ಬುಧವಾರ, ಸೆಪ್ಟೆಂಬರ್ 22, 2021
21 °C

ಪತ್ರಿಕಾ ವಿತರಕರ ದಿನಾಚರಣೆ: ಪತ್ರಿಕೆಯೊಂದಿಗೆ ಲೋಕಜ್ಞಾನದ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಬೆಳಕು ಹರಿದು ಎಲ್ಲರೂ ಹಾಸಿಗೆ ಬಿಟ್ಟು ಏಳುವ ಹೊತ್ತಿಗೆ ಇವರ ಕೆಲಸ ಬಹುಪಾಲು ಮುಕ್ತಾಯವಾಗಿರುತ್ತದೆ. ಮನೆ ಬಾಗಿಲಿಗೆ ‘ಧಪ್’ ಎಂದು ಬಡಿದ ಶಬ್ದ ಕೇಳುತ್ತಿದ್ದಂತೆ ಮನೆ ಮಂದಿಗೆ ಸಮಾಧಾನವಾಗುತ್ತದೆ.

ದಿನವೂ ತಪ್ಪದೇ ದಿನಪತ್ರಿಕೆ ಹಂಚುವ ಪತ್ರಿಕಾ ವಿತರಕರು ಮನೆ ಮನೆಗೆ ಸುದ್ದಿ ತಲುಪಿಸುವ ಮೂಲಕ ಲೋಕಜ್ಞಾನದ ಪ್ರಸರಣ ಮಾಡುತ್ತಾರೆ. ಬೆಳಿಗ್ಗೆ ಎದ್ದ ಕೂಡಲೇ ಪತ್ರಿಕೆ ಓದುವುದು ಅಭ್ಯಾಸ ಆದವರಿಗೆ ಇವರನ್ನು ಕಂಡರೆ ಒಂದು ರೀತಿ ಅಭಿಮಾನ. ಜೊತೆಗೇ ಸಮಯಕ್ಕೆ ಸರಿಯಾಗಿ ಪತ್ರಿಕ ಕೈಗೆ ಸಿಗದಿದ್ದರೆ ಚಡಪಡಿಕೆ ಹಲವು ಬಾರಿ ಸಿಟ್ಟಾಗಿ ಹೊರ ಹೊಮ್ಮುತ್ತದೆ.

ಬೆಳಿಗ್ಗೆ 4.30ಕ್ಕೆಲ್ಲ ಎದ್ದು ಮನೆಯಿಂದ ಹೊರ ಬಂದು ಪತ್ರಿಕಾ ಕಚೇರಿಗಳಿಂದ ಬರುವ ಪತ್ರಿಕೆಗಳನ್ನು ಪ್ರತ್ಯೇಕಿಸಿ ಮನೆ ಮನೆಗಳಿಗೆ ತಲುಪಿಸುವುದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಮಳೆ, ಚಳಿ ಎಷ್ಟೇ ಇದ್ದರೂ ಅದೇ ಸಮಯಕ್ಕೆ ಮನೆ ಬಿಡುವುದು ರೂಢಿಯಾಗಿರುತ್ತದೆ.

‘ಬೆಳಿಗ್ಗೆ ಸೈಕಲ್, ಬೈಕ್ ಸವಾರಿ ಮಾಡಿಕೊಂಡು ಬರುವಾಗ ಎದುರಾಗುವ ಸಮಸ್ಯೆಗಳೂ ಒಂದೆರಡಲ್ಲ. ಕೆಲವೊಮ್ಮೆ ಬೀದಿನಾಯಿಗಳು ಅಟ್ಟಿಸಿಕೊಂಡು ಬರುತ್ತವೆ. ಪೇಪರ್ ವಿತರಿಸುವ ಹುಡುಗರಿಗೆ ಕಚ್ಚಿ ಗಾಯಗೊಂಡು ಉದಾಹರಣೆಗಳೂ ಇವೆ’ ಎನ್ನುತ್ತಾರೆ ಕಾರವಾರದ ಪತ್ರಿಕಾ ವಿತರಕ ಮಂಗೇಶ ಗೋವಿಂದ ವಾಘ.

‘ಕೋವಿಡ್ ಕಾರಣದಿಂದ ಲಾಕ್‌ಡೌನ್, ಸೀಲ್‌ಡೌನ್‌ನಂಥ ಕ್ರಮಗಳು ಜಾರಿಯಾದಾಗ ಪತ್ರಿಕೆಗಳ ವಿತರಣೆಗೆ ತುಂಬ ತೊಡಕುಗಳು ಎದುರಾದವು. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ತಡೆಯುವುದು, ಪ್ರಶ್ನಿಸುವುದು, ಗುರುತಿನ ಚೀಟಿಗಾಗಿ ತಪಾಸಣೆ ಮಾಡುವಂಥ ಸನ್ನಿವೇಶಗಳನ್ನು ಎದುರಿಸಿದ್ದೇವೆ. ಪ್ರತಿ ದಿನ ಅವರಿಗೆ ನಾವೇ ಪತ್ರಿಕೆ ತಲುಪಿಸುತ್ತಿದ್ದರೂ ಈ ಪ್ರಕ್ರಿಯೆಗಳನ್ನು ಮಾಡುತ್ತಿದ್ದರು’ ಎಂದು ಹೇಳುತ್ತಾರೆ.

‘ಪತ್ರಿಕೆಯ ಚಂದಾ ಹಣವನ್ನು ಸಂಗ್ರಹಿಸುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಆದರೆ, ಜನರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಒಂದೆರಡು ದಿನ ಹೊಂದಿಸಿಕೊಂಡು ಪಾವತಿಸುತ್ತಾರೆ. ಒಟ್ಟಿನಲ್ಲಿ ಈ ವೃತ್ತಿಯನ್ನು ಸೇವೆ ಎಂದೇ ಮಾಡುತ್ತಿದ್ದೇವೆ’ ಎಂದು ಅವರು ಮುಗುಳ್ನಗುತ್ತಾರೆ.

‘ಆರೋಗ್ಯಕ್ಕೆ ಅನುಕೂಲಕರ’: ಶಿರಸಿ: ‘ದೇಹಾರೋಗ್ಯ ನಮ್ಮನ್ನು ಕಾಪಾಡುತ್ತದೆ ಎಂಬ ಮಾತು ಪತ್ರಿಕಾ ವಿತರಕರಿಗೆ ಸೂಕ್ತವಾಗಿ ಅನ್ವಯವಾಗುತ್ತದೆ. ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕೆಲಸ ಮಾಡುವ ನಮಗೆ ಪ್ರಕೃತಿದತ್ತವಾದ ಆರೋಗ್ಯ ದೊರೆಯುತ್ತದೆ’ ಎನ್ನುತ್ತಾರೆ ಶಿರಸಿಯ ಹಿರಿಯ ಪತ್ರಿಕಾ ವಿತರಕ ವಿವೇಕಾನಂದ ರಾಯ್ಕರ್.

‘ಮೂರು ದಶಕಗಳಿಗೂ ಹೆಚ್ಚು ಕಾಲ ಪತ್ರಿಕಾ ವಿತರಣೆ ವೃತ್ತಿ ನಡೆಸಿರುವ ನಾನು ಈವರೆಗೆ ಒಮ್ಮೆ ಮಾತ್ರ ಜ್ವರದಿಂದ ಬಳಲಿದ್ದೆ. ಈಗಿನ ತಲೆಮಾರಿನವರಿಗೆ ಬೆಳಗಿನ ಜಾವ ಎದ್ದು ಕೆಲಸ ಮಾಡುವುದು ಆರೋಗ್ಯ ಕಾಪಾಡಲು ಅನುಕೂಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇನೆ. ಕೋವಿಡ್‍ನಂತಹ ವಿಷಮ ಸ್ಥಿತಿಯಲ್ಲಿ ಉಳಿದ ಸಮಸ್ಯೆಗಳನ್ನು ಬದಿಗೊತ್ತಿ ಹೇಳುವುದಾದರೆ ಪತ್ರಿಕಾ ವಿತರಕರಲ್ಲಿ ಬಹುತೇಕ ಆರೋಗ್ಯ ಸಮಸ್ಯೆಯಿಂದ ದೂರವೇ ಉಳಿದಿದ್ದಾರೆ ಎಂದರೆ ಅದಕ್ಕೆ ಕಾರಣ ಅವರ ಕೆಲಸ’ ಎನ್ನುತ್ತಾರೆ ಅವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು