ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ರಸ್ತೆಗಿಳಿಯದ ಬಸ್, ವಿದ್ಯಾರ್ಥಿಗಳಿಗೆ ರಜೆಯ ಮಜ

ಸಹಜ ಸ್ಥಿತಿಯಲ್ಲಿ ವಾಣಿಜ್ಯ ವಹಿವಾಟು, ಜನ ಸಂಚಾರ, ಬಸ್ ಇಲ್ಲದೇ ಪರದಾಡಿದ ಪ್ರಯಾಣಿಕರು
Last Updated 8 ಜನವರಿ 2019, 11:26 IST
ಅಕ್ಷರ ಗಾತ್ರ

ಶಿರಸಿ: ಕಾರ್ಮಿಕ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಭಾರತ್ ಬಂದ್ ಪ್ರಯುಕ್ತ ನಗರದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಎಲ್ಲ ಶಾಲೆ– ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇದನ್ನು ಹೊರತುಪಡಿಸಿದರೆ, ಉಳಿದೆಲ್ಲ ಚಟುವಟಿಕೆಗಳು ನಗರದಲ್ಲಿ ಎಂದಿನಂತೆ ಸಹಜವಾಗಿದ್ದವು.

ಎಐಟಿಯುಸಿ ನೇತೃತ್ವದಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ, ಡಿಪೊ ಎದುರು ಪ್ರತಿಭಟನೆ ನಡೆಸಿದರು. ಜಿಲ್ಲೆಯ 450ಕ್ಕೂ ಹೆಚ್ಚು ಮಾರ್ಗಗಳ ಬಸ್ ಸಂಚಾರ ಸ್ಥಗಿತಗೊಳಿಸಿ, ಬಂದ್‌ಗೆ ಬೆಂಬಲ ಸೂಚಿಸಿದರು. ಗ್ರಾಮೀಣ ಪ್ರದೇಶ, ಹೊರ ಊರುಗಳಿಗೆ ಹೋಗಬೇಕಾಗಿದ್ದ ಬಸ್‌ಗಳನ್ನು ಡಿಪೊದ ಒಳಗೆ ಸೇರಿಸಿದ, ಸಂಸ್ಥೆಯ ಸಿಬ್ಬಂದಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಡಿದರು.

ಮೋಟಾರ್ ವಾಹನ ಕಾಯ್ದೆ ತಿದ್ದುಪಡಿಯಿಂದ ಸಾರಿಗೆ ಸಿಬ್ಬಂದಿಗೆ ತೀವ್ರ ಸಮಸ್ಯೆಯಾಗುತ್ತದೆ. ನಿರಾತಂಕವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ತಕ್ಷಣ ಈ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸಿಐಟಿಯು ಬೆಂಬಲಿತ ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರು, ಬಿಸಿಯೂಟ ಸಿಬ್ಬಂದಿ, ಅಂಚೆ ಸಿಬ್ಬಂದಿ, ಔಷಧ ಮಾರಾಟ ಮತ್ತು ವಿತರಕರು, ಹಮಾಲಿ ಕಾರ್ಮಿಕರು ಅಂಚೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೆಲೆ ಏರಿಕೆ ನಿಯಂತ್ರಣದ ಜೊತೆಗೆ ಕಾರ್ಮಿಕ ಸಂಘಟನೆಗಳ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಬೆಳಿಗ್ಗೆಯಿಂದಲೂ ಬಸ್‌ ರಸ್ತೆಗೆ ಇಳಿದಿಲ್ಲದ ಕಾರಣ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರು ಪರದಾಡುವಂತಾಯಿತು. ಬಂದ್ ಇರುವ ಸಂಗತಿ ಗೊತ್ತಿಲ್ಲದೇ ಬಸ್ ನಿಲ್ದಾಣಕ್ಕೆ ಬಂದಿದ್ದ ಕೆಲವರು, ಗ್ರಾಮೀಣ ಪ್ರದೇಶ ತಲುಪಲು ಕಷ್ಟಪಟ್ಟರು. ಆಟೊರಿಕ್ಷಾ ಸಂಘದವರು ಬಂದ್‌ಗೆ ಬಾಹ್ಯ ಬೆಂಬಲ ಸೂಚಿಸಿದ್ದರಿಂದ, ರಿಕ್ಷಾ ಸಂಚಾರ ಎಂದಿನಂತೆ ಇತ್ತು. ಖಾಸಗಿ ವಾಹನಗಳ ಓಡಾಟ ನಿರಂತರವಾಗಿ ನಡೆಯಿತು. ಆಸ್ಪತ್ರೆ ಆಂಬುಲೆನ್ಸ್, ಹೋಟೆಲ್, ವಾಣಿಜ್ಯ ಮಳಿಗೆಗಳು ತೆರೆದಿದ್ದವು.

ಇಂದು ಬಸ್ ಸಂಚಾರ: ‘ಮಂಗಳವಾರ ಬೆಳಿಗ್ಗೆ 11 ಗಂಟೆ ತನಕ 62 ಮಾರ್ಗಗಳಿಗೆ ಬಸ್ ಬಿಡಲಾಗಿದೆ. ನಂತರ ಬಸ್ ಸಂಚಾರ ಸ್ಥಗಿತಗೊಂಡಿದೆ. ಬುಧವಾರ ಜಿಲ್ಲೆಯಲ್ಲಿ ಬಸ್ ಸಂಚಾರ ಎಂದಿನಂತೆ ಇರುತ್ತದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಅಬ್ದುಲ್ ಖುದ್ದೂಸ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ಬೆಳಗಿನಿಂದ ಸಂಜೆಯವರೆಗೆ ಒಂದು ಬಸ್ ಕೂಡ ರಸ್ತೆಗೆ ಇಳಿದಿಲ್ಲ ಎಂದು ಬಸ್ ನಿಲ್ದಾಣ ಪಕ್ಕದ ಅಂಗಡಿಗಳ ಮಾಲೀಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT