ಭಾನುವಾರ, ಮೇ 22, 2022
25 °C
ಮತದಾರರ ದಿನಾಚರಣೆಯಲ್ಲಿ ನ್ಯಾಯಾಧೀಶ ಸಿ.ರಾಜಶೇಖರ ಕಿವಿಮಾತು

ಮತದಾನ ಪ್ರಕ್ರಿಯೆಯಲ್ಲಿ ಸದಾ ಭಾಗವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ರಾಜಕೀಯ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ರಾಜಕಾರಣಿಯೇ ಆಗಬೇಕಾಗಿಲ್ಲ. ಮತದಾನ ಮಾಡಿ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು ಕೂಡ ಅದರ ಭಾಗವೇ ಆಗಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ.ರಾಜಶೇಖರ ಹೇಳಿದರು. 

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘12ನೇ ರಾಷ್ಟ್ರೀಯ ಮತದಾರರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೊಸದಾಗಿ ಚುನಾವಣಾ ಗುರುತಿನ ಚೀಟಿ ಪಡೆದ ಯುವ ಮತದಾರರು ಪ್ರಚಾರದ ಗೀಳಿಗೆ ಒಳಗಾಗಬಾರದು. ಮತದಾನ ಪ್ರಕ್ರಿಯೆಗಳಲ್ಲಿ ನಿರಂತವಾಗಿ ಭಾಗವಹಿಸಬೇಕು. ಪ್ರತಿಯೊಬ್ಬರೂ ಈ ರೀತಿ ಭಾಗಿಯಾದಾಗ ಮಾತ್ರ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ಒಳ್ಳೆಯ ಆಡಳಿತ ಕಾಣಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನವು ಉತ್ತಮ ವೇದಿಕೆಯಾಗಿದೆ. ಮತ ಚಲಾಯಿಸುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದೆ. ಹಕ್ಕುಗಳ ಬಗ್ಗೆ ಮಾತನಾಡುವಾಗ ಕರ್ತವ್ಯಗಳನ್ನು ನಿಭಾಯಿಸುವುದು ಕೂಡಾ ಮುಖ್ಯವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾತನಾಡಿ, ‘ಇತರ ರಾಷ್ಟ್ರಗಳಲ್ಲಿ ಅನೇಕ ಹೋರಾಟ ನಡೆಸಿದ ನಂತರವೇ ಜನಸಾಮಾನ್ಯರು, ಮಹಿಳೆಯರು, ಕಪ್ಪು ವರ್ಣೀಯರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಲಾಯಿತು. ಆದರೆ, ನಮ್ಮ ದೇಶದ ಸಂವಿಧಾನವು ಪ್ರತಿ ಪ್ರಜೆಗೂ ಮತದಾನದ ಅವಕಾಶ ನೀಡಿದೆ. ಯಾವುದೇ ಹೋರಾಟವಿಲ್ಲದೇ ಈ ಹಕ್ಕು ಸಿಕ್ಕಿರುವ ಅದರ ಮಹತ್ವವನ್ನು ಜನ ಮರೆಯುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಚುನಾವಣಾ ಕಾರ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶೀಲಾ ನಾಯ್ಕ, ಸಂತೋಷ ಗಾಂವಕರ್, ಸುಮಂಗಲಾ ನಾಯ್ಕ, ರಾಜಾಸಾಬ್, ಮಹಾದೇವ ರಾಣೆ, ಮನೋಜ್ ಶೆಟ್ಟಿ, ವೀಣಾ ಹೆಬ್ಬಾರ, ಲಂಬೋದರ ಪಟಗಾರ್, ಗೀತಾ ಜಾಧವ್, ಕೇಶವ ನಾಯ್ಕ, ಬಿ.ಕೆ ಜೋಶಿ ಮತ್ತು ಕಿರಣ ಬಿ.ಜೆಕ್ಲಿ ಇವರನ್ನು ಸನ್ಮಾನಿಸಲಾಯಿತು.

ಬಹುಮಾನ ವಿಜೇತರು:

ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಭಿತ್ತಿ ಚಿತ್ರ:

ಓಂಕಾರ ನಾಯ್ಕ (ಪ್ರಥಮ), ಸ್ನೇಹಾ ರಾಣೆ (ದ್ವಿತೀಯ), ಶಿವಂ ರಾಯ್ಕರ್ (ತೃತೀಯ).

ಇಂಗ್ಲಿಷ್ ಪ್ರಬಂಧ:

ರತ್ನೇಶ್ ಶಿರೋಡ್ಕರ್ (ಪ್ರಥಮ), ಸಂಡ್ರಾ ಫರ್ನಾಂಡಿಸ್ (ದ್ವಿತೀಯ), ಮಂಥನ್ ನಾಯ್ಕ (ತೃತೀಯ).

ಕನ್ನಡ ಪ್ರಬಂಧ:

ದೀಪಾಲಿ ನಾಯ್ಕ (ಪ್ರಥಮ), ಸಹನಾ.ಎಂ.ಗೌಡ (ದ್ವಿತೀಯ), ಸ್ವಪ್ನಿಲ್ ಮಡಿವಾಳ (ತೃತೀಯ).

ಹಿಂದೂ ಹೈಸ್ಕೂಲ್‍ನ ಮುಖ್ಯ ಶಿಕ್ಷಕ ಅರುಣ ರಾಣೆ ಹಾಗೂ ಸಂಗಡಿಗರು ರಾಷ್ಟ್ರಗೀತೆ, ನಾಡಗೀತೆ ಹಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆ ಬೋಧಿಸಿದರು. ಸಹಶಿಕ್ಷಕ ಮಾಧವ ರಾಣೆ ಕಾರ್ಯಕ್ರಮ ನಿರೂಪಿಸಿದರು. ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೊಡ ವಂದಿಸಿದರು.

ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮಾಹಾಂತೇಶ ದರ್ಗದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಿಯಾಂಗಾ.ಎಂ, ತರಬೇತಿಯಲ್ಲಿರುವ ಐ.ಎ.ಎಸ್ ಅಧಿಕಾರಿ ಅವಿನಾಶ ಶಿಂಧೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.