ಭಾನುವಾರ, ಜನವರಿ 26, 2020
27 °C

ರೈಲ್ವೆ ಟಿಕೆಟ್ ಅಕ್ರಮ ಮಾರಾಟ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ತಾಲ್ಲೂಕಿನ ಕುರ್ನಿಪೇಟೆಯಲ್ಲಿ ರೈಲ್ವೆ ಟಿಕೆಟ್‌ಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ರೈಲ್ವೆ ಭದ್ರತಾ ಪಡೆಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಲಯವು ₹ 6 ಸಾವಿರ ದಂಡ ವಿಧಿಸಿದೆ.

ಇಲ್ಲಿನ ಕೈಗಾ ರಸ್ತೆಯಲ್ಲಿರುವ ಹೆಗ್ಡೆ ಏಜೆನ್ಸೀಸ್‌ನ ಅರುಣ ಕುಮಾರ್ ಬಂಧಿತರು. ಅವರ ಅಂಗಡಿಯಲ್ಲಿ ರೈಲ್ವೆ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಸಹಾಯಕ ಭದ್ರತಾ ಆಯುಕ್ತ ಪ್ರವೀಣ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಿದರು. 

ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ಮುಂದಿನ ದಿನಾಂಕ ನಮೂದಿಸಿದ್ದ ₹ 3,137 ಮೌಲ್ಯದ ಒಂದು ಟಿಕೆಟ್ ಹಾಗೂ ಬಳಕೆಯಾದ ₹ 85,867 ಮೌಲ್ಯದ 39 ಇ–ಟಿಕೆಟ್‌ಗಳು ಪತ್ತೆಯಾದವು. ರೈಲ್ವೆ ಇಲಾಖೆಯ ಪರವಾನಗಿ ಪಡೆದಿರುವ ಒಂದು ಡಾಂಗಲ್, ₹ 620 ನಗದು, ಸಿಮ್ ಅಳವಡಿಸಿದ್ದ ಒಂದು ಮೊಬೈಲ್ ಫೋನ್ ಹಾಗೂ ರೈಲ್ವೆ ಟಿಕೆಟ್ ಮಾರಾಟಕ್ಕೆ ಬಳಸುತ್ತಿದ್ದ ಇತರ ವಸ್ತುಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡರು.

ರೈಲ್ವೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಬೇರೆ ಬೇರೆ ಹೆಸರಿನಲ್ಲಿ ನೊಂದಣಿ ಮಾಡಿಕೊಂಡು ಟಿಕೆಟ್ ಪಡೆದುಕೊಳ್ಳುತ್ತಿದ್ದ ಬಗ್ಗೆ ವಿಚಾರಣೆಯಿಂದ ತಿಳಿದುಬಂದಿದೆ. ರೈಲ್ವೆ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಅಪರಾಧಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ದಂಡ ಪಾವತಿಸಿದ ಬಳಿಕ ಬಿಡುಗಡೆ ಮಾಡಲಾಯಿತು.

ಜಪ್ತಿ ಮಾಡಿರುವ ನಗದು ಹಾಗೂ ಇತರ ವಸ್ತುಗಳನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ. ಇ–ಟಿಕೆಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಕೊಂಕಣ ರೈಲ್ವೆಯ ಉಪ ಪ್ರಧಾನ ವ್ಯವಸ್ಥಾಪಕ ಬಿ.ಜಿ.ಘಾಟ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು