ಭಾನುವಾರ, ಜೂನ್ 26, 2022
23 °C
‘ಕಾಂಗ್ರೆಸ್‌ನವರಿಂದ ವಿನಾ ಕಾರಣ ಅಪಪ್ರಚಾರ’

ನಾರಾಯಣ ಗುರು ಪಾಠ ಕೈಬಿಡುವುದಿಲ್ಲ‌: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ‘ಶಾಲಾ ಪಠ್ಯಕ್ರಮದಿಂದ ನಾರಾಯಣ ಗುರು ಪಾಠವನ್ನು ಕೈಬಿಡಲಾಗುತ್ತಿದೆ ಎನ್ನುವ ವಿಷಯ ಸತ್ಯಕ್ಕೆ ದೂರವಾಗಿದೆ. ಸರ್ಕಾರ ತೀರ್ಮಾನ ಮಾಡದೆ ಕಾಂಗ್ರೆಸ್‌ನವರು ವಿನಾ ಕಾರಣ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

ಪಟ್ಟಣದ ಬಿ.ಜೆ.ಪಿ ಕಚೇರಿಯಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದರು.

‘ರಾಜ್ಯ ಬಿ.ಜೆ.ಪಿ ಸರ್ಕಾರವು ನಾರಾಯಣ ಗುರು ಹೆಸರಿನಲ್ಲಿ ವಸತಿಯುತ ಶಾಲೆ ಪ್ರಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶಿವಗಿರಿ ಕೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿಗೆ ₹ 70 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಹಾಗಿದ್ದರೂ ನಾರಾಯಣ ಗುರು ಬಗ್ಗೆ ಬಿ.ಜೆ.ಪಿ ಗೌರವ ಭಾವನೆ ಹೊಂದಿಲ್ಲ ಎಂದು ಕಾಂಗ್ರೆಸಿನವರು ಅಪಪ್ರಚಾರ ಮಾಡುವುದು ಸರಿಯಲ್ಲ’ ಎಂದರು.

‘ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ಸಫಲವಾಗಿದೆ. ಆದರೆ, ಕಾಂಗ್ರೆಸಿನವರು ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆ. ವಿರೋಧಿಸುವಾಗ ಅದಕ್ಕೆ ಕಾರಣ ಹೇಳುತ್ತಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಅಪಚಾರ ಆಗದ ಹಾಗೆ ಟೀಕೆ ಮಾಡಬೇಕು. ನಿಮ್ಮ ವಿರೋಧದ ಕಾರಣವನ್ನು ಜನರಿಗೆ ತಿಳಿಸಬೇಕು’ ಎಂದು ಹೇಳಿದರು.

ಆರ್.ಎಸ್.ಎಸ್ ಬಗ್ಗೆ ಟೀಕಿಸಿದ್ದ ವಿರೋಧ ಪರಿಷತ್ ನಾಯಕ ಬಿ.ಕೆ.ಹರಿಪ್ರಸಾದ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ‘ಆರ್.ಎಸ್.ಎಸ್. ಸಂಘಟನೆಯು ಭಾರತ– ಚೀನಾ ಯುದ್ಧದ ಸಂದರ್ಭದಲ್ಲಿ ಸೈನಿಕರಂತೆ ನಿಂತು ದೇಶವನ್ನು ರಕ್ಷಣೆ ಮಾಡಿತ್ತು. ಅದನ್ನು ಗುರುತಿಸಿ ಅಂದಿನ ಪ್ರಧಾನಮಂತ್ರಿ ಜವಾಹರ ಲಾಲ್ ನೆಹರೂ ಅವರು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಥಸಂಚಲನ ನಡೆಸಲು ಆರ್‌.ಎಸ್.ಎಸ್.ಗೆ ಆಹ್ವಾನ ನೀಡಿದ್ದರು. ನೆಹರೂ ಅವರನ್ನು ಕಾಂಗ್ರೆಸ್‌ನವರು ಎಂದೂ ನಂಬುವುದಾದರೆ ಆರ್.ಎಸ್.ಎಸ್.ಗೂ ಗೌರವ ನೀಡಲೇಬೇಕು’ ಎಂದರು.

‘ಸೂಚನೆ ನೀಡಲಾಗಿದೆ’:

‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೆ ಒಳಗಾದವರಿಗೆ ಸ್ಪಂದಿಸಲು ಚುನಾವಣೆ ನೀತಿ ಸಂಹಿತೆಯಿಂದ ಸಾಧ್ಯವಾಗುತ್ತಿಲ್ಲ. ಆದರೂ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಹಾನಿಗೊಳಗಾದವರಿಗೆ ತ್ವರಿತ ಪರಿಹಾರ ನೀಡುವಂತೆ ಸೂಚಿಸಲಾಗಿದೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶಾಸಕ ಸುನೀಲ ನಾಯ್ಕ, ಖಾದಿ ಗ್ರಾಮೋದ್ಯೋಗ ಮಂಡಳಿ ಸದಸ್ಯ ಮುಕುಂದ ನಾಯ್ಕ, ಕಟ್ಟಡ ಕಾರ್ಮಿಕ ಮಂಡಳಿ ನಿರ್ದೇಶಕಿ ಶಿವಾನಿ ಶಾಂತರಾಂ, ಭಟ್ಕಳ ಬಿ.ಜೆ.ಪಿ ಮಂಡಳ ಅಧ್ಯಕ್ಷ ಸುಬ್ರಾಯ ದೇವಾಡಿಗ, ರವಿ ನಾಯ್ಕ ಜಾಲಿ, ವಕೀಲ ರಾಜೇಶ ನಾಯ್ಕ, ಸುಬ್ರಾಯ ನಾಯ್ಕ, ಮೋಹನ ನಾಯ್ಕ, ಭಾಸ್ಕರ ದೈಮನೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು