ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರಿಲ್ಲದೇ ಕ್ಷೇತ್ರ ಅನಾಥ

ಅಧಿಕಾರಿಗಳಿಂದ ನೆರೆ ಪರಿಹಾರ ಕಾರ್ಯ ನಿರ್ವಹಣೆ
Last Updated 16 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಶಿರಸಿ: ಜಿಲ್ಲೆಯಲ್ಲಿ ವಾರದ ಹಿಂದೆ ಸುರಿದ ರೌದ್ರ ಮಳೆಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನೇಕ ಹಳ್ಳಿಗಳು ನಲುಗಿವೆ. ಹಳ್ಳಿಗರು ಹೊಸ ಜೀವನ ಕಟ್ಟುಕೊಳ್ಳಬೇಕಾಗಿದೆ. ಆದರೆ, ಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳಬೇಕಾಗಿದ್ದ ಶಾಸಕರು ಇಲ್ಲದೇ ಕ್ಷೇತ್ರ ಅನಾಥವಾಗಿದೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಶಿವರಾಮ ಹೆಬ್ಬಾರ್ ಅವರನ್ನು ಹಿಂದಿನ ಸ್ಪೀಕರ್ ಅನರ್ಹಗೊಳಿಸಿರುವ ಪ್ರಕರಣ ನ್ಯಾಯಾಲಯದಲ್ಲಿದೆ. ಹೆಬ್ಬಾರ್ ಅವರು ಮಾಜಿಯಾಗಿದ್ದಾರೆ. ಅತಿವೃಷ್ಟಿಯ ಸಂದರ್ಭದಲ್ಲೇ ಅಧಿಕೃತ ಜನಪ್ರತಿನಿಧಿ ಇಲ್ಲದೇ ಕ್ಷೇತ್ರ ಅನಾಥ ಭಾವ ಎದುರಿಸುತ್ತಿದೆ. ಸರ್ಕಾರದ ಮೇಲೆ ಒತ್ತಡ ಹಾಕಿ, ಕ್ಷೇತ್ರಕ್ಕೆ ವಿಶೇಷ ಅನುದಾನ ತರಲು ಶಾಸಕರಿಲ್ಲ ಎಂಬುದು ಜನರ ಕೊರಗಾಗಿದೆ.

ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳು ಹಾಗೂ ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ ಒಳಗೊಂಡಿರುವ ವಿಧಾನಸಭಾ ಕ್ಷೇತ್ರವು ಸಂಕಷ್ಟಕ್ಕೆ ಒಳಗಾಗಿದೆ. ಅರೆಬಯಲುಸೀಮೆ ಹವಾಮಾನದ ಮುಂಡಗೋಡ ತಾಲ್ಲೂಕು ಸಹ ಅತಿವೃಷ್ಟಿಯ ವಕ್ರದೃಷ್ಟಿಗೆ ಸಿಲುಕಿದೆ. ಮುಂಡಗೋಡ ಮತ್ತು ಯಲ್ಲಾಪುರ ತಾಲ್ಲೂಕುಗಳ ನಡುವೆ ಸಂಪರ್ಕ ಕಲ್ಪಿಸುವ ಶಿಡ್ಲಗುಂಡಿ ರಸ್ತೆ ಹಾಗೂ ಸೇತುವೆ ಸಂಪೂರ್ಣ ಹಾಳಾಗಿ, ಈ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಯರೆಬೈಲ್ ಮತ್ತು ಮಳಗಿಯಲ್ಲಿ ಸಹ ನೆರೆ ತೀವ್ರ ಹಾನಿ ಮಾಡಿದೆ.

ಯಲ್ಲಾಪುರದಲ್ಲಿ ನೆರೆಯಿಂದ ತೊಂದರೆಗೊಳಗಾದವರಿಗೆ ಮೂರು ಕಡೆಗಳಲ್ಲಿ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಯಲ್ಲಾಪುರ ಮತ್ತು ಅಂಕೋಲಾ ತಾಲ್ಲೂಕುಗಳ ಗಡಿಭಾಗವಾಗಿರುವ ಹೆಗ್ಗಾರ್, ವೈದ್ಯ ಹೆಗ್ಗಾರ್, ಕೋನಾಳ, ಕಲ್ಲೇಶ್ವರ, ಗುಳ್ಳಾಪುರ ಮೊದಲಾದ ಹಳ್ಳಿಗಳು ಗಂಗಾವಳಿ ನದಿಯ ಆರ್ಭಟಕ್ಕೆ ನೆಲಸಮವಾಗಿದ್ದು, ಹೊಸದಾಗಿ ಈ ಹಳ್ಳಿಗಳನ್ನು ಕಟ್ಟಬೇಕಾಗಿದೆ.

ಬನವಾಸಿ ಭಾಗದಲ್ಲಿ ವರದಾ ನದಿಯ ಪ್ರವಾಹದಿಂದಾಗಿ ಸಾವಿರಾರು ಎಕರೆ ಕೃಷಿ ಬೆಳೆ ನಾಶವಾಗಿದೆ. ಅನೇಕ ರಸ್ತೆಗಳು, ವಾಸದ ಮನೆಗಳಿಗೆ ಧಕ್ಕೆಯಾಗಿದೆ. ‘ಪ್ರತಿವರ್ಷ ಮಳೆಗಾಲದಲ್ಲೂ ನಮ್ಮ ಗೋಳು ತಪ್ಪಿದ್ದಲ್ಲ. ಕ್ಷೇತ್ರದಲ್ಲಿ ಶಾಸಕರಿದ್ದರೆ ನಮ್ಮ ಸಂಕಟವನ್ನಾದರೂ ಹೇಳಿಕೊಳ್ಳಬಹುದಿತ್ತು. ಈ ಬಾರಿ ಯಾರಿಗೆ ಇವನ್ನೆಲ್ಲ ಹೇಳುವುದು’ ಎಂದು ಪ್ರಶ್ನಿಸುತ್ತಾರೆ ಬನವಾಸಿಯ ಗಣಪತಿ ಚೆನ್ನಯ್ಯ.

ಜನರಿಗೆ ತೊಂದರೆಯಾಗಿಲ್ಲ:‘ಎಲ್ಲ ಕಡೆಗಳಲ್ಲಿ ನಾನು ನಿರಂತರವಾಗಿ ಭೇಟಿ ನೀಡುತ್ತಿರುವ ಕಾರಣ ಕ್ಷೇತ್ರದ ಜನರಿಗೆ ಶಾಸಕರಿಲ್ಲದ ಕೊರತೆ ಕಾಡಿಲ್ಲ.ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅಧಿಕಾರ, ಪಕ್ಷ, ಪಂಗಡ ಯಾವುದೂ ಇರುವುದಿಲ್ಲ. ಅಧಿಕಾರ ಇಲ್ಲದ ಅನೇಕರು ಸಹ ಕೆಲಸ ಮಾಡಿದ್ದಾರೆ. ತುರ್ತು ಸಂದರ್ಭದಲ್ಲಿ ಅಧಿಕಾರಕ್ಕಿಂತ ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ರೀತಿಯ ಕೆಲಸ ಯಲ್ಲಾಪುರ ಕ್ಷೇತ್ರದಲ್ಲಿ ಮಾತ್ರವಲ್ಲ ಇಡೀ ಜಿಲ್ಲೆಯಲ್ಲಿ ಆಗಿದೆ’ ಎಂದು ಮಾಜಿ ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT