ಜೀವನ ಮುನ್ನಡೆಸಿದ ತರಕಾರಿ ಬೇಸಾಯ

7
10 ಗುಂಟೆ ಜಮೀನಿನಲ್ಲಿ ವೈವಿಧ್ಯಮಯ ತರಕಾರಿ ಬೆಳೆ: ಪತಿಯ ಕಾಯಕಕ್ಕೆ ಪತ್ನಿಯ ಸಹಕಾರ

ಜೀವನ ಮುನ್ನಡೆಸಿದ ತರಕಾರಿ ಬೇಸಾಯ

Published:
Updated:
Deccan Herald

ಕಾರವಾರ:  ಅವರ ಬಳಿಯಿರುವುದು ಗೇಣಿಗೆ ಪಡೆದಿರುವ ಕೇವಲ 10 ಗುಂಟೆ ಜಮೀನು. ಆದರೆ, ಅಲ್ಲಿ ಅವರು ಬೆಳೆಯುವ ವೈವಿಧ್ಯಮಯ ತರಕಾರಿ, ಇಡೀ ಕಾರವಾರದಲ್ಲೇ ಪ್ರಸಿದ್ಧ. ಅವರು ಪ್ರತಿದಿನ ಮಾರುಕಟ್ಟೆಗೆ ತರುವ ಕಾಯಿಪಲ್ಲೆಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿ ಬಿಡುತ್ತವೆ.

ತಾಲ್ಲೂಕಿನ ಕಡವಾಡದ ಮಾಣೇಶ್ವರ ಜಿ ಗೌಡ 33 ವರ್ಷಗಳಿಂದ ತರಕಾರಿ ಬೆಳೆಯನ್ನೇ ಆದಾಯ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. 

ವೈವಿಧ್ಯಮಯ ತರಕಾರಿ: ಅಂಗೈಯಗಲದ ಜಮೀನಿನಲ್ಲೇ ಅವರು ಸೌತೆಕಾಯಿ, ಹಾಗಲಕಾಯಿ, ಹೀರೆಕಾಯಿ, ಬೆಂಡೆಕಾಯಿ, ಒಂದಿಷ್ಟು ಅಲಸಂದೆ ಬೆಳೆದಿದ್ದಾರೆ. ವರ್ಷಕ್ಕೆ ಸರಿಸುಮಾರು ₹ 3 ಲಕ್ಷ ಆದಾಯ ಗಳಿಸುತ್ತಾರೆ.

‘ಈ ಬೆಳೆಗಳ ಅವಧಿ ಮುಗಿದ ಬಳಿಕ ಒಣಮೆಣಸು, ಹರಿವೆ ಸೊಪ್ಪು ಹಾಗೂ ಬದನೆಕಾಯಿ ಗಿಡಗಳನ್ನು ನಾಟಿ ಮಾಡುತ್ತೇನೆ. ಇದರಿಂದ ವರ್ಷ ಪೂರ್ತಿ ಆದಾಯ ಸಿಗುತ್ತದೆ. ಬೆಳೆಗಳನ್ನು ಬದಲಾವಣೆ ಮಾಡುವುದರಿಂದ ಮಣ್ಣಿಗೆ ಬೇಕಾದ ಸಾರಾಂಶವೂ ಲಭಿಸುತ್ತದೆ’ ಎನ್ನುತ್ತಾರೆ ಅವರು.

ಪತಿಯ ಕಾಯಕಕ್ಕೆ ಪತ್ನಿ ಶೋಭಾ ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ಬೆಳಿಗ್ಗೆಯೇ ತೋಟಕ್ಕೆ ತೆರಳುವ ಅವರು ಮಾರಾಟಕ್ಕಿರುವ ತರಕಾರಿಯನ್ನು ಬೇರ್ಪಡಿಸಿ ಚೀಲಗಳಲ್ಲಿ ತುಂಬಿಡುತ್ತಾರೆ. ಬಳಿಕ ಗಿಡಗಳ ಆರೈಕೆ ಮಾಡಲೂ ಜತೆಯಾಗುತ್ತಾರೆ.

ಹುಳ ಬಾಧೆ: ‘ತರಕಾರಿ ಗಿಡಗಳಿಗೆ ಈ ಬಾರಿ ಹುಳಬಾಧೆ ಹೆಚ್ಚಿದೆ. ಸೌತೆಕಾಯಿ, ಬೆಂಡೆಕಾಯಿ, ಹೀರೆಕಾಯಿ ಮಿಡಿಗಳ ರಸವನ್ನು ಅವು ಹೀರುತ್ತವೆ. ಇದರಿಂದ ಒಂದು ಎಕರೆ ಜಮೀನಿದ್ದರೂ ಪ್ರತಿ ಬಾರಿ ಕಟಾವಿಗೆ ₹ 2 ಸಾವಿರದ ಉತ್ಪನ್ನವೂ ಸಿಗದಂತಾಗಿದೆ’ ಎಂದು ಕೈಚೆಲ್ಲುತ್ತಾರೆ.

‘ಗೇಣಿ ಜಮೀನಿಗೂ ಸಬ್ಸಿಡಿ ಬೇಕು’: ಜಮೀನನ್ನು ಗೇಣಿಗೆ ಪಡೆದುಕೊಂಡು ಕೃಷಿ ಮಾಡುವವರಿಗೂ ಟಿಲ್ಲರ್, ಟ್ರ್ಯಾಕ್ಟರ್ ಖರೀದಿಗೆ ಸಬ್ಸಿಡಿ ಕೊಡಬೇಕು ಎಂಬುದು ಮಾಣೇಶ್ವರ ಅವರ ಬೇಡಿಕೆಯಾಗಿದೆ.

‘ನಾವೂ ಕೃಷಿ ಮಾಡುತ್ತೇವೆ. ಆದರೆ, ಸಬ್ಸಿಡಿ ಪಡೆಯಲು ಪಹಣಿ ಪತ್ರ ಕೇಳುತ್ತಾರೆ. ಸರ್ಕಾರದ ಈ ನಿಯಮದಿಂದ ಪ್ರಾಮಾಣಿಕ ಬಡ ಕೃಷಿಕರಿಗೆ ಸೌಲಭ್ಯ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಔಷಧ, ಗೊಬ್ಬರ, ಬಿತ್ತನೆ ಬೀಜ ಕಾರವಾರದಲ್ಲಿ ಸಿಗುವುದಿಲ್ಲ. ಈ ಭಾಗದ ಕೃಷಿಕರು ಏನು ಬೇಕಿದ್ದರೂ ಅಂಕೋಲಾದಲ್ಲಿ ಖಾಸಗಿ ವರ್ತಕರಿಂದಲೇ ಖರೀದಿಸಬೇಕು. ಕೈ ಸೇರುವ ಸಿಗುವ ಅಲ್ಪ ಆದಾಯ ಅದಕ್ಕೇ ಸರಿಯಾಗುತ್ತದೆ’ ಎಂಬ ಅಸಹಾಯಕತೆ ಅವರದ್ದು.

ಸಾವಯವ ಕೃಷಿಗೆ ಆದ್ಯತೆ: ಮೂಲತಃ ಗೋಕರ್ಣದವರಾದ ಮಾಣೇಶ್ವರ, ಪ್ರಸ್ತುತ ಕಡವಾಡದಲ್ಲಿ ಐದು ವರ್ಷದ ಗೇಣಿಗೆ ಜಮೀನು ಪಡೆದುಕೊಂಡಿದ್ದಾರೆ. ಅವರು ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆಯುತ್ತಾರೆ.

‘ನಾನು ದನದ ಕೊಟ್ಟಿಗೆಯ ಗೊಬ್ಬರ, ಕೋಳಿ ಗೊಬ್ಬರ, ಕಟ್ಟಿಗೆಯ ಬೂದಿ ಬಳಕೆ ಮಾಡುತ್ತೇನೆ. ಇದರಿಂದ ತರಕಾರಿ ತಾಜಾ ಮತ್ತು ಆರೋಗ್ಯಕರವಾಗಿರುತ್ತವೆ. ಮಣ್ಣು ಫಲವತ್ತತೆ ಕಾಪಾಡಿಕೊಳ್ಳುತ್ತದೆ. ಬೆಂಡೆಕಾಯಿ ಸಸಿಗಳನ್ನು ನಾಟಿ ಮಾಡಿ ಸುಮಾರು 40 ದಿನಗಳ ಅಂತರದಲ್ಲೇ ಮೊದಲ ಕಟಾವಿಗೆ ಸಿಗುತ್ತದೆ’ ಎಂದು ಅವರು ವಿವರಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !