ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ರಕ್ಷಣೆಗೆ ಸಾವಯವ ಮದ್ದು

ರಾಸಾಯನಿಕ ಬಳಸದೆ ಕೊಳೆರೋಗ ತಡೆಗಟ್ಟಿದ ರೈತ
Last Updated 8 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ಅಡಿಕೆ ಬೆಳೆಗೆ ಕೊಳೆರೋಗ ಬಾಧಿಸುವುದನ್ನು ತಡೆಯಲು ಸುಣ್ಣ ಮತ್ತು ಮೈಲುತುತ್ತ ಮಿಶ್ರಿತ ಬೋರ್ಡೊ ದ್ರಾವಣ ಸಿಂಪಡಿಸುವುದು ವಾಡಿಕೆ. ಆದರೆ, ತಾಲ್ಲೂಕಿನ ನೀರ್ನಳ್ಳಿ ಗ್ರಾಮದ ರಾಮಚಂದ್ರ ಹೆಗಡೆ (ರಾಮಣ್ಣ) ಸಾವಯವ ಮದ್ದು ಸಿಂಪಡಿಸಿ ಕಳೆದ ಮೂರು ವರ್ಷಗಳಿಂದ ಕೊಳೆರೋಗ ನಿಯಂತ್ರಿಸುತ್ತಿದ್ದಾರೆ.

ಹುಳಿ ಮಜ್ಜಿಗೆ, ಜೀವಾಮೃತ, ಬಯೋಮಾಸ್ಕ್ ಈ ಮೂರು ಪ್ರಕಾರದ ದ್ರಾವಣವನ್ನು ತಾವೇ ಸಿದ್ಧಪಡಿಸಿಕೊಳ್ಳುತ್ತಿರುವ ರಾಮಣ್ಣ ತಮ್ಮ ನಾಲ್ಕೂವರೆ ಎಕರೆ ಅಡಿಕೆ ತೋಟಕ್ಕೆ, ಕಾಳುಮೆಣಸಿನ ಬಳ್ಳಿಗೆ ಸಿಂಪಡಿಸುತ್ತಿದ್ದಾರೆ.

ಪ್ರತಿ ಮಳೆಗಾಲದಲ್ಲಿ ಮಲೆನಾಡು ಭಾಗದ ರೈತರಿಗೆ ಅಡಿಕೆ ಬೆಳೆಗೆ ಕೊಳೆರೋಗ ಬಾಧಿಸುವುದು ದೊಡ್ಡ ಚಿಂತೆಯಾಗಿದೆ. ಬೋರ್ಡೊ ಹೊರತಾಗಿಯೂ ಹಲವು ರಾಸಾಯನಿಕ ಔಷಧಗಳು ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿವೆ. ಸಾವಯವ ಔಷಧ ಸಿಂಪಡಿಸಿ ಬೆಳೆ ಉಳಿಸಿಕೊಳ್ಳಲು ಧೈರ್ಯ ತೋರುವ ಮೂಲಕ ನೀರ್ನಳ್ಳಿ ಕೃಷಿಕ ರಾಮಚಂದ್ರ ಹೆಗಡೆ ರೈತ ವಲಯದ ಅಚ್ಚರಿ ಎನಿಸಿದ್ದಾರೆ.

‘2019ರಲ್ಲಿ ಕೊಳೆರೋಗ ತಡೆಗೆ ಸಾವಯವ ದ್ರಾವಣದ ಪ್ರಯೋಗ ನಡೆಸಲು ಆರಂಭಿಸಿದೆ. ತೋಟದಲ್ಲಿ ನಾಲ್ಕು ವಿಭಾಗವಾಗಿ ವಿಂಗಡಿಸಿಕೊಂಡು ಆಯಾ ವಿಭಾಗದ ಮರಗಳಿಗೆ ಹುಳಿ ಮಜ್ಜಿಗೆ, ಜೀವಾಮೃತ, ಬಯೋಮಾಸ್ಕ್ ಸಿಂಪಡಿಸಿದೆ. ನಾಲ್ಕನೇ ವಿಭಾಗಕ್ಕೆ ಬೋರ್ಡೊ ದ್ರಾವಣ ಸಿಂಪಡಿಸಿದೆ. ಬೋರ್ಡೊ ಸಿಂಪಡಿಸಿದ ಭಾಗದಲ್ಲಿ ಕೊಳೆರೋಗ ನಿಯಂತ್ರಣ ಸಾಧ್ಯವಾಗಲಿಲ್ಲ. ಜತೆಗೆ ಮರಗಳು ಹಾನಿಗೀಡಾದವು’ ಎಂದು ವಿವರಿಸಿದರು ಕೃಷಿಕ ರಾಮಚಂದ್ರ ಹೆಗಡೆ.

‘ಅಡಿಕೆ ಮರಗಳ ಆರೈಕೆಗೆ ಬೇಕಿರುವ ಅರೋಬಿಕ್ ಬ್ಯಾಕ್ಟೀರಿಯಾಗಳು ಉಳಿದ ಮೂರು ಪ್ರಕಾರದ ದ್ರಾವಣದಿಂದ ಲಭಿಸಿದವು. ಹೀಗಾಗಿ ಉತ್ತಮ ದೊರೆತು ಮರಗಳು ರೋಗ್ಯಯುತವಾಗಿ ಬೆಳೆದಿವೆ. ಮೂರು ವರ್ಷದಿಂದ ಕೊಳೆರೋಗ ನಿಯಂತ್ರಣ ಆಗಿರುವ ಜತೆಗೆ ಅಡಿಕೆ ಇಳುವರಿಯೂ ಸ್ಥಿರವಾಗಿದೆ. ದ್ರಾವಣದಿಂದ ಹಾನಿಕಾರಕ ಬ್ಯಾಕ್ಟಿರಿಯಾ ನಿಯಂತ್ರಣವಾಗುವುದರ ಕುರಿತು ತಜ್ಞರಿಂದಲೂ ಪರೀಕ್ಷಿಸಿದ್ದೇನೆ’ ಎಂದು ತಿಳಿಸಿದರು.

ಪ್ರಯೋಗಶೀಲ ರಾಮಣ್ಣ ಕಳೆದ ಹಲವು ವರ್ಷದಿಂದ ಸ್ವಯಂ ಚಾಲಿತ ಅಡಿಕೆ ಸುಲಿಯುವ ಯಂತ್ರ ನಿರ್ಮಿಸುವ ಪ್ರಯತ್ನ ನಡೆಸಿದ್ದು, ಸದ್ಯ ಯಶಸ್ವಿಯೂ ಆಗಿದ್ದಾರೆ. ನವೆಂಬರ್ ವೇಳೆಗೆ ಯಂತ್ರವನ್ನು ಲೋಕಾರ್ಪಣೆ ಮಾಡುತ್ತೇನೆ ಎಂದು ತಿಳಿಸಿದರು.

ಸರಳ ಔಷಧದಿಂದ ಬೆಳೆ ರಕ್ಷಣೆ:

80:20 ಅನುಪಾತದಲ್ಲಿ ಹುಳಿ ಮಜ್ಜಿಗೆ ಮತ್ತು ನೀರು ಮಿಶ್ರಣ ಮಾಡಿರುವ ದ್ರಾವಣ ಸಿಂಪಡಣೆ ಕೃಷಿಕ ರಾಮಚಂದ್ರ ಅವರ ಮೊದಲ ಆಯ್ಕೆಯಾಗಿದೆ. ಪ್ರತಿ 200 ಲೀ. ನೀರಿಗೆ ತಲಾ 5 ಲೀ. ಗೋಮೂತ್ರ, 10 ಕೆ.ಜಿ.ಯಷ್ಟು ಸಗಣಿ, ತಲಾ 2 ಕೆ.ಜಿ.ಯಷ್ಟು ದ್ವಿದಳ ಧಾನ್ಯದ ಹಿಟ್ಟು, ಬೆಲ್ಲ ಮತ್ತು ಎರಡು ಮುಷ್ಠಿಯಷ್ಟು ಮಣ್ಣು ಮಿಶ್ರಣ ಮಾಡಿ ಕಳಯಿಸುವ ಜೀವಾಮೃತವನ್ನೂ ಸಿಂಪಡಿಸುತ್ತಿದ್ದಾರೆ. ತರಕಾರಿ ಅಥವಾ ಕೆಲವು ಕಾಯಿಗಳನ್ನು ಕಳೆಯಿಸಿ ತಯಾರಿಸಿದ 3 ಕೆ.ಜಿ. ಹಸಿದ್ರವ್ಯಕ್ಕೆ 10 ಲೀ. ನೀರು ಮತ್ತು 1 ಕೆ.ಜಿ. ಬೆಲ್ಲ ಬೆರೆಸಿ ಸಿದ್ಧಪಡಿಸಿದ ಬಯೋಮಾಸ್ಕ್ ಕೂಡ ರೋಗ ನಿಯಂತ್ರಣಕ್ಕೆ ಸಹಕಾರಿಯಾಗಿದೆ ಎನ್ನುತ್ತಾರೆ ಕೃಷಿಕ ರಾಮಚಂದ್ರ ಹೆಗಡೆ.

ರಾಸಾಯನಿಕಗಳ ಬಳಕೆಯಿಂದ ಭೂಮಿಯ ಉತ್ಪಾದಕ ಶಕ್ತಿ ಕುಸಿಯುತ್ತಿರುವುದನ್ನು ಬಹಳ ವರ್ಷದಿಂದ ಗಮನಿಸುತ್ತಿದ್ದೆ. ಸಾವಯವ ಪದ್ಧತಿ ಸುರಕ್ಷಿತ ಎಂಬುದನ್ನು ರೈತರಿಗೆ ಮನವರಿಕೆ ಮಾಡಿಕೊಡಬೇಕಿದೆ.

- ರಾಮಚಂದ್ರ ಹೆಗಡೆ ನೀರ್ನಳ್ಳಿ, ಪ್ರಗತಿಪರ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT