ಅರಣ್ಯ ಇಲಾಖೆಯ ಸಾಮಾಜಿಕ ಜಾಲತಾಣ ಪುಟ: ಇಂಗ್ಲಿಷ್‌ನಲ್ಲಿ ಮಾಹಿತಿಗೆ ಹಲವರ ಆಕ್ಷೇಪ

ಮಂಗಳವಾರ, ಏಪ್ರಿಲ್ 23, 2019
31 °C
ಪುಟದಲ್ಲಿ ಕನ್ನಡ ಬಳಕೆಗೆ ಒತ್ತಾಯ

ಅರಣ್ಯ ಇಲಾಖೆಯ ಸಾಮಾಜಿಕ ಜಾಲತಾಣ ಪುಟ: ಇಂಗ್ಲಿಷ್‌ನಲ್ಲಿ ಮಾಹಿತಿಗೆ ಹಲವರ ಆಕ್ಷೇಪ

Published:
Updated:
Prajavani

ಕಾರವಾರ: ಅರಣ್ಯ ಇಲಾಖೆಯು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಇಂಗ್ಲಿಷ್ ಭಾಷೆಯನ್ನೇ ಬಳಕೆ ಮಾಡುತ್ತಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಮಹತ್ವದ ವಿಚಾರಗಳನ್ನು ಇಲಾಖೆ ಹಂಚಿಕೊಂಡರೂ ಹಲವರಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಕನ್ನಡದಲ್ಲೇ ಬರೆಯುವಂತೆ ಒತ್ತಾಯ ಕೇಳಿಬಂದಿದೆ. 

ಅರಣ್ಯ ಸಂರಕ್ಷಣೆಗೆ ಅಗತ್ಯವಿದ್ದಾಗ ಭಾಗವಹಿಸಲು ಆಸಕ್ತ ಸ್ವಯಂಸೇವಕರು ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಮಾರ್ಚ್ 29ರಂದು ಇಲಾಖೆಯ ಫೇಸ್‌ಬುಕ್ ಪುಟದಲ್ಲಿ ಮನವಿ ಪ್ರಕಟಿಸಲಾಗಿತ್ತು. ಕಾಡಿಗೆ ಬೆಂಕಿ ಬಿದ್ದಾಗ ಪತ್ತೆ ಹಚ್ಚಲು, ಅದನ್ನು ಕೂಡಲೇ ನಂದಿಸಲು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಇಚ್ಛೆಯುಳ್ಳವರು ಅರಣ್ಯ ಇಲಾಖೆಯ ಸಮೀಪದ ಕಚೇರಿಗೆ ಭೇಟಿ ನೀಡುವಂತೆ ತಿಳಿಸಲಾಗಿತ್ತು. 

ಸ್ವಯಂಸೇವಕರು ಇಲಾಖೆಯ ಸಹಾಯವಾಣಿ ‘1926’ಯನ್ನು ಸಂಪರ್ಕಿಸಿಯೂ ಮಾಹಿತಿ ನೀಡಬಹುದು. ಅವಘಡಗಳಾದಾಗ ಇಲಾಖೆಯ ಸಿಬ್ಬಂದಿ ಕರ್ತವ್ಯದಲ್ಲಿ ತಲ್ಲೀನರಾಗಿರುತ್ತಾರೆ. ಹಾಗಾಗಿ ಸ್ವಯಂಸೇವಕರನ್ನು ‘ಅತಿಥಿ’ಗಳ ರೀತಿಯಲ್ಲಿ ಉಪಚರಿಸಲು ಸಾಧ್ಯವಾಗದು. ಆದ್ದರಿಂದ ಸಂದರ್ಭವನ್ನು ಅರಿತು ಕೈಜೋಡಿಸುವವರು ಮುಂದೆ ಬರಬಹುದು ಎಂದೂ ಬರಹದಲ್ಲಿ ಹೇಳಲಾಗಿತ್ತು. 

ಅಗ್ನಿ ಅವಘಡ ನಡೆದ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಇಲಾಖೆಯ ಬಳಿಯಿರುವ ಆಹಾರ ಮತ್ತು ನೀರು ಪೂರೈಕೆ ಮಾಡಿದರೆ ದೊಡ್ಡ ಉಪಕಾರ ಮಾಡಿದಂತಾಗುತ್ತದೆ. ಅಲ್ಲದೇ ಕಾಡಂಚಿನ ಗ್ರಾಮಸ್ಥರಲ್ಲಿ ಅರಣ್ಯಕ್ಕೆ ಬೆಂಕಿ ಹಚ್ಚದಂತೆ ಅರಿವು ಮೂಡಿಸುವುದು ಬಹುಮುಖ್ಯ ಎಂದು ಬರೆಯಲಾಗಿತ್ತು. 

ಅಗತ್ಯವಿದ್ದ ಸಂದರ್ಭದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಮತ್ತು ರಾತ್ರಿಯಿಂದ ಬೆಳಗಿನವರೆಗೆ ಪ್ರತ್ಯೇಕವಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಬೇಕು. ಇಲಾಖೆಯಿಂದ ವಾಸ್ತವ್ಯಕ್ಕೆ ಸೌಲಭ್ಯ ಲಭ್ಯವಿಲ್ಲ ಎಂದು ತಿಳಿಸಲಾಗಿತ್ತು. 

‘ಇಲಾಖೆಯ ಫೇಸ್‌ಬುಕ್ ಪುಟದ ತುಂಬ ಇಂಗ್ಲಿಷ್ ಬರಹಗಳೇ ತುಂಬಿವೆ. ಯಾವುದೇ ಇಲಾಖೆಯು ಜನರಿಗೆ ಹತ್ತಿರವಾಗಲು ಅಥವಾ ದೂರವಾಗಲು ಇಂತಹ ಸಣ್ಣ ಸಣ್ಣ ವಿಚಾರಗಳೂ ಕಾರಣವಾಗುತ್ತವೆ ಎಂಬುದು ಹಿರಿಯ ಅಧಿಕಾರಿಗಳಿಗೆ ತಿಳಿಯದ ವಿಚಾರವಲ್ಲ’ ಎನ್ನುತ್ತಾರೆ ಈಗಾಗಲೇ ಸ್ವಯಂಸೇವಕರಾಗಿರುವ ಮುಂಡಗೋಡ ತಾಲ್ಲೂಕಿನ ಗ್ರಾಮಸ್ಥರೊಬ್ಬರು.

‘ಯಾರ ಸಲುವಾಗಿ ಬರಹ?’: ‘ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಮನವಿಗಳನ್ನು ಪ್ರಕಟಿಸುವುದು ಉತ್ತಮ ನಡೆಯಾಗಿದೆ. ಆದರೆ, ಇದನ್ನು ಕನ್ನಡದಲ್ಲೇ ಪ್ರಕಟಿಸಿದ್ದರೆ ಮತ್ತಷ್ಟು ಜನರಿಗೆ ಸುಲಭವಾಗಿ ಅರ್ಥವಾಗುತ್ತಿತ್ತು’ ಎಂಬ ಆಕ್ಷೇಪ ಶಿರಸಿಯ ಪ್ರಸನ್ನ ಹೆಗಡೆ ಅವರದ್ದು.

‘ಸ್ವಯಂಸೇವಕರಾಗಿ ಮುಂದೆ ಬರುವವರಲ್ಲಿ ಹೆಚ್ಚಿನವರು ಕಾಡಂಚಿನ ಗ್ರಾಮಸ್ಥರು. ಅವರಲ್ಲಿ ಹಲವರು ಸಾಮಾಜಿಕ ಜಾಲತಾಣಗಳನ್ನು ಇತ್ತೀಚಿಗೆ ಬಳಕೆ ಮಾಡುತ್ತಿದ್ದಾರೆ. ಅವರಿಗೆ ಇಂಗ್ಲಿಷ್ ಅಷ್ಟಕ್ಕಷ್ಟೆ ಎಂಬಂತಿರುತ್ತದೆ. ಇಲಾಖೆಯವರು ಇಂಗ್ಲಿಷ್‌ನಲ್ಲಿ ಯಾರ ಸಲುವಾಗಿ ಬರೆದಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ. ಅದೂ ಅಲ್ಲದೇ ಕರ್ನಾಟಕ ರಾಜ್ಯ ಸರ್ಕಾರದ್ದೇ ಇಲಾಖೆಯಿದು. ಬೇರೆ ಯಾವುದೋ ರಾಜ್ಯದ್ದಲ್ಲ. ಅಧಿಕಾರಿಗಳು ಇಂಗ್ಲಿಷ್ ಮೇಲಿನ ಮೋಹ ಕಡಿಮೆ ಮಾಡಬೇಕು’ ಎಂದು ಅವರು ಆಗ್ರಹಿಸುತ್ತಾರೆ.

ಅರಣ್ಯ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗದಿಂದ ಈ ಪುಟವನ್ನು ನಿರ್ವಹಿಸುತ್ತಿದ್ದು, ಸಂಬಂಧಿಸಿದವರು ಪ್ರತಿಕ್ರಿಯೆಗೆ ಲಭಿಸಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !