ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ: ಮಾಹಿತಿ ಗೌಪ್ಯವಾಗಿಟ್ಟಲ್ಲಿ ಕ್ರಮ

ಹೊರ ಪ್ರದೇಶಗಳಿಂದ ಬಂದವರು ಸ್ವಯಂ ಪ್ರೇರಣೆಯಿಂದ ವಿವರ ನೀಡಲು ಸೂಚನೆ
Last Updated 5 ಮೇ 2020, 12:19 IST
ಅಕ್ಷರ ಗಾತ್ರ

ಶಿರಸಿ: ಹೊರಜಿಲ್ಲೆ, ಹೊರ ರಾಜ್ಯಗಳಿಂದ ಉಪವಿಭಾಗದ ತಾಲ್ಲೂಕುಗಳಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಯ ಬಗ್ಗೆ ಆಡಳಿತಕ್ಕೆ ಮಾಹಿತಿ ಇರುತ್ತದೆ. ಚೆಕ್‌ಪೋಸ್ಟ್ ತಪ್ಪಿಸಿಕೊಂಡು ಬಂದವರಿದ್ದಲ್ಲಿ, ತಕ್ಷಣ ತಾವಾಗಿಯೇ ಬಂದು ಮಾಹಿತಿ ನೀಡಬೇಕು. ಮಾಹಿತಿ ಗೌಪ್ಯವಾಗಿಟ್ಟಲ್ಲಿ ಅಂತಹವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಮಂಗಳವಾರ ಇಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಹಾಗೂ ಡಿವೈಎಸ್ಪಿ ಜಿ.ಟಿ.ನಾಯಕ ಅವರು, ‘ಲಾಕ್‌ಡೌನ್ ನಿಯಮ ಸಡಿಲಿಕೆ ಮಾಡಿರುವ ಕಾರಣಕ್ಕೆ ಜನರು ಅನಗತ್ಯವಾಗಿ ಪೇಟೆಗೆ ಬರಬಾರದು. ಹೊರ ಊರುಗಳಲ್ಲಿ ಸಿಲುಕಿಕೊಂಡಿರುವವರು ಜಿಲ್ಲೆಗೆ ಬರುತ್ತಿರುವುದರಿಂದ ಇಲ್ಲಿನ ನಿವಾಸಿಗಳು ಸಾಕಷ್ಟು ಎಚ್ಚರಿಕೆವಹಿಸಬೇಖು. ಯಾವುದೇ ಮನೆಗೆ ಹೊರ ಪ್ರದೇಶದಿಂದ ಜನರು ಬಂದರೆ, ಮಾಹಿತಿ ಸಂಗ್ರಹಿಸಿ, ಅವರ ಮನೆಗೆ ಕೆಂಪು ಸ್ಟಿಕರ್ ಅಂಟಿಸಲಾಗುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಟಾಸ್ಕ್‌ಫೋರ್ಸ್ ಕೆಲಸ ಮಾಡುತ್ತಿದೆ. ಜನರು ಸಹ ಆಡಳಿತಕ್ಕೆ ಮಾಹಿತಿ ನೀಡುವ ಮೂಲಕ, ಕೊರೊನಾ ಸೋಂಕು ನಿಯಂತ್ರಿಸಲು ಸಹಕರಿಸಬೇಕು’ ಎಂದರು.

ಎಪಿಎಂಸಿಯಲ್ಲಿ ರೈತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅವಕಾಶ ನೀಡಲಾಗಿದೆ. ಅಂಗಡಿಯ ಮುಂದೆ ಮೂರ್ನಾಲ್ಕು ಜನರು ಒಟ್ಟಿಗೆ ನಿಲ್ಲುವಂತಿಲ್ಲ. ಪರಸ್ಪರ ಅಂತರ ಕಾಪಾಡಬೇಕು. 144 ಕಲಂನ ನಿಯಮ ಪಾಲನೆ ಮಾಡಬೇಕು. ಸಲೂನ್‌ಗಳಲ್ಲಿ ಒಂದೇ ಕುರ್ಚಿ ಇರಬೇಕು. ಕಟಿಂಗ್ ಮಾಡುವ ಮತ್ತು ಮಾಡಿಸಿಕೊಳ್ಳುವ ಒಬ್ಬ ವ್ಯಕ್ತಿ ಮಾತ್ರ ಒಳಗಿರಬಹುದು. ಬಂಗಾರದ ಅಂಗಡಿಗಳಲ್ಲಿ ಒಂದು ಕುಟುಂಬದ ಇಬ್ಬರು ಮಾತ್ರ ಒಮ್ಮೆ ಒಳಹೋಗಬಹುದು ಎಂದು ಹೇಳಿದರು.

ಉಪವಿಭಾಗದ ಎಂಟು ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ಗಂಟೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಹೊರ ಪ್ರದೇಶಗಳಿಂದ ಬಂದವರ ಮಾಹಿತಿಯನ್ನು ಅಲ್ಲಿ ದಾಖಲಿಸಲಾಗುತ್ತದೆ. ಕ್ವಾರಂಟೈನ್‌ನಲ್ಲಿರುವವರ ಬಗ್ಗೆ ಜಿಯೊ ಫೆನ್ಸಿಂಗ್ ಮಾಡಲಾಗುತ್ತದೆ. ಹೊರಗಿನಿಂದ ಬಂದವರು ಸ್ವಯಂ ಪ್ರೇರಣೆಯಿಂದ ಬಂದು ತಾವು ಬಂದಿರುವ ಮಾಹಿತಿ ನೀಡಬೇಕು. ಈ ಸಂಗತಿಯನ್ನು ಮುಚ್ಚಿಟ್ಟರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಪೌರಾಯುಕ್ತ ರಮೇಶ ನಾಯಕ ಇದ್ದರು.

ವರ್ತಕರ ಸಭೆ

ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರು, ಜವಳಿ ವರ್ತಕರು, ಸವಿತಾ ಸಮಾಜದವರು, ಆಟೊ ಚಾಲಕರು, ಕಿರಾಣಿ ವರ್ತಕರು, ಸಣ್ಣ ಕೈಗಾರಿಕೆ, ಬೇಕರಿ, ಹೋಟೆಲ್ ಮಾಲೀಕರು, ಔಷಧ ಅಂಗಡಿ ವರ್ತಕರ ಸಭೆಗಳನ್ನು ನಡೆಸಿ, ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳ ಕುರಿತು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT