ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಗೇರಿ ವಿಮಾನ ನಿಲ್ದಾಣ ನಿರ್ಮಾಣ ತಡೆಯುವ ಪ್ರಶ್ನೆಯೇ ಇಲ್ಲ: ಶಿವರಾಮ ಹೆಬ್ಬಾರ

ನಿರಾಶ್ರಿತರನ್ನೂ ಕೈಬಿಡುವುದಿಲ್ಲ: ಸಚಿವ ಹೆಬ್ಬಾರ ಭರವಸೆ
Last Updated 27 ಜುಲೈ 2020, 16:07 IST
ಅಕ್ಷರ ಗಾತ್ರ

ಕಾರವಾರ: ‘ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯನ್ನು ತಡೆಯುವ ಪ್ರಶ್ನೆಯೇ ಇಲ್ಲ. ಹಾಗೆಂದು ನಿರಾಶ್ರಿತರನ್ನೂ ಕೈಬಿಡುವುದಿಲ್ಲ. ಅವರ ಜೊತೆ ಚರ್ಚಿಸಿ ಅವರಿಗೆ ಅಗತ್ಯವಾದ ಸೌಲಭ್ಯಗಳನ್ನು ನೀಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಸ್ಪಷ್ಟವಾಗಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ಒಂದು ಅವಕಾಶವನ್ನು ನಾವು ಕಳೆದುಕೊಂಡರೆ, ಉತ್ತರ ಕನ್ನಡದಲ್ಲಿ ಮತ್ತೆಂದೂ ವಿಮಾನ ನಿಲ್ದಾಣ ನಿರ್ಮಾಣವಾಗಲು ಸಾಧ್ಯವೇ ಇಲ್ಲ.ನೌಕಾಪಡೆಯವರು ₹ 3,000 ಕೋಟಿ ವೆಚ್ಚ ಮಾಡಿ 1,290 ಎಕರೆ ಜಮೀನನ್ನು ವಿಮಾನ ನಿಲ್ದಾಣಕ್ಕೆ ಅಭಿವೃದ್ಧಿ ಮಾಡುತ್ತಿದ್ದಾರೆ. ಅಂಥದ್ದರಲ್ಲಿ ₹ 200ರಿಂದ ₹ 250 ಕೋಟಿ ಖರ್ಚು ಮಾಡಿ 90– 95 ಎಕರೆ ಜಮೀನನ್ನು ನಾವು ಕೊಟ್ಟರೆ ಜಿಲ್ಲೆಗೆ ವಿಮಾನ ನಿಲ್ದಾಣ ಸಿಗುತ್ತದೆ. ಇದರಿಂದ ಉದ್ಯೋಗಾವಕಾಶ, ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಹಾಗಾಗಿ ಈ ಯೋಜನೆ ಮಾತ್ರ ನಿಲ್ಲುವುದಿಲ್ಲ’ ಎಂದು ಒತ್ತಿ ಹೇಳಿದರು.

‘ಜನರ ಸಹಭಾಗಿತ್ವವಿಲ್ಲದೇ ಯಾವುದೇ ಕಾಮಗಾರಿ ಸಾಧ್ಯವಿಲ್ಲ. ವಾಸ್ತವಿಕತೆಯನ್ನು ಮುಚ್ಚಿಟ್ಟು ಮಾಡಲೂ ಅಸಾಧ್ಯ. ನಮ್ಮ ಜಿಲ್ಲೆಯ ಜನ ವಿವಿಧ ಯೋಜನೆಗಳಿಗೆ ನಿರಾಶ್ರಿತರಾಗಿ ಭಯಗೊಂಡಿದ್ದಾರೆ. ಹಾಗಾಗಿ, ನಿರಾಶ್ರಿತರಿಗೆ ಪರ್ಯಾಯ ಜಾಗ ಒದಗಿಸುವುದು ಹಾಗೂ ವಿಮಾನ ನಿಲ್ದಾಣ ನಿರ್ಮಾಣದ ಕೆಲಸವನ್ನು ಏಕಕಾಲಕ್ಕೆ ಮಾಡುವುದು ನನ್ನ ಆದ್ಯತೆಯಾಗಿದೆ’ ಎಂದು ಹೇಳಿದರು.

‘ಕೆಲಸಗಳು ಮಾಜಿ ಆಗಲಾರವು’:

‘ರಾಜಕಾರಣದಲ್ಲಿ ನಾವು ಬೇರೆ ಬೇರೆ ಪಕ್ಷಗಳಲ್ಲಿರುತ್ತೇವೆ. ಚುನಾವಣೆಗಳು ಬಂದಾಗ ಆರೋಪ ಪ್ರತ್ಯಾರೋಪಗಳು ಸಹಜವಾಗಿರುತ್ತವೆ. ಆದರೆ, ಇಷ್ಟು ದೊಡ್ಡ ಅಭಿವೃದ್ಧಿ ಯೋಜನೆಗಳು ಜಿಲ್ಲೆಗೆ ಸಿಗುವಾಗ ವಿರೋಧಿಸಬಾರದು. ನಾವು ಯಾರೂ ಅಧಿಕಾರದಲ್ಲಿ ಶಾಶ್ವತವಾಗಿ ಇರುವುದಿಲ್ಲ. ಆದರೆ, ನಮ್ಮ ಕೆಲಸಗಳು ಮಾಜಿ ಆಗಲು ಸಾಧ್ಯವಿಲ್ಲ’ ಎಂದು ಶಿವರಾಮ ಹೆಬ್ಬಾರ ಮಾರ್ಮಿಕವಾಗಿ ನುಡಿದರು.

‘ವಿಮಾನ ನಿಲ್ದಾಣ ಯೋಜನೆಯನ್ನು ಆರ್.ವಿ.ದೇಶ‍ಪಾಂಡೆ ಸ್ವಾಗತಿಸಿದ್ದಾರೆ. ಇದು ರೂಪುಗೊಳ್ಳಲು ಅವರ ಕಠಿಣ ಪರಿಶ್ರಮವೂ ಇದೆ. ಅವರ ನಾಯಕತ್ವದಲ್ಲಿ ಆ ಕಾಲಕ್ಕೆ ಸಾಕಷ್ಟು ಕೆಲಸಗಳಾಗಿವೆ. ಈಗಲೂ ಅವರ ಅನುಭವದ ಆಧಾರದಲ್ಲಿ ಸಹಾಯ ಕೋರುತ್ತೇನೆ. ಅದೇರೀತಿ, ವಿರೋಧ ಪಕ್ಷಗಳ ಮುಖಂಡರಾದ ಆನಂದ ಅಸ್ನೋಟಿಕರ್ ಹಾಗೂ ಸತೀಶ ಸೈಲ್ ಇಬ್ಬರಿಗೂ ಸಹಕರಿಸುವಂತೆ ಕೈ ಜೋಡಿಸಿ ವಿನಂತಿ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT