ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠಕ್ಕೆ ಸಮಯವಿಲ್ಲ ತರಬೇತಿ ಮುಂದೂಡಿ...

ಮುಂಡಗೋಡ: ವಿವಿಧ ಪಠ್ಯೇತರ ಕಾರ್ಯಕ್ರಮಗಳಿಂದ ಹೊರೆ; ಪ್ರಾಥಮಿಕ ಶಾಲಾ ಶಿಕ್ಷಕರ ಮನವಿ
Last Updated 16 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಮುಂಡಗೋಡ: ಪಾಠ ಮಾಡಬೇಕಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿಗಳ ಮೇಲೆ ತರಬೇತಿ ನೀಡುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಥಮ ಸೆಮಿಸ್ಟರ್ ಪರೀಕ್ಷೆ ಬಂದರೂ ಪಾಠ ಮುಗಿಸದ ಚಿಂತೆ ಒಂದೆಡೆಯಾದರೆ,ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕಿರುವ ಒತ್ತಡಮತ್ತೊಂದೆಡೆ. ಇದುಶಿಕ್ಷಕರನ್ನು ಹೈರಾಣಾಗಿಸಿದೆ.ಏಕಕಾಲದಲ್ಲಿ ತರಬೇತಿ ಹಾಗೂ ಪರೀಕ್ಷೆಯ ಜವಾಬ್ದಾರಿ ನಿರ್ವಹಿಸಲು ತೊಂದರೆಯಾಗುತ್ತಿದೆ.‘ಗುರುಚೇತನ’ ತರಬೇತಿಗಳನ್ನು ಮುಂದೂಡುವಂತೆ ಈಗಾಗಲೇ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಡಿ.ಎಸ್.ಇ.ಆರ್‌.ಟಿ ನಿರ್ದೇಶಕರಿಗೆ ಮನವಿ ಮಾಡಿದೆ.

ಶೈಕ್ಷಣಿಕ ವರ್ಷದ ಆರಂಭದಲ್ಲಿ ಮಕ್ಕಳ ದಾಖಲಾತಿ, ಸೇತುಬಂಧ, ಪೂರ್ವ ಪರೀಕ್ಷೆ, ದಾಖಲಾತಿಗಳ ಕ್ರೋಡೀಕರಣ ಮಾಡುವಷ್ಟರಲ್ಲಿ ಜೂನ್ಮುಗಿಯುತ್ತದೆ. ನಂತರ ಪಾಠಕ್ಕೆ ವೇಗ ನೀಡುವಷ್ಟರಲ್ಲಿ, ವಲಯ ಮಟ್ಟದ ಕ್ರೀಡಾಕೂಟ, ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಆರಂಭವಾಗುತ್ತವೆ. ಇದೆಲ್ಲದರ ನಡುವೆ ಆಗಸ್ಟ್ ತಿಂಗಳಲ್ಲಿಮಳೆಯಿಂದ ಕೆಲವೆಡೆ ವಾರಗಟ್ಟಲೇ ಶಾಲೆಗೆ ರಜೆ ಸಿಕ್ಕಿದೆ. ಇದರಿಂದ ಪಾಠಕ್ಕೆ ನಿಗದಿತ ಸಮಯ ಸಿಗುತ್ತಿಲ್ಲ ಎಂದು ಶಿಕ್ಷಕರು ದೂರುತ್ತಾರೆ.

ತರಬೇತಿ:ಪ್ರತಿ ತಿಂಗಳು ಒಂದಿಲ್ಲೊಂದು ತರಬೇತಿಗೆ ಇಲ್ಲಿನ ಶಿಕ್ಷಕರನ್ನು ನಿಯೋಜಿಸಲಾಗಿದೆ. ವಿಜ್ಞಾನ ತರಬೇತಿ, ಮಾಡ್ಯೂಲ್ ತರಬೇತಿ, ಕನ್ನಡ ವ್ಯಾಕರಣ ವಿಷಯ ಹೀಗೆ ಒಟ್ಟು 20 ದಿನ ಕಾಲ ತರಬೇತಿ ನಡೆದಿದೆ. ಬುನಾದಿ ಸಾಮರ್ಥ್ಯ ಆಧಾರಿತ ತರಬೇತಿ ಸಹ ನಡೆಸಲಾಗಿದೆ. ಇದಲ್ಲದೇ ಹಾವೇರಿ, ಬೆಳಗಾವಿ, ಮೈಸೂರುಗಳಲ್ಲಿ ನಡೆದ ‘ಬುನಾದಿ ತರಬೇತಿ’ ಕಾರ್ಯಕ್ರಮಗಳಲ್ಲಿ ಸಹ ತಾಲ್ಲೂಕಿನ ಶಿಕ್ಷಕರು ಪಾಲ್ಗೊಂಡಿದ್ದಾರೆ. ಅಲ್ಲಿಯೂ10 ದಿನಗಳವರೆಗೆ ತರಬೇತಿ ನೀಡಲಾಗಿದೆ. ಇದೆಲ್ಲದರ ಮಧ್ಯೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಇಲ್ಲಿಯವರೆಗೆ 70–80 ದಿನಗಳು ಮಾತ್ರ ಪಾಠ ಮಾಡಲು ಸಮಯ ಸಿಕ್ಕಿದೆ ಎನ್ನಲಾಗಿದೆ.

‘ಶಿಕ್ಷಕರಿಗೆ ತರಬೇತಿ ನೀಡುವುದು ತಪ್ಪಲ್ಲ. ಆದರೆ, ನಿರಂತರವಾಗಿ ತರಬೇತಿ ಪ್ರಕ್ರಿಯೆ ನಡೆಸುವುದರಿಂದ ಬೋಧನೆಗೆ ಹಿನ್ನಡೆಯಾಗುತ್ತದೆ’ ಎನ್ನುತ್ತಾರೆ ಪಾಲಕರಾದ ಅಶೋಕ ಅಂತೋಜಿ, ಸಹದೇವಪ್ಪ ಓಣಿಕೇರಿ.

ಅಧಿಕಾರಿಗೆ ಮನವಿ ಸಲ್ಲಿಕೆ:‘ಪಾಠ ಮಾಡಲು ಸಮಯ ಸಾಲುತ್ತಿಲ್ಲ. ಪರೀಕ್ಷೆಗೆ ಪೂರ್ವ ತಯಾರಿ ಸಹ ಮಾಡಬೇಕಾಗಿದೆ. ಪ್ರತಿಭಾ ಕಾರಂಜಿ, ಕ್ರೀಡಾಕೂಟಕ್ಕೂ ಸಮಯ ಬೇಕಾಗಿದೆ. ಮಂಗಳವಾರದಿಂದ ಐದು ದಿನಗಳವರೆಗೆ ಗುರುಚೇತನ ತರಬೇತಿ ಆಯೋಜಿಸಲಾಗಿದೆ. ಆದರೆ, ಶಿಕ್ಷಕರು ಬರಲು ಆಗುವುದಿಲ್ಲ. ತರಬೇತಿಯನ್ನು ಮುಂದೂಡಿ ಎಂದು ಈಗಾಗಲೇಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ನೀಡಿದ್ದೇವೆ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರದೀಪ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT