ಮಂಗಳವಾರ, ಮೇ 17, 2022
24 °C
ಬೆಂಗಳೂರಿನ ಯು.ಸಿ.ಎಂ ಆಕ್ರೋಶ

ಶಿರಸಿ– ಕುಮಟಾ ರಾಷ್ಟ್ರೀಯ ಹೆದ್ದಾರಿ: ಅನುಮತಿಗೂ ಮೊದಲೇ ಕಾಮಗಾರಿ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಶಿರಸಿ–ಕುಮಟಾ ನಡುವಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ (ಸಂಖ್ಯೆ 766ಇ) ಮರಗಳನ್ನು ತೆರವು ಮಾಡುತ್ತಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಅಂತಿಮ ಅನುಮತಿ ಸಿಗುವ ಮೊದಲೇ ಕಾಮಗಾರಿ ಆರಂಭಿಸಲಾಗಿದೆ ಎಂದು ಬೆಂಗಳೂರಿನ ‘ಯುನೈಟೆಡ್ ಕನ್ಸರ್ವೇಷನ್ ಮೂವ್‌ಮೆಂಟ್’ (ಯು.ಸಿ.ಎಂ) ಸಂಘಟನೆಯು ದೂರಿದೆ.

ಹೆದ್ದಾರಿ ವಿಸ್ತರಣೆಗಾಗಿ ಮರಗಳನ್ನು ತೆರವು ಮಾಡದಂತೆ 2020ರ ಡಿ.22ರಂದು ರಾಜ್ಯ ಹೈಕೋರ್ಟ್‌ನಲ್ಲಿ ಸಂಘಟನೆಯು ಅರ್ಜಿ ಸಲ್ಲಿಸಿತ್ತು. ಅದನ್ನು ಆಧರಿಸಿ ನ್ಯಾಯಾಲಯವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್.ಎಚ್.ಎ.ಐ) ಜನವರಿ 5ರಂದು ನೋಟಿಸ್ ಜಾರಿ ಮಾಡಿತ್ತು. ಅರಣ್ಯ ಸಚಿವಾಲಯವು ಕಾಮಗಾರಿಗೆ 2020ರ ಸೆ.23ರಂದು ನೀಡಿದ ಮೊದಲ ಹಂತದ ಅನುಮತಿಯನ್ನೇ ಮುಂದಿಟ್ಟುಕೊಂಡು ಕಾಮಗಾರಿ ಆರಂಭಿಸಲಾಗಿದೆ. ಆದರೆ, ಮರಗಳನ್ನು ಕತ್ತರಿಸುವ ಮೊದಲು ಎನ್.ಎಚ್.ಎ.ಐ ಹಾಗೂ ಅರಣ್ಯ ಇಲಾಖೆಯು ಹೈಕೋರ್ಟ್‌ನಿಂದ ಅನುಮತಿ ಪಡೆದಿಲ್ಲ ಎಂದು ಆರೋಪಿಸಿದೆ.

ತರಾತುರಿಯಲ್ಲಿ ಮರಗಳನ್ನು ಕಡಿದು ಹಾಕುವುದು ನ್ಯಾಯಾಲಯಕ್ಕೆ ಅಗೌರವ ತೋರಿದಂತಾಗುತ್ತದೆ. ಈ ಎಲ್ಲ ಅಂಶಗಳೂ ಎರಡೂ ಇಲಾಖೆಗಳ ಅಧಿಕಾರಿಗಳಿಗೆ ತಿಳಿದಿದೆ. ಆದರೂ ಕಾಮಗಾರಿ ಮುಂದುವರಿಸಿರುವುದು ಸರಿಯಲ್ಲ. ಮರಗಳನ್ನು ತೆರವು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಸಂಘಟನೆಯು ಆಗ್ರಹಿಸಿದೆ.

ಒಟ್ಟು 58.92 ಕಿ.ಮೀ. ರಾಜ್ಯ ಹೆದ್ದಾರಿಯನ್ನು ₹ 440.16 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಕೇಂದ್ರ ಸರ್ಕಾರದ ‘ಸಾಗರಮಾಲಾ’ ಯೋಜನೆಯಡಿ ತಡಸ– ಬೇಲೆಕೇರಿ ಸಂಪರ್ಕಿಸುವ ರಸ್ತೆ ಇದಾಗಿದೆ. ಶಿರಸಿ ಮತ್ತು ಹೊನ್ನಾವರ ಅರಣ್ಯ ವಲಯದಲ್ಲಿ ಈ ರಸ್ತೆ ಸಾಗುತ್ತದೆ.

ರಸ್ತೆಯು ಹಾದುಹೋಗುವ ಪ್ರದೇಶವು ಪಶ್ಚಿಮಘಟ್ಟವಾಗಿದ್ದು, ಅಮೂಲ್ಯ ಪ್ರಾಕೃತಿಕ ಸಂಪತ್ತನ್ನೊಳಗೊಂಡಿದೆ. ಹಾಗಾಗಿ ರಸ್ತೆ ವಿಸ್ತರಣೆ ಮಾಡದಂತೆ ಪರಿಸರವಾದಿಗಳು ಆಕ್ಷೇಪವೆತ್ತಿದ್ದರು. ಇದರಿಂದ ಎರಡು ವರ್ಷಗಳ ಹಿಂದೆ ಗುತ್ತಿಗೆ ಆಗಿದ್ದರೂ ಕಾಮಗಾರಿ ವಿಳಂಬವಾಗಿತ್ತು. ಬಳಿಕ ರಸ್ತೆ ವಿಸ್ತರಣೆಯ ಪ್ರಮಾಣವನ್ನು ಕಡಿಮೆ ಮಾಡಿದ ಎನ್.ಎಚ್.ಎ.ಐ, ಪುನಃ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿತು. ಈ ಪ್ರಸ್ತಾವಕ್ಕೆ 2020ರ ಸೆ.19ರಂದು ಸಚಿವಾಲಯವು ಒಪ್ಪಿಗೆ ನೀಡಿತ್ತು.

‘ಸೂಚನೆ ಬಂದಿಲ್ಲ’

‘ಹೆದ್ದಾರಿ ವಿಸ್ತರಣೆಗೆ ಮರಗಳ ಕಟಾವು ಪ್ರಕ್ರಿಯೆ ಕುರಿತು ಬೆಂಗಳೂರಿನ ಸಂಘಟನೆಯೊಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಮಾಹಿತಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕಟಾವು ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ, ನ್ಯಾಯಾಲಯದಿಂದ ನಮಗೆ ಈವರೆಗೆ ಯಾವುದೇ ಸೂಚನೆ ಬಂದಿಲ್ಲ. ಕಾನೂನು ಕ್ರಮಗಳ ಬಗ್ಗೆ ತಜ್ಞರ ಜತೆ ಚರ್ಚಿಸಿ ಕೆಲಸ ಮುಂದುವರಿಸುವ ಕುರಿತು ನಿರ್ಧರಿಸಲಾಗುವುದು’ ಎಂದು ಶಿರಸಿಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ತಿಳಿಸಿದ್ದಾರೆ.

ಹೊನ್ನಾವರ ವಲಯದ ಅರಣ್ಯ ಉಪ ಸಂರಕ್ಷಣಾಧಿಕಾರಿ ಗಣಪತಿ ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು