ಮದ್ಯದಂಗಡಿ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು

7
ಬಂದ್ ಮಾಡದಿದ್ದರೆ ಉಗ್ರ ಹೋರಾಟ ಮಾಡುವ ಒಕ್ಕೊರಲ ಘೋಷಣೆ

ಮದ್ಯದಂಗಡಿ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು

Published:
Updated:
Deccan Herald

ಶಿರಸಿ: ತಾಲ್ಲೂಕಿನ ಬಚಗಾಂವದಲ್ಲಿ ಎಂಟು ದಿನಗಳ ಹಿಂದೆ ಪ್ರಾರಂಭವಾಗಿರುವ ಎಂಎಸ್‌ಐಎಲ್ ಮದ್ಯದಂಗಡಿಯನ್ನು ಗ್ರಾಮದಿಂದ ಓಡಿಸಲು ಸುತ್ತಲಿನ ಊರುಗಳ ಎಲ್ಲ ಸಮುದಾಯದ ಜನರು ಪಣತೊಟ್ಟಿದ್ದಾರೆ. ಅಂಗಡಿಯ ಬಾಗಿಲು ಮುಚ್ಚದಿದ್ದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ವಿವಿಧ ಸಂಘಟನೆಗಳ ಅಧ್ಯಕ್ಷರು, ಊರ ಪ್ರಮುಖರು ಗುರುವಾರ ಸುದ್ದಿಗೋಷ್ಠಿ ಕರೆದು, ಗ್ರಾಮಸ್ಥರ ವಿರೋಧವನ್ನು ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ ಮಾತನಾಡಿ, ‘ದೊಡ್ನಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಚಗಾಂವದಲ್ಲಿ ಮದ್ಯದಂಗಡಿ ಪ್ರಾರಂಭಿಸುವ ಪೂರ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ನಿರಾಕ್ಷೇಪಣಾ ಪತ್ರ ಪಡೆದಿಲ್ಲ. ನಮ್ಮ ಊರಿಗೆ ಈ ಅಂಗಡಿ ಬೇಡ’ ಎಂದರು.

ಮಸೀದಿ ಸಮಿತಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಸಾಹೇಬ್ ಮಾತನಾಡಿ, ‘ನಾವೆಲ್ಲ ಶಾಂತಿಯಿಂದ ಜೀವನ ನಡೆಸುತ್ತಿದ್ದೇವೆ. ನಮ್ಮ ಊರಿಗೆ ಮದ್ಯದ ಅಂಗಡಿ ಅವಶ್ಯಕತೆಯಿಲ್ಲ’ ಎಂದರು. ‘ರೇಷನ್ ಅಂಗಡಿ ಪ್ರಾರಂಭಿಸುವುದಾಗಿ ಸುಳ್ಳು ಹೇಳಿ, ಕೆಲವರಿಂದ ಸಹಿ ಪಡೆದುಕೊಂಡಿದ್ದಾರೆ. ಈ ಅಂಗಡಿಯನ್ನು ಮುಚ್ಚುವ ತನಕ ನಾವು ಹೋರಾಟ ನಿಲ್ಲಿಸುವುದಿಲ್ಲ’ ಎಂದು ಧರ್ಮಸ್ಥಳ ಸಂಘಗಳ ಒಕ್ಕೂಟದ ಅಧ್ಯಕ್ಷೆ ವನಜಾಕ್ಷಿ ಗೌಡ, ದೇವಾಲಯ ಸಮಿತಿ ಅಧ್ಯಕ್ಷ ಕೃಷ್ಣ ಬಡಿಗೇರ ಎಚ್ಚರಿಸಿದರು.

‘ಅಂಗಡಿ ಇರುವ ಜಾಗದ ಸುತ್ತ ಬೆಟ್ಟ, ಗದ್ದೆ ಇರುವುದರಿಂದ ನಗರದ ಜನರಿಗೆ ಇಲ್ಲಿ ಬಂದು ಮೋಜು ಮಾಡುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ. ನಮ್ಮ ಊರಿನವರಿಗಿಂತ ಹೊರ ಊರಿನವರು ಇಲ್ಲಿ ಬಂದು ಪರಿಸರ ಹಾಳು ಮಾಡುವ ಸಾಧ್ಯತೆಯಿದೆ. ಅಂಗಡಿ ಆರಂಭವಾದ ಮೂರ್ನಾಲ್ಕು ದಿನಗಳಲ್ಲೇ ರಸ್ತೆ ಬದಿಯಲ್ಲಿ ಬಾಟಲಿಗಳು ಬಿದ್ದಿರುವುದು ಕಾಣುತ್ತಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಹಸನ್‌ಸಾಬ್, ವಿದ್ಯಾಧರ ನಾಯ್ಕ, ದೇವಿದಾನ, ಹಂಚಿನಕೇರಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಶೇಖ್ ಆರೋಪಿಸಿದರು.

ಬಚಗಾಂವ ಗ್ರಾಮದ ಸರ್ವೆ ಸಂಖ್ಯೆ 70ರ ಮಾಲ್ಕಿ ಜಮೀನಿನಲ್ಲಿ ಮದ್ಯದ ಅಂಗಡಿ ಇದ್ದು, ಅದರ ಹಿಂಭಾಗದಲ್ಲಿಯೇ ಕ್ವಾರಿ ಇದೆ. ಕುಡಿದು ಹೆಚ್ಚಾದರೆ ಅಲ್ಲಿ ಬೀಳುವ ಅಪಾಯವಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಅರೆಕೊಪ್ಪ, ಹಿತ್ಲಗದ್ದೆ, ಬಸಳೆಕೊಪ್ಪ, ಕಸದಗುಡ್ಡೆ, ಲಿಡ್ಕರ್ ಕಾಂಪ್ಲೆಕ್ಸ, ಶ್ರೀಗಂಧದ ಸಂಕೀರ್ಣ, ಹಂಚಿನಕೇರಿ, ಕಾಳೆಕೊಂಡ, ಶ್ರೀನಗರ ಭಾಗದ ಮಹಿಳೆಯರು, ಹಿರಿಯರು, ಯುವಕರು ಸೇರಿ ನೂರಕ್ಕೂ ಹೆಚ್ಚು ಜನರು ಸೇರಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !