ಗುರುವಾರ , ಆಗಸ್ಟ್ 5, 2021
28 °C
ಜಲಜೀವನ ಮಿಷನ್ ಕಾರ್ಯಾಗಾರ: ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ

ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ‘ಜಲಜೀವನ ಮಿಷನ್ ಯೋಜನೆ ಅನುಷ್ಠಾನದಲ್ಲಿ ತಾಲ್ಲೂಕು ತೀರಾ ಹಿಂದೆ ಬಿದ್ದಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ’ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಜಲಜೀವನ ಮಿಷನ್ ಯೋಜನೆಯಡಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಒಟ್ಟು ₹33.92 ಕೋಟಿ ವೆಚ್ಚದಲ್ಲಿ 43 ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ. ಆದರೆ, ಕೇವಲ ಒಂದು ಕಾಮಗಾರಿ ಪೂರ್ಣಗೊಂಡಿದ್ದು, 16 ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ’ ಎಂದರು.

‘ಏಳೂವರೆ ಸಾವಿರ ಮನೆಗಳಿಗೆ ನಳ ಸಂಪರ್ಕ ನೀಡುವುದು ಯೋಜನೆಯ ಗುರಿಯಾಗಿದೆ. ಶೇ 90ರಷ್ಟು ಅನುದಾನ ಮಾತ್ರ ಕೇಂದ್ರ, ರಾಜ್ಯ ಸರ್ಕಾರ ಮತ್ತು ಗ್ರಾಮ ಪಂಚಾಯ್ತಿ ವಿನಿಯೋಗಿಸಬಹುದು. ಉಳಿದ ಶೇ 10ಷ್ಟು ಅನುದಾನ ಸಾರ್ವಜನಿಕರಿಂದ ವಂತಿಗೆ ಮೂಲಕ ಸಂಗ್ರಹಿಸಬೇಕು. ಇದಕ್ಕೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಜನರ ಮನವೊಲಿಸಬೇಕು’ ಎಂದರು.

ಯೋಜನೆ ಜಾರಿಗೆ ಸಂಬಂಧಿಸಿದಂತೆ ಎದುರಾಗುತ್ತಿರುವ ತೊಡಕುಗಳ ಕುರಿತು ಗ್ರಾಮ ಪಂಚಾಯ್ತಿ ಪ್ರತಿನಿಧಿಗಳು ದೂರು ಹೇಳಿಕೊಂಡರು. ‘ಸ್ಥಳೀಯವಾಗಿ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಕುರಿತು ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ’ ಎಂದು ಯಡಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರವೀಶ ಹೆಗಡೆ ಆರೋಪಿಸಿದರು. ಯೋಜನೆಯ ನಿಯಮಾವಳಿಯಲ್ಲಿನ ಗೊಂದಲಗಳನ್ನು ನಿವಾರಿಸಬೇಕಿದೆ ಎಂದು ಬಿಸಲಕೊಪ್ಪ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ಹೇಳಿದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್, ತಾಲ್ಲೂಕು ಪಂಚಾಯ್ತಿ ಇಒ ಎಫ್.ಜಿ.ಚೆನ್ನಣ್ಣನವರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪ್ರವೀಣ್ ಇದ್ದರು. ಸ್ಕಾಡವೇಸ್ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ರಿಯಾಜ್ ಸಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು