ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ವಾಣಿಜ್ಯ ಬಂದರು ವಿಸ್ತರಣೆ: ಯಥಾಸ್ಥಿತಿಗೆ ಎನ್.ಜಿ.ಟಿ ಆದೇಶ

Last Updated 21 ಮೇ 2022, 14:30 IST
ಅಕ್ಷರ ಗಾತ್ರ

ಕಾರವಾರ: ನಗರದ ವಾಣಿಜ್ಯ ಬಂದರಿನ ವಿಸ್ತರಣೆ ವಿಚಾರದಲ್ಲಿ ‘ಯಥಾಸ್ಥಿತಿ’ ಕಾಪಾಡುವಂತೆ ಚೆನ್ನೈನ ಹಸಿರುಪೀಠ ಆದೇಶಿಸಿದೆ. ಒಂದುವೇಳೆ, ಆದೇಶವನ್ನು ಉಲ್ಲಂಘಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದೂ ಎಚ್ಚರಿಕೆ ನೀಡಿದೆ.

ಬಂದರಿನ ವಿಸ್ತರಣೆಗೆ ತಡೆ ನೀಡುವಂತೆ ಕೋರಿ ‘ಕಾರವಾರ ಉಳಿಸಿ’ ತಂಡವು ನ್ಯಾಯಾಲಯದ ಮೊರೆ ಹೋಗಿತ್ತು. ಕಾಮಗಾರಿಗೆ ಸಂಬಂಧಿಸಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವಾಗ, ಬೈತಖೋಲ್‌ ಸಮೀಪದ ಗುಡ್ಡವನ್ನು ಒಡೆಯುವ ಮಾಹಿತಿಯನ್ನು ನೀಡಿರಲಿಲ್ಲ. ಇದು 2006ರ ಪರಿಸರ ಮೇಲಿನ ಪರಿಣಾಮ ಅಧ್ಯಯನ (ಇ.ಐ.ಎ) ಅಧಿಸೂಚನೆಯ ಸೆಕ್ಷನ್ 8ರ ಉಲ್ಲಂಘನೆಯಾಗುತ್ತದೆ (ಉದ್ದೇಶ ಪೂರ್ವಕವಾಗಿ ಮಾಹಿತಿ ಮುಚ್ಚಿಡುವುದು) ಎಂದು ಅರ್ಜಿದಾರರು ದೂರಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿಗೆ ನೀಡಿದ ಅನುಮತಿಯನ್ನು ರದ್ದು ಮಾಡಬೇಕು ಎಂದು ಕೋರಿದ್ದರು.

ಬೈತಖೋಲ್‌ನ 11 ಎಕರೆಗೂ ಅಧಿಕ ಗುಡ್ಡ ಪ್ರದೇಶವನ್ನು ಕರ್ನಾಟಕ ಜಲಸಾರಿಗೆ ಮಂಡಳಿಯ ಕಚೇರಿ, ಅತಿಥಿ ಗೃಹ, ಎರಡು ರಸ್ತೆಗಳು, ಶೀತಲೀಕರಣ ಘಟಕ, ವಾಹನ ನಿಲುಗಡೆ, ಟ್ಯಾಂಕ್ ಟರ್ಮಿನಲ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಗುರುತಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯವು, ಮೇ 19ರಂದು ಕಾಮಗಾರಿಗೆ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿದೆ. ಅರ್ಜಿದಾರರ ಪರ ಹಿರಿಯ ವಕೀಲ ರಿತ್ವಿಕ್ ದತ್ತ ವಾದ ಮಂಡಿಸಿದ್ದು, ರಾಷ್ಟ್ರೀಯ ಮೀನುಗಾರಿಕಾ ಕಾರ್ಮಿಕರ ವೇದಿಕೆಯು ಅಗತ್ಯ ನೆರವು ನೀಡಿದೆ ಎಂದು ‘ಕಾರವಾರ ಉಳಿಸಿ’ದ ಪ್ರಮುಖರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT