ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ: ಒ.ಟಿ.ಸಿ ಯೋಜನೆ ಸ್ಥಗಿತ, ಸಾರ್ವಜನಿಕರ ಪರದಾಟ

ಸೌಲಭ್ಯ ‍ಪಡೆಯಲು ವಾರಗಟ್ಟಲೆ ಕಾಯುವ ಪರಿಸ್ಥಿತಿ
Last Updated 1 ಜುಲೈ 2021, 19:30 IST
ಅಕ್ಷರ ಗಾತ್ರ

ಭಟ್ಕಳ: ಕೇಂದ್ರ ಸರ್ಕಾರದ ‘ಒನ್ ನೇಷನ್ ಒನ್ ರೇಷನ್ ಕಾರ್ಡ್‌’ (ಒಂದು ದೇಶ ಒಂದು ಪಡಿತರ ಚೀಟಿ) ಯೋಜನೆಯಿಂದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಒ.ಟಿ.ಸಿ (ಓವರ್ ದ ಕೌಂಟರ್) ಯೋಜನೆ ಸ್ಥಗಿತಗೊಂಡಿದೆ. ಇದರಿಂದ ಪಡಿತರ ಚೀಟಿ ಮೂಲಕ ಆನ್‌ಲೈನ್‌ನಲ್ಲಿ ಸ್ಥಳದಲ್ಲೇ ಸಿಗುತ್ತಿದ್ದ ಕಂದಾಯ ಇಲಾಖೆಯ ವಿವಿಧ ಸೇವೆಗಳಿಗಾಗಿ ಸಾರ್ವಜನಿಕರು ವಾರಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕಂದಾಯ ಇಲಾಖೆಯು ನಿತ್ಯ ಅಗತ್ಯ ಇರುವ ಕೆಲವು ಸೇವೆಗಳನ್ನು ತಕ್ಷಣ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಸಿಗುವಂತೆ ಮಾಡಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಪಡಿತರ ಚೀಟಿ ಸಂಖ್ಯೆಯ ಮೂಲಕ ಆ ಕುಟುಂಬದ ಎಲ್ಲ ಸದಸ್ಯರ ಜಾತಿ, ರಹವಾಸಿ ಪ್ರಮಾಣ ಪತ್ರ ಸೇರಿದಂತೆ ಅನೇಕ ಸೇವೆಗಳನ್ನು ತಕ್ಷಣ ಸಿಗುವಂತೆ ಈ ಯೋಜನೆಯಲ್ಲಿ ರೂಪಿಸಲಾಗಿತ್ತು.

ತಾಲ್ಲೂಕಿನ ಶೇ 99ರಷ್ಟು ಕುಟುಂಬಗಳು ಒ.ಟಿ.ಸಿಯಲ್ಲಿ ದಾಖಲಾಗಿದ್ದವು. ಇದರಿಂದ ಗ್ರಾಮೀಣ ಭಾಗದ ಜನರು ಪ್ರಮಾಣ ಪತ್ರ ಪಡೆಯಲು ನಾಡ ಕಚೇರಿಗೆ ಅಲೆಯಬೇಕಾದ ಸಮಯ ಕೂಡ ಉಳಿಯುತ್ತಿತ್ತು. ಕೇಂದ್ರ ಸರ್ಕಾರ ವಲಸೆ ಕಾರ್ಮಿಕರಿಗೆ ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ದಿನಸಿ ಪಡೆಯಲು ಅನುಕೂಲವಾಗುವಂತೆ ‘ಒನ್ ನೇಷನ್ ಒನ್ ರೇಷನ್ ಕಾರ್ಡ್‌’ ಯೋಜನೆ ಜಾರಿಗೆ ತಂದಿದೆ. ಇದರಿಂದ ರಾಜ್ಯದಲ್ಲಿರುವ ಎಲ್ಲ ರೇಷನ್ ಕಾರ್ಡ್‌ ಸಂಖ್ಯೆ ಬದಲಾವಣೆಯಾಗಿವೆ.

ನಾಡಕಚೇರಿಯಲ್ಲಿ ಸಾಲು: ಒ.ಟಿ.ಸಿ ಸ್ಥಗಿತಗೊಂಡ ಕಾರಣ ನಿತ್ಯ 60ರಿಂದ 70 ಅರ್ಜಿಗಳು ಸಲ್ಲಿಕೆಯಾಗುತ್ತಿವೆ ಎಂದು ಭಟ್ಕಳ ನಾಡಕಚೇರಿ ಸಿಬ್ಬಂದಿ ನಾಗರಾಜ ನಾಯ್ಕ ತಿಳಿಸಿದ್ದಾರೆ.

‘ಪಡಿತರ ಚೀಟಿಗಳ ಮೂಲಕ ಆನ್‌ಲೈನ್‌ನಲ್ಲಿ ತಕ್ಷಣ ಸಿಗುತ್ತಿದ್ದ ಕಂದಾಯ ಇಲಾಖೆಯ ಹಲವು ಸೇವೆಗಳು ಈಗ ಸಿಗುತ್ತಿಲ್ಲ. ಹಳೇ ಪಡಿತರ ಚೀಟಿಯಲ್ಲಿರುವ ಕಂದಾಯ ಇಲಾಖೆಯ ಸೇವೆಗಳನ್ನು ಚೀಟಿಯಲ್ಲಿ ಸೇರಿಸಲು ಕಂದಾಯ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಹೊಸ್ಮನೆ ಮುಂಡಳ್ಳಿಯ ಸುರೇಶ ನಾಯ್ಕ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT