ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಪೌರಕಾರ್ಮಿಕರ ಕೈಗೆಟುಕದ ‘ಗೃಹಭಾಗ್ಯ’

₹1.35 ಕೋಟಿ ವೆಚ್ಚದಲ್ಲಿ 18 ಮನೆ ನಿರ್ಮಿಸುವ ಯೋಜನೆ
Last Updated 22 ಜೂನ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ನಗರದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರಿಗೆ ಸ್ವಂತ ಮನೆ ಒದಗಿಸುವ ‘ಪೌರಕಾರ್ಮಿಕರ ಗೃಹಭಾಗ್ಯ’ ಯೋಜನೆ ಜಾರಿಗೆ ನಗರಸಭೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ವ್ಯಕ್ತವಾಗಿದೆ.

₹1.35 ಕೋಟಿ ವೆಚ್ಚದಲ್ಲಿ 18 ಮನೆಗಳನ್ನು ನಿರ್ಮಿಸುವ ಯೋಜನೆಗೆ ವರ್ಷದ ಹಿಂದೆಯೇ ಅನುಮತಿ ದೊರೆತಿದೆ. ವಸತಿ ಸಮುಚ್ಚಯ ನಿರ್ಮಾಣಕ್ಕೆ ಜಾಗವೂ ಅಂತಿಮಗೊಂಡಿದೆ. ಆದರೆ, ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ.

ಮರಾಠಿಕೊಪ್ಪದ ವಿಶಾಲ ನಗರದಲ್ಲಿ ₹47 ಲಕ್ಷ ವೆಚ್ಚದಲ್ಲಿ ನಗರಸಭೆಯು 6 ಮನೆಗಳ ವಸತಿ ಸಮುಚ್ಚಯ ನಿರ್ಮಿಸಿದೆ. 2017ರಲ್ಲೇ ಆರಂಭಗೊಂಡಿದ್ದ ಕಾಮಗಾರಿ ಕಳೆದ ವರ್ಷ ಮುಗಿಯುವ ಹಂತದಲ್ಲಿದ್ದಾಗ ಉದ್ಘಾಟನೆಗೆ ಸಿದ್ಧತೆ ನಡೆದಿತ್ತು. ತಾಂತ್ರಿಕ ಕಾರಣ ನೀಡಿ ಮುಂದೂಡಲಾಗಿತ್ತು.

‘ಐದಾರು ತಲೆಮಾರುಗಳಿಂದ ವಾಸವಿದ್ದರೂ ಸ್ವಂತ ಜಾಗವಿಲ್ಲ. ಅತಿಕ್ರಮಣ ಜಾಗ ಸಕ್ರಮಗೊಳಿಸಿಕೊಡುವ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ. ಸ್ವಂತ ಮನೆ ನಿರ್ಮಾಣಕ್ಕೆ ಜಾಗದ ಅಡಚಣೆ ಇದೆ. ಸರ್ಕಾರ ಮನೆ ಮಂಜೂರು ಮಾಡಿದರೂ ಅವುಗಳನ್ನು ಕಟ್ಟಿಕೊಡಲು ವಿಳಂಬ ಮಾಡಲಾಗುತ್ತಿದೆ’ ಎಂಬುದು ಹಲವು ಪೌರಕಾರ್ಮಿಕರ ದೂರು.

‘ಮರಾಠಿಕೊಪ್ಪದ ವಿಶಾಲ ನಗರದಲ್ಲಿ ಈಗಾಗಲೆ 6 ಮನೆಗಳ ವಸತಿ ಸಮುಚ್ಚಯ ನಿರ್ಮಿಸಲಾಗಿದೆ. ಹಲವು ವರ್ಷಗಳಿಂದ ಈ ಕಟ್ಟಡ ನಿರ್ಮಾಣ ನಡೆಯುತ್ತಿದೆ. ಈವರೆಗೆ ಪೂರ್ಣಗೊಳಿಸಿ ಪೌರಕಾರ್ಮಿಕರಿಗೆ ಹಸ್ತಾಂತರಿಸಿಲ್ಲ. ಇದು ಪೌರಕಾರ್ಮಿಕರ ಬಗ್ಗೆ ನಗರಸಭೆ ತೋರುತ್ತಿರುವ ನಿರ್ಲಕ್ಷ್ಯ ಧೋರಣೆಗೆ ಉದಾಹರಣೆ’ ಎನ್ನುತ್ತಾರೆ ಮುನ್ಸಿಪಲ್ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಪ್ಪ ನಾಯ್ಕ.

‘ನಗರವನ್ನು ನಸುಕಿನಲ್ಲೇ ಸ್ವಚ್ಛಗೊಳಿಸುವ ಪೌರಕಾರ್ಮಿಕರು ಉಳಿದುಕೊಳ್ಳಲು ಸುಸಜ್ಜಿತ ಮನೆ ಇಲ್ಲದಿರುವುದು ಆಡಳಿತ ವ್ಯವಸ್ಥೆಯ ದುರಂತ. 6 ಮನೆಗಳ ನಿರ್ಮಾಣಕ್ಕೆ ಐದಾರು ವರ್ಷ ವಿಳಂಬ ಮಾಡಲಾಗಿದೆ. 18 ಮನೆ ನಿರ್ಮಿಸುವ ಎರಡನೇ ಹಂತದ ಯೋಜನೆಯನ್ನು ನಗರಸಭೆ ಜಾರಿಗೊಳಿಸುತ್ತದೆಯೇ ಎಂಬ ಸಂಶಯವಿದೆ’ ಎಂದರು.

‘ಪೌರಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಕರ್ಯಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಅವರ ದೂರು ಆಲಿಸಿ ಪರಿಹರಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾಮಟ್ಟದಲ್ಲಿ ಪೌರಕಾರ್ಮಿಕರ ಕುಂದುಕೊರತೆ ಸಭೆ ನಡೆಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸುಭಾಷ ಮಂಡೂರ ಒತ್ತಾಯಿಸಿದರು.

--------------

ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ಮೊದಲ ಹಂತ ಪೂರ್ಣಗೊಂಡಿದ್ದು ಸದ್ಯದಲ್ಲೇ ಮನೆಗಳ ಹಸ್ತಾಂತರ ನಡೆಯಲಿದೆ. ಇದೇ ವೇಳೆ ಎರಡನೇ ಹಂತದ ಯೋಜನೆಗೆ ಚಾಲನೆ ನೀಡಲಾಗುತ್ತದೆ.

–ಕೇಶವ ಚೌಗುಲೆ, ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT