ಶುಕ್ರವಾರ, ಮಾರ್ಚ್ 5, 2021
30 °C
ನಿಯಮ ಮೀರಿದರೆ ಕ್ರಮ

ಮಿತಿಮೀರಿದ ಹೋಮ್ ಸ್ಟೇಗಳು: ‘ಉದ್ಯಮದ ನೋಂದಣಿಗೆ ಒಂದು ಅವಕಾಶ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಮಾಲೀಕರು ಸ್ಥಳದಲ್ಲಿ ವಾಸವಿಲ್ಲದ ಹೋಮ್ ಸ್ಟೇಗಳನ್ನು ಉದ್ಯಮವೆಂದು ನೋಂದಣಿ ಮಾಡಿಕೊಳ್ಳಲು ಒಂದು ಬಾರಿಯ ಅವಕಾಶ ನೀಡಲಾಗಿದೆ. ತಪ್ಪಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಹೋಮ್ ಸ್ಟೇಗಳ ಸಂಖ್ಯೆ ಬಹಳ ಜಾಸ್ತಿಯಾಗಿದೆ. ನಿಯಮದ ಪ್ರಕಾರ ಹೋಮ್ ಸ್ಟೇಗಳಲ್ಲಿ ಮಾಲೀಕರು ಕೂಡ ವಾಸವಿರಬೇಕು. ಮನೆಯ ವಾತಾವರಣವೇ ಅಲ್ಲಿರಬೇಕು. ಇದರಿಂದ ಒಂಟಿ ಪ್ರವಾಸಿಗರಿಗೆ, ವಿಶೇಷವಾಗಿ ಮಹಿಳೆಯರಿಗೆ ಸುರಕ್ಷತೆಯಿರುತ್ತದೆ. ಆದರೆ, ಈಗ ನಿರ್ಮಾಣವಾಗಿರುವ ಹೋಮ್ ಸ್ಟೇಗಳ ಸ್ವರೂಪ ಹಾಗಿಲ್ಲ. ಆದ್ದರಿಂದ ಅವುಗಳನ್ನು ಪುನರ್ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ರ‍್ಯಾಫ್ಟಿಂಗ್ ಮುಂತಾದ ಸಾಹಸ ಕ್ರೀಡೆಗಳಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳನ್ನೂ ಅನುಸರಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಇನ್ನುಮುಂದೆ ನಿಯಮ ಮೀರಿದ ಆಯೋಜಕರ ಹಾಗೂ ಭಾಗವಹಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಸಮುದ್ರದಲ್ಲಿ ಈಜಲು ಹೋಗಿ ಅಪಾಯ ತಂದುಕೊಳ್ಳುವವರನ್ನು ಈಗ ಜೀವರಕ್ಷಕ ಸಿಬ್ಬಂದಿ ರಕ್ಷಿಸುತ್ತಿದ್ದಾರೆ. ಆದರೆ, ಇನ್ನುಮುಂದೆ ನಿಬಂಧನೆಗಳನ್ನು ಮೀರಿ ಈಜಲು ಹೋದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದೂ ಎಚ್ಚರಿಕೆ ನೀಡಿದರು.

‘ಸ್ಫೋಟಕ್ಕೆ ಅನುಮತಿ ಕಡ್ಡಾಯ’: ‘ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಸ್ಫೋಟದ ಬಳಿಕ ಕಾರವಾರದಲ್ಲೂ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಲಾಗಿದೆ. ಎಲ್ಲಿ ಕೂಡ ಜಿಲ್ಲಾಧಿಕಾರಿಯ ಅನುಮತಿ ಇಲ್ಲದೇ ಸ್ಫೋಟ ಮಾಡುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶವಿಲ್ಲ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು