ಬುಧವಾರ, ಸೆಪ್ಟೆಂಬರ್ 18, 2019
26 °C
ಮುಂಡಗೋಡ: ತಾತ್ಕಾಲಿಕ ದುರಸ್ತಿ ಕೈಗೊಂಡ ಅಧಿಕಾರಿಗಳು, ಗ್ರಾಮಸ್ಥರು

ನ್ಯಾಸರ್ಗಿ ದೊಡ್ಡ ಕೆರೆಯ ಬಲದಂಡೆ ಕುಸಿತ

Published:
Updated:
Prajavani

ಮುಂಡಗೋಡ: ತಾಲ್ಲೂಕಿನ ನ್ಯಾಸರ್ಗಿ ದೊಡ್ಡ ಕೆರೆಯ ಜಾಕ್ವೆಲ್ ಸಮೀಪದ ಬಲದಂಡೆಯ ಮೆಟ್ಟಿಲುಗಳು ಗುರುವಾರ ಕುಸಿದಿವೆ.  ಸ್ಥಳದಲ್ಲಿ ಐದಾರು ಅಡಿ ಆಳದ ಗುಂಡಿ ಕಾಣಿಸಿಕೊಂಡಿದೆ. ಇದನ್ನು ಅಧಿಕಾರಿಗಳು ಮತ್ತು ಗ್ರಾಮಸ್ಥರು ಕೂಡಲೇ ದುರಸ್ತಿ ಮಾಡಿದರು.

ಕುಸಿತದಿಂದ ಆತಂಕಗೊಂಡ ದಡಪಾತ್ರದ ಗ್ರಾಮಸ್ಥರು ತುರ್ತು ಕಾಮಗಾರಿಗೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ತಹಶೀಲ್ದಾರ್ ಶ್ರೀಧರ ಮುಂದಲಮನಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‌

‘ಬಲದಂಡೆಯಲ್ಲಿ ಉಂಟಾಗಿರುವ ಕುಸಿತಕ್ಕೆ ಕೂಡಲೇ ಕ್ರಮ ಕೈಗೊಳ್ಳಿ. ಏನಾದರೂ ಅಪಾಯ ಇದ್ದರೆ ಮುಂಚಿತವಾಗಿ ತಿಳಿಸಿ’  ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಮುರಳೀಧರ ಅವರಿಗೆ ಸೂಚಿಸಿದರು.

ಮಣ್ಣಿನ ಚೀಲ ಹಾಕಿದರು: ಜಾಕ್ವೆಲ್ ಮೂಲಕ ನೀರು ಹೆಚ್ಚಿನ ಪ್ರಮಾಣದಲ್ಲಿ ಹೋಗುತ್ತಿದ್ದ ಕಾರಣ ಮಣ್ಣು ಕುಸಿಯುವುದು ಮುಂದುವರಿದಿತ್ತು. ಹಾಗಾಗಿ ಮಣ್ಣು ತುಂಬಿದ ಚೀಲಗಳನ್ನು ಜಾಕ್ವೆಲ್‌ನಲ್ಲಿ ಇಳಿಸಲಾಯಿತು. ಆದರೂ ಕಾಲುವೆಯಲ್ಲಿ ನೀರು ಸಣ್ಣ ಪ್ರಮಾಣದಲ್ಲಿ ಹರಿದುಹೋಗುತ್ತಿದ್ದುದು ಕಂಡುಬಂತು.

‘ಕಾಲುವೆ ದಾರಿಯಲ್ಲಿಯೇ ಮಣ್ಣು ಕುಸಿದಿದೆ. ಮಣ್ಣು ತುಂಬಿದ 100ಕ್ಕೂ ಹೆಚ್ಚು ಚೀಲಗಳನ್ನು ಹಾಕಿ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ. ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಜಲಾಶಯ ತುಂಬಿತ್ತು. ಆಗಲೇ ಅಪಾಯದ ಮುನ್ಸೂಚನೆ ಅರಿತು, ಕೆಲವು ದಿನಗಳ ಹಿಂದೆ ಬಲಭಾಗದಲ್ಲಿ ಎರಡು ಕಾಲುವೆ ನಿರ್ಮಿಸಿ ಹೆಚ್ಚುವರಿ ನೀರನ್ನು ಹಳ್ಳಕ್ಕೆ ಬಿಡಲಾಗಿತ್ತು. ಆಗ ಎರಡು ಅಡಿಗಳಷ್ಟು ನೀರು ಕಡಿಮೆ ಮಾಡಲಾಗಿತ್ತು. ಆದರೂ ಬಲದಂಡೆಯಲ್ಲಿ ಕುಸಿದಿರುವುದು ಆತಂಕ ತಂದಿದೆ’ ಎಂದು ಗ್ರಾಮಸ್ಥ ಜಗದೀಶ ಕುರುಬರ್ ಹೇಳಿದರು.

‘1,000– 1,200 ಎಕರೆ ಪ್ರದೇಶಕ್ಕೆ ನೀರುಣಿಸುವ ನ್ಯಾಸರ್ಗಿ ದೊಡ್ಡ ಕೆರೆಯು 10 ವರ್ಷಗಳ ಹಿಂದೆ ಒಡೆದಿತ್ತು. ಈಗ ಅದೇ ಭಾಗದಲ್ಲಿ ಮಣ್ಣು ಕುಸಿತವಾಗಿದೆ’ ಎಂದರು.

‘ದೊಡ್ಡ ಕೆರೆಯನ್ನು 1975ರಲ್ಲಿ ನಿರ್ಮಿಸಲಾಗಿದ್ದು, 76.86 ಎಂಸಿಎಫ್‌ಟಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ಹೆಚ್ಚುವರಿಯಾಗಿ ಹರಿಯುವ ನೀರು ಕಾಲುವೆ ಮೂಲಕ ಬೇಡ್ತಿ ಹಳ್ಳ ಸೇರುತ್ತದೆ. ಎರಡು ಜೆಸಿಬಿ ಯಂತ್ರಗಳನ್ನು ಬಳಸಿ ಬಲದಂಡೆ ಕುಸಿತವನ್ನು ಸದ್ಯ ತಡೆಗಟ್ಟಲಾಗಿದೆ' ಎಂದು ಎಂಜಿನಿಯರ್ ಮುರಳೀಧರ ಹೇಳಿದರು.

ಸಿಪಿಐ ಶಿವಾನಂದ ಚಲವಾದಿ, ಕಂದಾಯ ಸಿಬ್ಬಂದಿ ಪರಿಶೀಲಿಸಿದರು.

Post Comments (+)