ಬುಧವಾರ, ಜನವರಿ 29, 2020
29 °C

ಕಾರಿನ ಆಮಿಷವೊಡ್ಡಿ ಯುವತಿಗೆ ಹಣ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಮೊಬೈಲ್‌ಗೆ ಬಂದ ಬಹುಮಾನ ಆಮಿಷದ ಕರೆಯನ್ನು ನಂಬಿದ ನಗರದ ಯುವತಿಯೊಬ್ಬರು ₹ 34,900 ಕಳೆದುಕೊಂಡಿದ್ದಾರೆ.

ಕೋಡಿಬಾಗ ತಾಮ್ಸೆವಾಡಾದ ದಿವ್ಯಾ ಮೋಸ ಹೋದವರು. ಜ.4 ರಂದು ಅವರ ತಂಗಿಯ ಮೊಬೈಲ್‌ಗೆ 85850 58727 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯು, ತಾನು ಆನ್‌ಲೈನ್ ಬಟ್ಟೆ ಶಾಪಿಂಗ್ ವೆಬ್‌ಸೈಟ್ ‘ಕ್ಲಬ್ ಫ್ಯಾಕ್ಟರಿ’ಯ ಪರವಾಗಿ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದ. ತಾವು ಬಹುಮಾನವಾಗಿ ಮಹೀಂದ್ರಾ ಕಾರನ್ನು ಗೆದ್ದಿದ್ದು, ಕಾರು ಬೇಡದಿದ್ದರೆ ಹಣ ಪಡೆಯಬಹುದು ಎಂದು ನಂಬಿಸಿದ್ದ.

ಬಹುಮಾನ ಪಡೆದುಕೊಳ್ಳಲು ₹ 3,500 ನೊಂದಣಿ ಶುಲ್ಕ ಪಾವತಿಸಬೇಕು ಎಂದು ಹೇಳಿ ಎಸ್.ಬಿ.ಐ ಅಕೌಂಟ್ ನಂಬರ್ ತಿಳಿಸಿದ್ದ. ಅದನ್ನು ನಂಬಿದ ದಿವ್ಯಾ, ಹಣ ಜಮೆ ಮಾಡಿದ್ದರು. ಅದಾದ ಸ್ವಲ್ಪ ಹೊತ್ತಲ್ಲೇ ಮೊಬೈಲ್ ಸಂಖ್ಯೆ 62904 17952ರಿಂದ ಇನ್ನೊಂದು ಕರೆ ಬಂತು. ಆ ವ್ಯಕ್ತಿಯು ತಾನು ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕ ಎಂದು ಹೇಳಿದ್ದ.

ತಮ್ಮ ಕೆನರಾ ಬ್ಯಾಂಕ್ ಅಕೌಂಟ್ ನಂಬರಿಗೆ ‘ಕ್ಲಬ್ ಫ್ಯಾಕ್ಟರಿ’ಯಲ್ಲಿ ಗೆದ್ದಿರುವ ₹ 12.60 ಲಕ್ಷವನ್ನು ವರ್ಗಾಯಿಸಲಾಗುವುದು. ಅದಕ್ಕೂ ಮೊದಲು ಕ್ಲಬ್ ಫ್ಯಾಕ್ಟರಿಯವರ ಖಾತೆಗೆ ₹ 15,200ರು ಜಮೆ ಮಾಡಬೇಕು. ಆ ಹಣವು ಮರಳಿ ತಮ್ಮ ಖಾತೆಗೆ ಬರುತ್ತದೆ ಎಂದು ತಿಳಿಸಿದ್ದ.

ಗೂಗಲ್ ಪೇ ಮುಖಾಂತರ ಆ ಹಣವನ್ನೂ ಜಮೆ ಮಾಡಿದ್ದರು. ಮತ್ತೆ ಕರೆ ಮಾಡಿದ ವ್ಯಕ್ತಿಯು ನಗರ ಶುಲ್ಕವೆಂದು ₹ 3,600 ಪಾವತಿಸಲು ಹೇಳಿದ್ದ. ಅದೂ ಜಮೆಯಾದ ಬಳಿಕ ಪುನಃ ₹ 12,600 ನಗರ ಶುಲ್ಕ ಪಾವತಿಗೆ ಹೇಳಿದ್ದ. ಈ ರೀತಿ ಒಟ್ಟು ₹ 34,900 ವಂಚಕರ ಖಾತೆಗೆ ಜಮೆ ಮಾಡಿದ್ದರು. ಅತ್ತ ಬಹುಮಾನವೂ ಇಲ್ಲದೇ ಹಣವೂ ಸಿಗದಾಗ ಮೋಸ ಹೋಗಿದ್ದು ಅರಿವಿಗೆ ಬಂತು.

ಈ ಸಂಬಂಧ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು