ಮಂಗಳವಾರ, ಡಿಸೆಂಬರ್ 7, 2021
20 °C
ಇಲಾಖೆ ಸಚಿವರೊಂದಿಗೆ ಚರ್ಚಿಸಿ ಯೋಜನೆ: ಸಚಿವ ಶಿವರಾಮ ಹೆಬ್ಬಾರ ಭರವಸೆ

ಪ್ರವಾಸೋದ್ಯಮ ಅಭಿವೃದ್ಧಿಗೆ ಮತ್ತಷ್ಟು ಕ್ರಮ ಅಗತ್ಯ: ಸಚಿವ ಶಿವರಾಮ ಹೆಬ್ಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಜಿಲ್ಲೆಯ ಪ್ರವಾಸೋದ್ಯಮವನ್ನು ಮತ್ತಷ್ಟು ಆಕರ್ಷಕವಾಗಿ ರೂಪಿಸಬೇಕಿದೆ. ಈ ಸಂಬಂಧ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರೊಂದಿಗೆ ಚರ್ಚಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ‘ವಿಶ್ವ ಪ್ರವಾಸೋದ್ಯಮ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.

‘ದೇಶವೇ ಗುರುತಿಸುವಂಥ ಪ್ರವಾಸಿ ತಾಣಗಳು ಉತ್ತರ ಕನ್ನಡದಲ್ಲಿವೆ. ಆದರೆ, ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾದ ಪರಿಪೂರ್ಣ ಹೆಜ್ಜೆಯಿಡಲು ಸಾಧ್ಯವಾಗಿಲ್ಲ. ಸಮೀಪದ ಗೋವಾ ರಾಜ್ಯವು ಈ ವಲಯದ ಮೇಲೆಯೇ ಅವಲಂಬಿತವಾಗಿದೆ. ಅಲ್ಲಿಗೆ ಹೋಗಿ ನಮ್ಮ ಜಿಲ್ಲೆಗೆ ಬಂದವರು ಇಲ್ಲಿನ ವ್ಯವಸ್ಥೆಗಳನ್ನು ನೋಡಿ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಜಿಲ್ಲೆ, ರಾಜ್ಯದ ಪ್ರವಾಸೋದ್ಯಮವನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಬೇಕಿದೆ’ ಎಂದು ಪ್ರತಿಪಾದಿಸಿದರು.

‘ಶೇ 80ರಷ್ಟು ಕಾಡು ಇರುವ ಈ ಜಿಲ್ಲೆಯಲ್ಲಿ ದೊಡ್ಡ ಉದ್ದಿಮೆಗಳ ಸ್ಥಾಪನೆಗೆ ಅವಕಾಶವಿಲ್ಲ. ಆದರೆ, ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ’ ಎಂದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ‘ಕೋವಿಡ್‌ ಕಾರಣದಿಂದ ರಾಜ್ಯದಲ್ಲಿ ನಿರ್ಬಂಧಿಸಲಾದ ಜಲಕ್ರೀಡೆಗಳಿಗೆ ಸರ್ಕಾರದಿಂದ ಮತ್ತೆ ಅನುಮತಿ ಸಿಗಲು ಉತ್ತರ ಕನ್ನಡದ ಒತ್ತಡವೇ ಕಾರಣ. ಅತ್ಯುತ್ತಮ ಪ್ರಕೃತಿ ಮತ್ತು ಜನ ಇಲ್ಲಿದ್ದಾರೆ. ಹಾಗಾಗಿ ಪ್ರವಾಸೋದ್ಯಮಕ್ಕೆ ಅತ್ಯಂತ ಹೊಂದುವ ಜಿಲ್ಲೆ ಇದಾಗಿದೆ. ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ ಎಂಬ ಘೋಷವಾಕ್ಯವು ಈ ಜಿಲ್ಲೆಗೆ ಹೆಚ್ಚು ಹೊಂದುತ್ತದೆ’ ಎಂದು ಹೇಳಿದರು.

ಜೊಯಿಡಾದ ಕಾಡುಮನೆ ಹೋಂ ಸ್ಟೇ ಮಾಲೀಕ ನರಸಿಂಹ ಭಟ್ ಛಾಪಖಂಡ ಮಾತನಾಡಿ, ‘ಕೇರಳವು ಸುಸ್ಥಿರ ಪ್ರವಾಸೋದ್ಯಮ ನೀತಿ ಹೊಂದಿದೆ. ಗೋವಾ ಈಗ ಅದರತ್ತ ಸಾಗುತ್ತಿದೆ. ಪರಿಸರವನ್ನು ಹಾಳು ಮಾಡುವ ಪ್ರವಾಸೋದ್ಯಮ ಬೇಕಿಲ್ಲ. ಸುಂದರವಾದ ಪರಿಸರವನ್ನೇ ತೋರಿಸುವುದೂ ಜನರನ್ನು ಆಕರ್ಷಿಸುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯನ್ನು ಮಾರುಕಟ್ಟೆ ಮಾಡುವ ಕೆಲಸ ಸಮರ್ಪಕವಾಗಿ ಆಗಿಲ್ಲ ಕೊರಗು ಇದೆ. ಜೊಯಿಡಾವನ್ನು ಪರಿಸರ ಪ್ರವಾಸೋದ್ಯಮ ತಾಲ್ಲೂಕು ಎಂದು ಘೋಷಿಸಬೇಕು’ ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿದರು. ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಅನನ್ಯಾ ಅಶೋಕ ಬಾಡ್ಕರ್ (ಪ್ರಥಮ), ಸ್ಫೂರ್ತಿ ನಾಯಕ (ದ್ವಿತೀಯ) ಹಾಗೂ ಮಿನಿ ನರ್ಸಿ ವಾಗ್ಳೇಕರ್ (ತೃತೀಯ) ಅವರಿಗೆ ಗಣ್ಯರು ಬಹುಮಾನ ವಿತರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ಕರಾವಳಿ ಇನ್‌ಸ್ಟಿಟ್ಯೂಟ್‌ನ ಸತೀಶ ಮಾಳ್ಸೇಕರ್, ಪ್ರವಾಸೋದ್ಯಮ ಇಲಾಖೆ ಪ್ರಭಾರ ಉಪ ನಿರ್ದೇಶಕ ಪ್ರತೀಕ ಶೆಟ್ಟಿ, ಸುರೇಶ ಶೆಟ್ಟಿ ಇದ್ದರು.

ಶಾಸಕಿ ಅಸಮಾಧಾನ:

‘ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಮೂರು ವರ್ಷದಲ್ಲಿ ಒಮ್ಮೆಯೂ ಸಭೆ ಹಮ್ಮಿಕೊಂಡಿಲ್ಲ. ಇಲಾಖೆಯ ಅಧಿಕಾರಿಗಳನ್ನು ಪದೇಪದೇ ಬದಲಿಸಲಾಗ್ತಿದೆ’ ಎಂದು ಶಾಸಕಿ ರೂಪಾಲಿ ನಾಯ್ಕ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದರು.

‘ಕಾರ್ಯಕ್ರಮ ಆಯೋಜಿಸುವ ವಿಚಾರದಲ್ಲಿ ಸ್ಥಳೀಯ ಶಾಸಕರನ್ನು ನಿರ್ಲಕ್ಷಿಸಲಾಗಿದೆ. ನಗರದಲ್ಲಿರುವ ರಾಕ್ ಗಾರ್ಡನ್ ನಿರ್ವಹಣೆ ಮಾಡಿಲ್ಲ. ತೀಳ್ಮಾತಿ ಕಡಲತೀರದ ಅಭಿವೃದ್ಧಿಗೆ ಬಂದ ಹಣ ವಾಪಸಾಗಿದೆ. ಒಂದೊಂದು ವಿಚಾರದಲ್ಲಿ ಒಂದೊಂದು ರೀತಿಯ ತಾರತಮ್ಯ ಮಾಡಲಾಗುತ್ತಿದೆ. ಇನ್ನು ಮುಂದೆ ಅಧಿಕಾರಿಗಳು ಈ ರೀತಿ ಮಾಡಿದರೆ ಸುಮ್ಮನಿರಲಾಗದು’ ಎಂದು ಎಚ್ಚರಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು