ಮನೆಯ ಗೋಡೆಯಲ್ಲಿ ಹಳೆಯ ಕಾರವಾರ!

7
ಇಂದು ‘ವಿಶ್ವ ಛಾಯಾಗ್ರಾಹಕರ ದಿನ’: ನಗರದ ಇತಿಹಾಸದ ಮೇಲೆ ಕಪ್ಪು ಬಿಳುಪಿನ ಬೆಳಕು

ಮನೆಯ ಗೋಡೆಯಲ್ಲಿ ಹಳೆಯ ಕಾರವಾರ!

Published:
Updated:
Deccan Herald

ಕಾರವಾರ:  ಹೆಂಚಿನ ಮನೆಯ ಗೋಡೆಯ ತುಂಬ ಮೂರು–ನಾಲ್ಕು ದಶಕಗಳಷ್ಟು ಹಳೆಯ, ಕಪ್ಪು ಬಿಳು‍ಪಿನ ದೊಡ್ಡ ದೊಡ್ಡ ಫೋಟೊಗಳು. ಅವುಗಳ ಕೆಳಭಾಗದಲ್ಲಿ ಆ ಊರುಗಳ ಹೆಸರು. 

ಇದು ನಗರದ ಹಿರಿಯ ಛಾಯಾಗ್ರಾಹಕ ಪಾಂಡುರಂಗ ಹರಿಕಂತ್ರ ಅವರ ಮನೆಯ ದೃಶ್ಯ. ಸುಮಾರು ನಾಲ್ಕು ದಶಕಗಳಿಂದ  ನೆರಳು– ಬೆಳಕಿನ ಸಂಯೋಜನೆಯಲ್ಲಿ ಕೃತಿಗಳನ್ನು ರಚಿಸುವುದರಲ್ಲಿ ಅವರು ತೊಡಗಿಕೊಂಡಿದ್ದಾರೆ. ಅತ್ಯಂತ ಅಪರೂಪದ ಚಿತ್ರಗಳನ್ನು ಅವರು ಕಾಪಿಟ್ಟಿದ್ದಾರೆ.

ಕಾರವಾರ ಮತ್ತು ಅಂಕೋಲಾ ನಡುವೆ ಇರುವ ಹಲವಾರು ಸುಂದರ ಕಡಲತೀರಗಳು ಒಂದು ಕಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣಗಳಾಗಿದ್ದವು. ಆದರೆ, 1999ರಲ್ಲಿ ಸೀಬರ್ಡ್ ನೌಕಾನೆಲೆ ಯೋಜನೆಗೆಂದು ಈ ಕಡಲತೀರಗಳನ್ನು ಹಸ್ತಾಂತರಿಸಲಾಯಿತು. ನಂತರ ಅಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಯಿತು. ಹೀಗಾಗಿ ಅಂಜುದೀವ್ ದ್ವೀಪ, ಅರಗಾ, ಚೆಂಡಿಯಾ ಸಮೀಪದ ಅಮಂಗಿ, ಬಿಣಗಾ ಕಡಲತೀರಗಳು ಜನಸಾಮಾನ್ಯರಿಂದ ದೂರವಾದವು. ಅವುಗಳ ಕಪ್ಪು ಬಿಳುಪಿನ ಫೋಟೊಗಳು ಇವರ ಗೋಡೆಗಳನ್ನು ಅಲಂಕರಿಸಿವೆ.

‘ಅಂದು ಕಡಲತೀರಕ್ಕೆ ಹೋಗಲು ಯಾರ ಹಂಗೂ ಇರಲಿಲ್ಲ. ಆ ದಿನಗಳಲ್ಲಿ ಈಗಿನಂತೆ ಸ್ಥಳಗಳ ಬಗ್ಗೆ ಮಾಹಿತಿ ಇರುತ್ತಿರಲಿಲ್ಲ. ಹುಡುಕುತ್ತಾ ಹೋಗಿ ಒಂದು ಕೋನವನ್ನು ಗುರುತಿಸಿ ಫೋಟೊ ತೆಗೆಯಬೇಕಿತ್ತು’ ಎಂದು ಪಾಂಡುರಂಗ ಮಾತಿಗಿಳಿದರು.

‘ಕ್ಯಾಮೆರಾದಲ್ಲಿ ರೀಲ್ ಲೋಡ್ ಮಾಡಿ ಕ್ಲಿಕ್ಕಿಸಿದ ಬಳಿಕ ಅದು ಮುದ್ರಣವಾಗಿ ಕೈ ಸೇರುವವರೆಗೂ ಅದೇನೋ ಕುತೂಹಲ ಇರುತ್ತಿತ್ತು. ಅಂದಿನ ದಿನಗಳಲ್ಲಿ ಕ್ಯಾಮೆರಾ ಹೊಂದಿದವರಿಗೆ ವಿಶೇಷ ಸ್ಥಾನಮಾನವಿತ್ತು’ ಎನ್ನುವ ಅವರು, ‘ಆಗ ಕಷ್ಟಪಟ್ಟು ವೃತ್ತಿ ಮಾಡಬೇಕಿತ್ತು. ಸಂಪಾದನೆಯೂ ಅಷ್ಟಕ್ಕಷ್ಟೇ ಇತ್ತು. ಈಗಿನಂತೆ ಎಲ್ಲವೂ ಡಿಜಿಟಲ್ ಆಗಿ, ಕ್ಷಣಮಾತ್ರದಲ್ಲಿ ಸಿಗುತ್ತಿರಲಿಲ್ಲ. ಹೀಗಾಗಿ ಈಗಿನ ಫೋಟೊಗ್ರಫಿಯಲ್ಲಿ ನಿಗೂಢತೆಯಿಲ್ಲ’ ಎನ್ನುತ್ತಾ ತಮ್ಮ ಮೊದಲ ಕ್ಯಾಮೆರಾ ‘ಕ್ಲಿಕ್‌ 3’ಯನ್ನು ಮುಂದಿಟ್ಟರು. ಅದನ್ನು ಅವರು ಹೊಸಪೇಟೆಯಲ್ಲಿ ₹ 150ಕ್ಕೆ ಖರೀದಿಸಿದ್ದರಂತೆ!

56ರ ಹರೆಯದ ಅವರು ತಮ್ಮ 12ನೇ ವಯಸ್ಸಿನಲ್ಲೇ ಈ ‘ವೆಚ್ಚದಾಯಕ ಹವ್ಯಾಸ’ ತಮ್ಮದಾಗಿಸಿಕೊಂಡರು. ‘ನಗರದ ಕೆಲವು ಛಾಯಾಗ್ರಾಹಕರನ್ನು ನೋಡಿ ನಾನೂ ಈ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂಬ ಹಂಬಲ ಮೂಡಿತು. ಅಂದಿನಿಂದ ಬದಲಾಗುತ್ತಲೇ ಇರುವ ತಾಂತ್ರಿಕತೆಗೆ ಒಗ್ಗಿಕೊಂಡು ಬಂದೆ’ ಎನ್ನುತ್ತಾರೆ ಅವರು.

‘ರಂಪಣಿ’ಯ ಚಿತ್ರ: ಬೃಹದಾಕಾರದ ಬಲೆಯನ್ನು ಸಮುದ್ರದಲ್ಲಿ ‘U’ ಆಕಾರದಲ್ಲಿ ಬಿಟ್ಟು ಮೀನುಗಾರಿಕೆ ಮಾಡುವ ‘ರಂಪಣಿ’ ಪದ್ಧತಿ ಈಗ ಇತಿಹಾಸದ ಪುಟ ಸೇರಿದೆ. ಇದರ ಬಗ್ಗೆ 1973ರಲ್ಲಿ ಕ್ಲಿಕ್ಕಿಸಿದ ಏಕೈಕ ಚಿತ್ರ ಅವರ ಅಚ್ಚುಮೆಚ್ಚಿನದ್ದಾಗಿದೆ.

ಪಾಂಡುರಂಗ ಅವರ ಸಾಧನೆಯನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ. ಕೈಗಾ ಕನ್ನಡ ಸಂಘದ ‘ಡಾ.ಅಡಿಗಾ ಪ್ರಶಸ್ತಿ’, ಜಿಲ್ಲಾಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ‘ಟ್ಯಾಗೋರ್ ಜಿಲ್ಲಾ ಪ್ರಶಸ್ತಿ’ಯೂ ಸಂದಿದೆ.

‘ಆ ಅವಕಾಶ ಸಿಗಲೇ ಇಲ್ಲ!’

‘ಒಂದುಬಾರಿ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಸಮೀಪ ಸಮುದ್ರದಲ್ಲಿ ಡಾಲ್ಫಿನ್‌ಗಳು ನೆಗೆಯುತ್ತಿದ್ದವು. ಅವುಗಳನ್ನು ನೋಡುತ್ತ ನಾನು ಕ್ಯಾಮೆರಾದಲ್ಲಿ ರೀಲ್‌ ಅನ್ನು ತಿರುಗಿಸಲು ಮರೆತೇಬಿಟ್ಟಿದ್ದೆ. ಕೆಲವೇ ನಿಮಿಷಗಳಲ್ಲಿ ಅವು ಮರೆಯಾದವು. ನನಗೆ ಆ ಫೋಟೊ ತೆಗೆಯುವ ಅವಕಾಶ ಮತ್ತೆಂದೂ ಸಿಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !