ಸೋಮವಾರ, ಸೆಪ್ಟೆಂಬರ್ 20, 2021
22 °C

ಶಿರಸಿ: ಬಸ್ ತಂಗುದಾಣದಲ್ಲಿ ನವಜಾತ ಗಂಡು ಶಿಶು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ತಾಲ್ಲೂಕಿನ ಗೌಡಳ್ಳಿ ಸಮೀಪದ ಖಾನ್ ನಗರದ ಬಸ್ ತಂಗುದಾಣದಲ್ಲಿ ನವಜಾತ ಗಂಡು ಶಿಶು ಬುಧವಾರ ನಸುಕಿನ ಜಾವ ಪತ್ತೆಯಾಗಿದೆ.

ಕೂಗಿಲಕುಳಿ ಗ್ರಾಮದ ಮಹಿಳೆಯೊಬ್ಬರಿಗೆ ಈ ಮಗು ದೊರೆತಿದ್ದು ಅದನ್ನು ಅವರು ಶಿರಸಿಯ ಸಹಾಯ ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾರೆ. ಟ್ರಸ್ಟ್ ಅಧ್ಯಕ್ಷ ಸತೀಶ ಶೆಟ್ಟಿ ಅನಾರೋಗ್ಯಕ್ಕೆ ತುತ್ತಾಗಿರುವ ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಮಕ್ಕಳ ತುರ್ತು ನಿಗಾ ಘಟಕದಲ್ಲಿ (ಎನ್.ಐ.ಸಿ.ಯು.) ಚಿಕಿತ್ಸೆ ನೀಡಲಾಗುತ್ತಿದೆ.

‘ಕೂಲಿ ಕೆಲಸಕ್ಕೆ ಹೋಗುವಾಗ ತಂಗುದಾಣದಲ್ಲಿ ಮಗುವಿನ ಅಳು ಕೇಳಿಸಿತು. ಹತ್ತಿರ ತೆರಳಿ ನೋಡಿದಾಗ ಚೀಲವೊಂದರಲ್ಲಿ ಮಗುವನ್ನು ಸುತ್ತಿ ಬಿಟ್ಟು ಹೋಗಿದ್ದು ಗಮನಕ್ಕೆ ಬಂತು’ ಎಂದು ಮಗು ರಕ್ಷಿಸಿದ ಮಹಿಳೆ ಮಾದೇವಿ ತಿಳಿಸಿದರು.

‘ಅವಧಿಪೂರ್ವ ಜನಿಸಿದ ಶಿಶು ಇದಾಗಿದ್ದು 1.6 ಕೆಜಿ ತೂಕ ಹೊಂದಿದೆ. ಜನಿಸಿ ನಾಲ್ಕು ದಿನ ಆಗಿರಬಹುದು. ಎಡಗೈ ಮುಂಭಾಗದ ಮೂಳೆ ಬೆಳವಣಿಗೆ ಆಗಿಲ್ಲ. ಗಾಳಿ, ಮಳೆಯ ವಾತಾವರಣದಲ್ಲಿದ್ದ ಕಾರಣ ಮಗುವಿನ ಆರೋಗ್ಯ ಹದಗೆಟ್ಟಿದೆ. ಚಿಕಿತ್ಸೆ ನೀಡುತ್ತಿದ್ದು ತಕ್ಷಣವೇ ಅದರ ಆರೋಗ್ಯ ಸ್ಥಿತಿ ಸುಧಾರಣೆ ಬಗ್ಗೆ ಹೇಳಲಾಗದು’ ಎಂದು ಮಕ್ಕಳ ತಜ್ಞ ಡಾ.ಆಶ್ರಿತ್ ಭಟ್ ತಿಳಿಸಿದ್ದಾರೆ.

‘ಮಗುವನ್ನು ಬಿಟ್ಟು ಹೋಗಿರುವವರ ಪತ್ತೆಗೆ ಕ್ರಮವಹಿಸಲಾಗುವುದು.‌ಸದ್ಯ ಮಗುವಿನ ಆರೋಗ್ಯ ಸುಧಾರಣೆಗೆ ಲಕ್ಷ್ಯ ವಹಿಸಿದ್ದೇವೆ’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ ಭಟ್ಟ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು