ಗುರುವಾರ , ಫೆಬ್ರವರಿ 20, 2020
19 °C
ಮಾರುಕಟ್ಟೆಗೆ ಬಂದ ಕಲ್ಲಂಗಡಿ

₹100ಕ್ಕೆ ಇಳಿಯಿತು ಈರುಳ್ಳಿ ದರ: ಮುಂದುವರಿದ ಮೀನಿನ ಅಭಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮಾರುಕಟ್ಟೆಯಲ್ಲಿ ತರಕಾರಿಗಳ ದರದಲ್ಲಿ ಏರಿಳಿತ ಕಂಡು ಬಂದಿದ್ದು, ಈರುಳ್ಳಿಯ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಮೀನಿನ ಅಭಾವ ಮುಂದುವರಿದಿದ್ದು, ದುಬಾರಿ ದರದಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಭಾನುವಾರದ ಸಂತೆಯ ವೇಳೆಗೆ ಪ್ರತಿ ಕೆ.ಜಿ.ಗೆ ₹200ರಲ್ಲಿ ಬಿಕರಿಯಾಗುತ್ತಿದ್ದ ಈರುಳ್ಳಿ ದರದಲ್ಲಿ ಅರ್ಧದಷ್ಟು ಇಳಿಕೆ ಕಂಡಿದೆ. ₹100ರಲ್ಲಿ ಒಂದು ಕೆ.ಜಿ. ಈರುಳ್ಳಿ ದೊರೆಯುತ್ತಿದ್ದು, ಗ್ರಾಹಕರಲ್ಲಿ ತುಸು ಸಮಾಧಾನ ತಂದಿದೆ. ಪುಣೆಯಿಂದ ಆವಕಗೊಳ್ಳುತ್ತಿದ್ದ ಈರುಳ್ಳಿಯ ಸಂಗ್ರಹ ಮುಗಿದು ಹೋಗಿದೆ. ಸದ್ಯ ಕರ್ನಾಟಕದ ಈರುಳ್ಳಿ ಮಾರುಕಟ್ಟೆಯಲ್ಲಿದೆ. ದರದಲ್ಲಿ ಅನಿರೀಕ್ಷಿತ ಇಳಿಕೆ ಕಂಡಿದ್ದರಿಂದ ವ್ಯಾಪಾರ ವಹಿವಾಟು ಜೋರಾಗಿದೆ.

ಟೊಮೆಟೊ ದರ ಸ್ಥಿರವಾಗಿದ್ದು ಪ್ರತಿ ಕೆ.ಜಿ.ಗೆ ₹30ರಲ್ಲಿ ಮಾರಾಟವಾಗುತ್ತಿದೆ. ಕ್ಯಾಬೇಜ್, ಆಲೂಗಡ್ಡೆಯೂ ಇದೇ ದರದಲ್ಲಿ ಬಿಕರಿಯಾಗುತ್ತಿವೆ. ಹಿಂದಿನ ವಾರ ₹50ರ ದರವನ್ನು ಹೊಂದಿದ್ದ ಬೀನ್ಸ್ ಈಗ ₹10ರಷ್ಟು ಏರಿಕೆ ಕಂಡಿದ್ದು, ಕೆ.ಜಿ.ಗೆ ₹60ರ ದರ ಹೊಂದಿದೆ. ₹10ರಷ್ಟು ಇಳಿಕೆ ಕಂಡ  ಕ್ಯಾಪ್ಸಿಕಂ ಸದ್ಯ ಕೆ.ಜಿ.ಗೆ ₹50ರಲ್ಲಿ ಗ್ರಾಹಕರ ಕೈಗೆ ಸಿಗುತ್ತಿದೆ. ಹೂಕೋಸಿನ ದರವೂ ಇಳಿಕೆಯಾಗಿದ್ದು, ₹35ರ ದರ ನಿಗದಿಯಾಗಿದೆ. 

ಎರಡು ತಿಂಗಳಿಂದ ₹200ರ ದರದಲ್ಲಿ ಸ್ಥಿರವಾಗಿದ್ದ ಬೆಳ್ಳುಳ್ಳಿಯು ಅಲ್ಪ ಇಳಿಕೆ ಕಂಡಿದ್ದು, ₹180ರ ದರ ಹೊಂದಿದೆ. ಅಂದರೆ ಪ್ರತಿ ಕೆ.ಜಿ.ಗೆ ₹20ರಷ್ಟು ಇಳಿಕೆ ಕಂಡಂತಾಗಿದೆ. ಬೆಂಡೆಕಾಯಿ, ನವಿಲಕೋಸು, ಚವಳಿಕಾಯಿ, ಹೀರೇಕಾಯಿಗಳ ದರ ಸ್ಥಿರವಾಗಿದ್ದು, ಪ್ರತಿ ಕೆ.ಜಿ.ಗೆ ₹50ರಲ್ಲಿ ಮಾರಾಟವಾಗುತ್ತಿದೆ. ಬೀಟ್‌ರೂಟ್, ಬದನೆಕಾಯಿ, ತೊಂಡೆಕಾಯಿ, ಸೌತೆಕಾಯಿಗಳು ₹40ರ ದರ ಹೊಂದಿದೆ.

ಕಲ್ಲಂಗಡಿ ಹಣ್ಣಿಗೆ ಬೇಡಿಕೆ: ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಕಲ್ಲಂಗಡಿ ಹಣ್ಣು ಕೂಡ ಮಾರುಕಟ್ಟೆಗೆ ಬರತೊಡಗಿದೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಎರಡು ತಿಂಗಳು ತಡವಾಗಿ ಬೆಳೆಗಾರರಿಗೆ ಫಸಲು ದೊರೆತಿದೆ. ಕಾರವಾರದ ಭೈರಾ, ಗೋಟೆಗಾಳಿ ಭಾಗದಿಂದ ಆವಕಗೊಳ್ಳುತ್ತಿದ್ದು, ಮಧ್ಯಮ ಗಾತ್ರದ ಒಂದು ಹಣ್ಣಿಗೆ ₹30ರ ದರ ಹೊಂದಿದೆ.

ಮತ್ಸ್ಯಕ್ಷ್ಯಾಮ: ಕರಾವಳಿ ಭಾಗದಲ್ಲಿ ಮೀನು ಪ್ರಿಯರ ಸಂಖ್ಯೆ ಅಧಿಕವಾಗಿದೆ. ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ತಮ್ಮ ನೆಚ್ಚಿನ ಮೀನುಗಳಿಲ್ಲದೇ ಸವಿಯುವುದಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಮೀನಿನ ಅಭಾವ ಮುಂದುವರಿದಿದ್ದು, ಗ್ರಾಹಕರ ತಲೆಬಿಸಿಗೆ ಕಾರಣವಾಗಿದೆ. ಗುರುವಾರ ಬಂಗಡಿ ಮೀನು ಮಾರುಕಟ್ಟೆಯಲ್ಲಿ ಕಾಣಲಿಲ್ಲ. ಮಿಕ್ಕುಳಿದವುಗಳು ಕೂಡ ದುಬಾರಿ ದರದಲ್ಲಿ ಬಿಕರಿಯಾದವು.

ಪಾಂಫ್ರೆಟ್ ಮೀನು ₹200ರಿಂದ 300ರಷ್ಟು ಏರಿಕೆಗೊಂಡಿದ್ದು, ಒಂದು ಕೆ.ಜಿ.ಗೆ ₹1,200ರಿಂದ 1,300ರ ದರದಲ್ಲಿ ಮಾರಾಟಗೊಳ್ಳುತ್ತಿದೆ. ಲೆಪ್ಪೆ ಮೀನು ಒಂದು ಪಾಲಿಗೆ ₹100 ರಿಂದ 150 ಹಾಗೂ ಬೆಳುಂಜೆ ₹200ರಿಂದ ₹250ರ ದರ ಹೊಂದಿದ್ದವು. ಕಿಂಗ್‌ಫಿಶ್ ಮೀನಿಗೆ ₹1,500ರಿಂದ 1,700ರವರೆಗೆ ದರ ನಿಗದಿಯಾಗಿತ್ತು.

***

ಕಾರವಾರ ಮಾರುಕಟ್ಟೆ

ತರಕಾರಿ          ದರ (₹ಗಳಲ್ಲಿ)

ಆಲೂಗಡ್ಡೆ       30

ಟೊಮೆಟೊ      30

ಕ್ಯಾರೆಟ್            80

ಬೀಟ್‌ರೂಟ್     60

ಕ್ಯಾಪ್ಸಿಕಂ          50

ಮೆಣಸಿನಕಾಯಿ;60

ಶುಂಠಿ;100

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು