ಗುರುವಾರ , ನವೆಂಬರ್ 21, 2019
20 °C

ಆಹಾರ ಸುರಕ್ಷತಾ ತಂಡದಿಂದ ಪರಿಶೀಲನೆ

Published:
Updated:
Prajavani

ಕಾರವಾರ: ನಗರದ ಕೋಳಿ ಮಾಂಸ ಮಾರಾಟದ ಅಂಗಡಿಗಳು, ಹೋಟೆಲ್‍ಗಳು ಮತ್ತು ಬೇಕರಿಗಳಿಗೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಿಯಮಗಳನ್ನು ಪಾಲಿಸದವರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಯಿತು.

ಪರಿಶೀಲನೆಯ ವೇಳೆ, ಕೋಳಿ ಮಾಂಸ ಮಾರಾಟದ ಅಂಗಡಿಗಳಲ್ಲಿ ಗಾಜು ಅಳವಡಿಸದೇ ಇರುವುದು ಗಮನಕ್ಕೆ ಬಂತು. ಈ ಬಗ್ಗೆ ವರ್ತಕರಿಗೆ ಅಂಗಡಿಗಳ ಮುಂಭಾಗಕ್ಕೆ ಕಡ್ಡಾಯವಾಗಿ ಗಾಜು ಅಳವಡಿಸಲು ಸೂಚಿಸಲಾಯಿತು. ಬೇಕರಿಗಳಲ್ಲಿ ಮುದ್ರಿತ ಕಾಗದಗಳಲ್ಲಿ ತಿನಿಸುಗಳನ್ನು ನೋಡದಂತೆ ಹಾಗೂ ಕೂಡಿಡದಂತೆ ತಿಳಿಸಲಾಯಿತು. ಹೋಟೆಲ್‍ಗಳಲ್ಲಿ ಸ್ವಚ್ಛತೆಯನ್ನು ಪರಿಶೀಲಿಸಿದ ಅಧಿಕಾರಿಗಳು, ಅಡುಗೆಯ ರುಚಿ ಹೆಚ್ಚಿಸಲು ಆರೋಗ್ಯಕ್ಕೆ ಮಾರಕವಾಗಿರುವ ರಾಸಾಯನಿಕ ಪದಾರ್ಥಗಳನ್ನು ಬಳಸದಂತೆ ಎಚ್ಚರಿಕೆ ನೀಡಲಾಯಿತು.

ಬೇಕರಿಗಳಲ್ಲಿ ಆಹಾರ ಉತ್ಪನ್ನ ತಯಾರಿಸಿದ ಮತ್ತು ಅವಧಿ ಮುಗಿಯುವ ದಿನಾಂಕಗಳನ್ನು ಅವುಗಳ ಪೊಟ್ಟಣಗಳ ಮೇಲೆ ಕಡ್ಡಾಯವಾಗಿ ಮುದ್ರಿಸಬೇಕು. ಅವಧಿ ಮೀರಿದ ತಿನಿಸುಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಇದೇವೇಳೆ, ಎಲ್ಲ ವರ್ತಕರಿಗೂ ಆಹಾರ ಸುರಕ್ಷತೆಯ ಮಾರ್ಗಸೂಚಿಗಳ ಪಟ್ಟಿಯನ್ನೂ ನೀಡಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಗುಣಮಟ್ಟ ತಪಾಸಣಾ ಹಾಗೂ ಅಂಕಿತಾಧಿಕಾರಿ ಡಾ.ವಿನೋದ್ ಭೂತೆ, ಆಹಾರ ತಪಾಸಣಾಧಿಕಾರಿ ಅರುಣಕಾಶಿ ಭಟ್, ನಗರಸಭೆ ಆರೋಗ್ಯ ನಿರೀಕ್ಷಕ ಯಾಕೂಬ್ ಶೇಖ್ ಇದ್ದರು.

ಪ್ರತಿಕ್ರಿಯಿಸಿ (+)