ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ನೀರಿನ ಹೊಸ ಏಡಿ ‘ಘಟಿಯಾನಾ ದ್ವಿವರ್ಣ’ ಯಲ್ಲಾಪುರದಲ್ಲಿ ಪತ್ತೆ

Last Updated 17 ಆಗಸ್ಟ್ 2022, 13:57 IST
ಅಕ್ಷರ ಗಾತ್ರ

ಕಾರವಾರ: ಸಿಹಿ ನೀರಿನಲ್ಲಿ ವಾಸಿಸುವ ಏಡಿಯ ಹೊಸ ಪ್ರಭೇದವು ಯಲ್ಲಾಪುರ ತಾಲ್ಲೂಕಿನ ಬಾರೆ ಎಂಬಲ್ಲಿ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ದೇಹವು ಬಿಳಿ ಮತ್ತು ಕಾಲುಗಳು ನೇರಳೆ ಬಣ್ಣದಲ್ಲಿವೆ. ಇದಕ್ಕೆ ‘ಘಟಿಯಾನ ದ್ವಿವರ್ಣ’ (Ghatiana Dvivarna) ಎಂದು ಹೆಸರಿಡಲಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿ ಪರಶುರಾಮ ಭಜಂತ್ರಿ, ನಿಸರ್ಗ ತಜ್ಞರಾದ ಗೋಪಾಲಕೃಷ್ಣ ಹೆಗಡೆ, ಸಮೀರಕುಮಾರ ಪಾಟಿ ಮತ್ತು ತೇಜಸ್ ಥಾಕರೆ ಅವರು ಕಳೆದ ವರ್ಷ ಜೂನ್‌ನಲ್ಲಿ ಹಿಂದೆ ಈ ಏಡಿಯನ್ನು ಕಂಡಿದ್ದರು. ಬಳಿಕ ವಿವಿಧ ರೀತಿಯಲ್ಲಿ ಅಧ್ಯಯನ ಮಾಡಿದಾಗ ಹೊಸ ಪ್ರಭೇದವೆಂಬುದು ದೃಢಪಟ್ಟಿತು.

ಪಶ್ಚಿಮ ಘಟ್ಟದಲ್ಲಿ ಕಂಡುಬಂದಿರುವ ಅಪರೂಪದ ಏಡಿಗಳನ್ನು ‘ಘಟಿಯಾನ’ ಶಬ್ದದೊಂದಿಗೆ ಗುರುತಿಸಲಾಗುತ್ತದೆ. ಈ ಪ್ರಭೇದದಲ್ಲಿ ಈಗಾಗಲೇ 13 ವಿವಿಧ ಜಾತಿಯ ಸಿಹಿ ನೀರಿನ ಏಡಿಗಳನ್ನು ಪತ್ತೆ ಹಚ್ಚಲಾಗಿದೆ. ‘ದ್ವಿವರ್ಣ’ವು 14ನೆಯದ್ದಾಗಿದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ತಜ್ಞರ ಅಧ್ಯಯನದ ಪ್ರಕಾರ ಪ್ರಪಂಚದಾದ್ಯಂತ ಈವರೆಗೆ ಸುಮಾರು 4 ಸಾವಿರ ಜಾತಿಯ ಏಡಿಗಳನ್ನು ಗುರುತಿಸಲಾಗಿದೆ. ನಮ್ಮ ದೇಶದಲ್ಲಿ 125 ಪ್ರಭೇದಗಳಿವೆ. ಜೀವವೈವಿಧ್ಯದ ಕೇಂದ್ರ ಎಂದೇ ಗುರುತಾಗಿರುವ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲೇ 74 ವಿವಿಧ ಜಾತಿಯ ಏಡಿಗಳನ್ನು ಪತ್ತೆ ಹಚ್ಚಲಾಗಿದೆ. ‘ಘಟಿಯಾನ ದ್ವಿವರ್ಣ’ವು ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ 75ನೇ ಪ್ರಭೇದವಾಗಿ ದೃಢಪಟ್ಟಿದ್ದು ವಿಶೇಷವಾಗಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬಾರೆಯಲ್ಲಿ ಕಂಡುಬಂದ ಏಡಿಗಳಲ್ಲಿ ಗಂಡು 48 ಸೆಂಟಿಮೀಟರ್ ಮತ್ತು ಹೆಣ್ಣು 34 ಸೆಂಟಿಮೀಟರ್ ಗಾತ್ರವಿತ್ತು. ಅವು ಪಶ್ಚಿಮ ಘಟ್ಟದ ಸಿಹಿ ನೀರಿನ ಮೂಲಗಳಲ್ಲಿ ಬಂಡೆಗಳ ಅಡಿಯಲ್ಲಿರುವ ರಂಧ್ರಗಳಲ್ಲಿ ವಾಸಿಸುತ್ತವೆ. ಸಣ್ಣಪುಟ್ಟ ಹುಳಗಳು ಮತ್ತು ಪಾಚಿಯನ್ನು ಸೇವಿಸುತ್ತವೆ ಎಂದು ಪತ್ತೆ ಹಚ್ಚಿದ ತಂಡದವರು ಗುರುತಿಸಿದ್ದಾರೆ.

ಅಪರೂಪದ ಏಡಿಯನ್ನು ಪತ್ತೆ ಹಚ್ಚಿದ್ದಕ್ಕಾಗಿ ಭಾರತೀಯ ಭೌಗೋಳಿಕ ಸಮೀಕ್ಷೆಯಿಂದ (ಜಿ.ಎಸ್.ಐ) ತಂಡದ ಸದಸ್ಯರನ್ನು ‘ನಾಗರಿಕ ವಿಜ್ಞಾನಿಗಳು’ ಎಂದು ಗೌರವಿಸಲಾಗಿದೆ.

ಸಂಶೋಧನಾ ತಂಡವನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ, ಯಲ್ಲಾಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತುರಾಜ, ಅಣಶಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ತೋಡಕರ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT