ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಸಾಗಾಟ ನಿಶ್ಚಿಂತೆ, ಗ್ರಾಹಕರದ್ದೇ ಚಿಂತೆ

ಬಾಳೆ, ಅನಾನಸ್, ಕಲ್ಲಂಗಡಿ ಸಾಗಾಟಕ್ಕೆ ಅನುಮತಿ
Last Updated 7 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ತೋಟಗಾರಿಕಾ ಬೆಳೆಗಳ ಸಾಗಾಟಕ್ಕೆ ಆಡಳಿತ ಅನುಮತಿ ಕಲ್ಪಿಸಿದೆ. ಆದರೆ, ಖರೀದಿಸುವವರೇ ಇಲ್ಲದ ಕಾರಣ ಬೆಳೆದ ಬೆಳೆಗಳನ್ನು ಸಾಗಾಟ ಮಾಡಲಾಗದ ಸ್ಥಿತಿಯಲ್ಲಿ ಬೆಳೆಗಾರರಿದ್ದಾರೆ.

ಬಾಳೆ, ಅನಾನಸ್, ಕಲ್ಲಂಗಡಿ ಜಿಲ್ಲೆಯ ಪ್ರಮುಖ ಹಣ್ಣಿನ ಬೆಳೆಗಳು. ಕಟಾವಿಗೆ ಬಂದಿರುವ ಬೆಳೆಗಳು ಗದ್ದೆಯಲ್ಲೇ ಕೊಳೆಯುತ್ತಿರುವುದನ್ನು ರೈತರು ಗಮನಕ್ಕೆ ತಂದಾಗ ಜಿಲ್ಲಾಡಳಿತ, ಹಾಪ್‌ಕಾಮ್ಸ್, ಎಪಿಎಂಸಿ, ಖರೀದಿದಾರರು ಮತ್ತು ಬೆಳೆಗಾರರ ಸಭೆ ನಡೆಸಿ, ಮಾರುಕಟ್ಟೆ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೇ, ಜಿಲ್ಲೆ, ಹೊರ ಜಿಲ್ಲೆಗಳಿಗೆ ವಾಹನ ಸಾಗಾಟಕ್ಕೆ ಅನುಮತಿಯನ್ನು ನೀಡಿದೆ.

ಆದರೆ, ಲಾಕ್‌ಡೌನ್ ಇರುವ ಕಾರಣ, ಜನರು ಮನೆಯಿಂದ ಹೊರಬರುತ್ತಿಲ್ಲ. ರಸ್ತೆ ಬದಿಯ ಮಾರಾಟ ಸಂಪೂರ್ಣ ನಿಷೇಧವಾಗಿದೆ. ಹೀಗಾಗಿ, ರೈತರು ಕಷ್ಟಪಟ್ಟು ಬೆಳೆಸಿದ ಹಣ್ಣುಗಳಿಗೆ ಬೇಡಿಕೆಯಿಲ್ಲದ ಕಾರಣ ಬೆಲೆ ಪಾತಾಳಕ್ಕೆ ಕುಸಿದಿದೆ. ತೊಡಗಿಸಿದ ಬಂಡವಾಳವೂ ಕೈತಪ್ಪಿ ಹೋಗುವ ಆತಂಕ ಎದುರಾಗಿದೆ.

‘ಜನವರಿಯಿಂದ ಆರಂಭವಾಗಿರುವ ಅನಾನಸ್‌ ಕೊಯ್ಲು ಜೂನ್‌ವರೆಗೂ ನಡೆಯುತ್ತದೆ. ದಿನಕ್ಕೆ ಸರಾಸರಿ 100 ಟನ್ ಹಣ್ಣು ಕೊಯ್ಲಿಗೆ ಸಿಗುತ್ತದೆ. ಅನಾನಸ್‌ಗೆ ಮುಖ್ಯ ಮಾರುಕಟ್ಟೆಯಾಗಿದ್ದ ದೆಹಲಿ, ಪಂಜಾಬ್‌ನಲ್ಲಿ ಬೇಡಿಕೆ ಗಣನೀಯವಾಗಿ ತಗ್ಗಿದೆ. ಸೋಮವಾರ ಅಲ್ಲಿನ ಮಾರುಕಟ್ಟೆ ಪ್ರಮುಖರನ್ನು ಸಂಪರ್ಕಿಸಲಾಗಿದ್ದು, ಅವರು ಅಸ್ಸಾಂನಿಂದ ಕಡಿಮೆ ಬೆಲೆಗೆ ಸಿಗುವ ಹಣ್ಣನ್ನು ಖರೀದಿಸುತ್ತಿದ್ದಾರೆ. ಬೆಳೆಗಾರರು ಹೇಳುವಂತೆ ಇಲ್ಲಿಂದ ಅನಾನಸ್ ಸಾಗಾಟ ಮಾಡಲು ಕೆ.ಜಿ.ಯೊಂದಕ್ಕೆ ಸರಾಸರಿ ₹ 6ರಿಂದ7 ಖರ್ಚಾಗುತ್ತದೆ. ಮಾರುಕಟ್ಟೆಯಲ್ಲಿ ಇದೇ ದರಕ್ಕೆ ಹಣ್ಣು ಮಾರಾಟವಾಗುತ್ತಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಬಿ.ಪಿ.ಸತೀಶ.

‘ಬನವಾಸಿಯಲ್ಲಿರುವ ಎರಡು ಹಾಗೂ ಸಿದ್ದಾಪುರ ಒಂದು ಅನಾನಸ್ ಸಂಸ್ಕರಣಾ ಫ್ಯಾಕ್ಟರಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಇದರಿಂದ ದಿನಕ್ಕೆ 50 ಟನ್‌ನಷ್ಟು ಅನಾನಸ್‌ ಸಂಸ್ಕರಿಸಬಹುದು. ಕರಾವಳಿಯಲ್ಲಿ ಹೆಚ್ಚಿರುವ ಕಲ್ಲಂಗಡಿ ಅರ್ಧದಷ್ಟು ಕಟಾವು ಆಗಿದೆ. ಕಾರವಾರದ ಕಲ್ಲಂಗಡಿ ಹಣ್ಣನ್ನು ಗೋವಾ, ಕೇರಳಕ್ಕೆ ಸಾಗಾಟ ಮಾಡಲು ಅನುಮತಿ ನೀಡಲಾಗಿದೆ. ಆದರೆ, ಕಲ್ಲಂಗಡಿ ಕೆ.ಜಿ.ಯೊಂದಕ್ಕೆ ₹ 10ರಿಂದ 12 ಇದ್ದ ದರ, ಈಗ ₹ 4ರಿಂದ 5ಕ್ಕೆ ಕುಸಿದಿದೆ. ಬನವಾಸಿಯಲ್ಲಿ ಬೆಳೆದಿರುವ ಕಲ್ಲಂಗಡಿಗೆ ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಬಾಳೆಕಾಯಿ ವರ್ಷವಿಡೀ ಬೆಳೆಯುವ ಬೆಳೆ. ದಿನಕ್ಕೆ 50–60 ಟನ್ ಕಟಾವಿಗೆ ಬರುತ್ತದೆ. ಸ್ಥಳೀಯವಾಗಿ ಐದು ಟನ್ ಮಾರಾಟವಾದರೆ, ಉಳಿದ ಬೆಳೆ ಗೋವಾ, ಕೇರಳಕ್ಕೆ ಹೋಗುತ್ತದೆ. ಗ್ರಾಹಕರಿಗೆ ಮನೆ–ಮನೆ ತಲುಪಿಸಲು ಕೊಂಡಿಯಾಗಿ ಕೆಲಸ ಮಾಡುವಂತೆ ಹಾಪ್‌ಕಾಮ್ಸ್‌ಗೆ ಸೂಚಿಸಲಾಗಿದೆ. ಸುಮಾರು 25 ಹೆಕ್ಟೇರ್‌ನಲ್ಲಿ ಬೆಳೆಯುವ ಭಟ್ಕಳ ಮಲ್ಲಿಗೆ ಮಾತ್ರ ಮಾರುಕಟ್ಟೆಯಿಲ್ಲದೇ ಬಾಡುತ್ತಿದೆ. ತೋಟಗಾರಿಕೆ ಬೆಳೆಗಳ ಖರೀದಿ, ಮಾರಾಟ ಸಂಬಂಧ ರಾಜ್ಯ ಸರ್ಕಾರ ಆಸಕ್ತಿವಹಿಸಿದ್ದು, ಪ್ರತಿ ದಿನದ ಪ್ರಗತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತೋಟಗಾರಿಕಾ ಇಲಾಖೆಯನ್ವಯ ಹಣ್ಣಿನ ಬೆಳೆ ವಿವರ

ಹಣ್ಣು:ಬೆಳೆಯುವ ಪ್ರದೇಶ

ಅನಾನಸ್:225 ಹೆಕ್ಟೇರ್

ಬಾಳೆ:4200 ಹೆಕ್ಟೇರ್

ಕಲ್ಲಂಗಡಿ: 105 ಹೆಕ್ಟೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT