

‘ಅಧಿಕಾರ ನಡೆಸುವುದು ಬಿಜೆಪಿಯ ಗುರಿಯಲ್ಲ. ನಾವು ವಿಚಾರಧಾರೆ ಮತ್ತು ಕಾರ್ಯಪದ್ಧತಿಯಲ್ಲಿ ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ಈ ರಾಷ್ಟ್ರದಲ್ಲಿ ಪರಿವರ್ತನೆ ತಂದು ಭಾರತವನ್ನು ಜಗದ್ಗುರು ಸ್ಥಾನಕ್ಕೇರಿಸುವುದು ಬಿಜೆಪಿ ಗುರಿಯಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು, ಕೇರಳದ ಗ್ರಾಮವೊಂದಕ್ಕೆ ಹೋಗಿ ಅಲ್ಲಿನ ಮತಗಟ್ಟೆ ಸಮಿತಿಯಲ್ಲಿ ಬಿಜೆಪಿ ಧ್ವಜಾರೋಹಣ ಮಾಡಿದರು. ಇನ್ನು ಎರಡು ವರ್ಷಗಳಲ್ಲಿ ಕೇರಳದ ಮನೆ–ಮನೆಯಲ್ಲಿ ಬಿಜೆಪಿ ಬಾವುಟ ಹಾರಾಡಲಿದೆ’ ಎಂದು ವಿಶ್ವಾಸದಿಂದ ಹೇಳಿದರು.

‘ಈ ದೇಶದಲ್ಲಿರುವ 64 ಪಕ್ಷಗಳಲ್ಲಿ 63 ಪಕ್ಷಗಳು ಸಿದ್ಧಾಂತ ಮರೆತಿವೆ. ಬಿಜೆಪಿ ಮಾತ್ರ ಸಿದ್ಧಾಂತವನ್ನು ಅನುಸರಿಸುತ್ತಿದೆ. ಈ ದೇಶದಲ್ಲಿ ಬದಲಾವಣೆ ಬಿಜೆಪಿಯಿಂದ ಮಾತ್ರ ಸಾಧ್ಯವಿದೆ. ಕಾಶ್ಮೀರವನ್ನು ಸ್ವತಂತ್ರಗೊಳಿಸಿದ್ದು ಬಿಜೆಪಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ. ಕರ್ನಾಟಕದಲ್ಲೂ ಯಡಿಯೂರಪ್ಪ ಅನೇಕ ಹೊಸ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಪರಿವರ್ತನೆಯ ಗುರಿ ಹೊಂದಿರುವ ಬಿಜೆಪಿಯನ್ನು ಮುಂದಿನ ಕರ್ನಾಟಕ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನದಿಂದ ಗೆಲ್ಲಿಸಬೇಕು’ ಎನ್ನುವ ಮೂಲಕ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯಬಹುದಾದ ಸುಳಿವು ನೀಡಿದರು.

ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನೀಲ್ ನಾಯ್ಕ, ಪಕ್ಷದ ಪ್ರಮುಖರಾದ ಮಹೇಶ ತೆಂಗಿನಕಾಯಿ, ಗಿರೀಶ ಪಟೇಲ್, ವಿನೋದ ಪ್ರಭು, ವಿ.ಎಸ್.ಪಾಟೀಲ, ವಿವೇಕಾನಂದ ವೈದ್ಯ, ಗಂಗಾಧರ ಭಟ್ಟ, ಸುನೀಲ್ ಹೆಗಡೆ, ಎಂ.ಜಿ.ನಾಯ್ಕ, ಕೃಷ್ಣ ಎಸಳೆ ಇದ್ದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಸ್ವಾಗತಿಸಿದರು. ಆರ್.ಡಿ.ಹೆಗಡೆ ನಿರೂಪಿಸಿದರು.

 

Post Comments (+)