ಗುರುವಾರ , ಜೂನ್ 24, 2021
21 °C
ಜಾಗೃತಿ, ಆರೋಗ್ಯ ಪರೀಕ್ಷಾ ಅಭಿಯಾನದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ಅಶೋಕ ಕುಮಾರ

ಗೋಕರ್ಣದಲ್ಲಿ ಕೋವಿಡ್ 19 ಆತಂಕವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ‘ಗ್ರಾಮದಲ್ಲಿ ಕೋವಿಡ್–19 ವೈರಾಣು ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಇಲ್ಲಿರುವ ವಿದೇಶಿ ಪ್ರವಾಸಿಗರು ಎರಡು ತಿಂಗಳ ಮೊದಲೇ ಬಂದಿದ್ದಾರೆ. ಈಗ ಕೆಲವರು ಬರುತ್ತಿದ್ದರೂ ಅವರಲ್ಲಿ ಶೀತ, ನೆಗಡಿ, ಜ್ವರದ ಲಕ್ಷಣಗಳಿಲ್ಲ’ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಅಶೋಕ ಕುಮಾರ ಸ್ಪಷ್ಟಪಡಿಸಿದ್ದಾರೆ. 

ಗೋಕರ್ಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಕೋವಿಡ್ –19 ಜಾಗೃತಿ ಮತ್ತು ಆರೋಗ್ಯ ಪರೀಕ್ಷಾ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಗೋಕರ್ಣಕ್ಕೆ ಬರುವ ಪ್ರವಾಸಿಗರು ಯಾವುದೇ ಕಾರಣಕ್ಕೂ ಭಯ ಪಡಬೇಕಿಲ್ಲ. ಇಲ್ಲಿ ಆರೋಗ್ಯ ಸಮೀಕ್ಷೆ ನಡೆಸಲು ಒಟ್ಟು 38 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲೂ ತಲಾ ನಾಲ್ವರಿದ್ದು, ಪ್ರತಿಯೊಬ್ಬ ಪ್ರವಾಸಿಗರನ್ನೂ ಪರೀಕ್ಷಿಸಲಾಗಿದೆ. ಸ್ವದೇಶಿ ಪ್ರವಾಸಿಗರನ್ನು ಕೂಡ ತಪಾಸಣೆಗೆ ಒಳಪಡಿಸಲಾಗಿದೆ. ಶುಕ್ರವಾರ ನಡೆಸಿದ ಸಮೀಕ್ಷೆಯ ವಿವರವನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಇಲ್ಲಿಯ ಓಂ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್, ಪ್ಯಾರಡೈಸ್ ಬೀಚ್, ದುಬ್ಬನಸಸಿ ಹಾಗೂ ಮೇನ್ ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವಿದೇಶಿಗರನ್ನು ಮಾತನಾಡಿಸಲಾಗಿದೆ. ಕೆಲವರು ನಮಗೆ ಸಹಕಾರ ನೀಡಿದರೆ, ಇನ್ನೂ ಕೆಲವರು ನಮ್ಮ ಪ್ರಶ್ನೆಗೆ ಉತ್ತರಿಸಲೂ ತಯಾರಿಲ್ಲ. ಹಲವು ವಿದೇಶಿಗರು ನಾವು ಹೋದ ಸಂದರ್ಭದಲ್ಲಿ ಕೊಠಡಿಗಳಲ್ಲಿ ಇರಲಿಲ್ಲ. ಆದರೂ ಅವರ ಚಲನವಲನಗಳ ಮೇಲೆ ನಿಗಾ ಇಡುವಂತೆ ಮಾಲೀಕರಿಗೆ ತಿಳಿಸಲಾಗಿದೆ’ ಎಂದು ಹೇಳಿದರು.

‘ಕೆಲವರು ಗೋಕರ್ಣದಲ್ಲಿ ಭಯದ ವಾತಾವರಣವಿದೆ, ಇಲ್ಲಿಗೆ ಬರುವ ಟೆಕ್ಕಿಗಳಲ್ಲಿ ರೋಗದ ಲಕ್ಷಣಗಳಿವೆ ಎಂದು ಸಾಮಾಜಿಕ  ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಇಲ್ಲಿ ಯಾವುದೇ ಭಯ ಪಡುವ ಅಗತ್ಯವಿಲ್ಲ. ಇನ್ನುಮುಂದೆ ಇಂತಹ ಸುಳ್ಳು ಪ್ರಚಾರ ಮಾಡಿದವರ ಮೇಲೆ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಮಾಸ್ಕ್ ಕಡ್ಡಾಯವಲ್ಲ’: ‘ಕೋವಿಡ್ 19 ಸೋಂಕು ತಡೆಗಟ್ಟಲು ಮುಖಗವಸು ಧರಿಸುವುದು ಕಡ್ಡಾಯವೆಂದು ನಾವು ಸೂಚಿಸಿಲ್ಲ. ಆದರೂ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾಸ್ಕ್ ಧರಿಸಿಕೊಂಡೇ ಬರಬೇಕು ಎಂದು ಹೇಳುವುದು ಗಮನಕ್ಕೆ ಬಂದಿದೆ. ಶೀತ, ನೆಗಡಿ, ಜ್ವರವಿದ್ದರೆ ಅಂತಹ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಬೇಡಿ ಎಂದಷ್ಟೇ ಹೇಳಿದ್ದೇವೆ. ಅದನ್ನು ಹೊರತುಪಡಿಸಿ ಮುಖಗವಸು ಕಡ್ಡಾಯಗೊಳಿಸುವಂತಿಲ್ಲ’ ಎಂದು ಡಾ.ಅಶೋಕ ಕುಮಾರ ಸ್ಪಷ್ಟಪಡಿಸಿದರು.

ಆರೋಗ್ಯ ಅಭಿಯಾನದಲ್ಲಿ ಕುಮಟಾ ತಾಲ್ಲೂಕು ವೈದ್ಯಾಧಿಕಾರಿ ಡಾ.ಆಜ್ಞಾ ನಾಯಕ, ಸ್ಥಳೀಯ ವೈದ್ಯಾಧಿಕಾರಿ ಡಾ.ಜಗದೀಶ ನಾಯ್ಕ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದಿನೇಶ ನಾಯ್ಕ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು