ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಎಫ್ ಹಣ ಪಾವತಿಸುವಂತೆ ಧರಣಿ

‘ಕ್ರಿಮ್ಸ್’ ಎದುರು ಪ್ರತಿಭಟನೆ ಹಮ್ಮಿಕೊಂಡ ಹೊರಗುತ್ತಿಗೆ ಸಿಬ್ಬಂದಿ
Last Updated 2 ಮಾರ್ಚ್ 2021, 14:22 IST
ಅಕ್ಷರ ಗಾತ್ರ

ಕಾರವಾರ: ಹಳೆಯ ಗುತ್ತಿಗೆದಾರರನ್ನೇ ಮುಂದುವರಿಸಬೇಕು ಹಾಗೂ ಬಾಕಿಯಿರುವ ಪಿ.ಎಫ್ ಹಣವನ್ನು ಕೊಡಬೇಕು ಎಂದು ಒತ್ತಾಯಿಸಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹೊರ ಗುತ್ತಿಗೆ ಸಿಬ್ಬಂದಿ ಮಂಗಳವಾರ ಧರಣಿ ನಡೆಸಿದರು.

‘2012ರಿಂದ ಸಿಬ್ಬಂದಿ ಪೂರೈಕೆಗೆ ಗುತ್ತಿಗೆ ಪಡೆದವರು ಪಿ.ಎಫ್, ಇ.ಎಸ್‌.ಐ ಸೌಲಭ್ಯ ನೀಡಿಲ್ಲ. ನ್ಯಾಯಯುತವಾದ ವಿವಿಧ ಬೇಡಿಕೆಗಳಿಗೂ ಸ್ಪಂದಿಸಿರಲಿಲ್ಲ. ಅವರನ್ನು ಕಪ್ಪುಪ‍ಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದರೂ ಮತ್ತದೇ ಏಜೆನ್ಸಿಗೆ ಮುಂದುವರಿದ ಗುತ್ತಿಗೆಯನ್ನು ನೀಡಲಾಗಿದೆ. ಈ ನಡುವೆ, ಎರಡು ವರ್ಷಗಳಿಂದ ಸೌಲಭ್ಯ ಸರಿಯಾಗಿ ಕೊಡುತ್ತಿದ್ದವರ ಗುತ್ತಿಗೆಯನ್ನು ರದ್ದು ಮಾಡಲಾಗಿದೆ. ಇದನ್ನು ನಾವು ವಿರೋಧಿಸುತ್ತಿದ್ದೇವೆ’ ಎಂದು ಕಾರವಾರ ಮೆಡಿಕಲ್ ಕಾಲೇಜು ಸಿವಿಲ್ ಆಸ್ಪತ್ರೆ ಗುತ್ತಿಗೆ ನೌಕರರ ಸಂಘದ ಮುಖಂಡ ವಿಲ್ಸನ್ ಫರ್ನಾಂಡಿಸ್ ತಿಳಿಸಿದರು.

‘ಆಸ್ಪತ್ರೆಯಲ್ಲಿ 18 ವರ್ಷಗಳಿಂದ ದುಡಿದವರಿಗೆ ಮೋಸ ಮಾಡಲಾಗಿದೆ. ಅವರನ್ನು ಒಳಗುತ್ತಿಗೆ ಮೂಲಕ ನೇಮಿಸಿಕೊಳ್ಳಬೇಕಿತ್ತು. ಆದರೆ ಹಾಗೆ ಮಾಡದೇ ಸುಮಾರು 50 ಮಂದಿಗೆ ಮೋಸವಾಗಿದೆ. ಒಬ್ಬರಿಗೇ ಕೊಡಬೇಕಾದ ಗುತ್ತಿಗೆಯನ್ನು ಐವರಿಗೆ ಕೊಡಲಾಗಿದೆ. ಇವುಗಳನ್ನೆಲ್ಲ ಸರಿಪಡಿಸುವ ತನಕ ಧರಣಿ ನಿಲ್ಲಿಸುವುದಿಲ್ಲ’ ಎಂದು ಹೇಳಿದರು.

‘ಏಜೆನ್ಸಿ ಜವಾಬ್ದಾರಿ’:

ಈ ಬಗ್ಗೆ ಪ್ರತಿಕ್ರಿಯಿಸಿದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಗಜಾನನ ನಾಯಕ, ‘ಈ ವಿಚಾರವು ಏಜೆನ್ಸಿಗೆ ಸಂಬಂಧಿಸಿದ್ದಾಗಿದೆ. ವೈದ್ಯಕೀಯ ಕಾಲೇಜು ಆರಂಭವಾಗಿ ನಾಲ್ಕು ವರ್ಷಗಳಷ್ಟೇ ಆಗಿವೆ. 18 ವರ್ಷಗಳ ಸೌಲಭ್ಯವು ಸಂಸ್ಥೆಗೆ ಸಂಬಂಧಿಸಿಲ್ಲ. ಸಂಸ್ಥೆಗೆ ಸಂಬಂಧಪಡದ ವ್ಯಕ್ತಿಯು ನಿಯಮ ಬಾಹಿರವಾಗಿ ಸಿಬ್ಬಂದಿಯನ್ನು ಪ್ರಚೋದಿಸುತ್ತಿದ್ದಾರೆ’ ಎಂದು ದೂರಿದರು.

‘ಸೌಹಾರ್ದತೆ ಹಾಳಾಗಬಾರದು ಎಂಬ ಕಾರಣಕ್ಕೆ ಪೊಲೀಸ್ ದೂರು ಕೊಟ್ಟಿಲ್ಲ. ಪ್ರತಿಭಟನೆ ಮಾಡುತ್ತಿರುವವರನ್ನು ಮಾನವೀಯತೆಯ ದೃಷ್ಟಿಯಿಂದ ಮಾತುಕತೆಗೆ ಕರೆದರೂ ಬರುತ್ತಿಲ್ಲ. ಧರಣಿಯಿಂದಾಗಿ ಆಸ್ಪತ್ರೆಯಲ್ಲಿರುವ ರೋಗಿಗಳು, ವೈದ್ಯರಿಗೆ ತೊಂದರೆಯಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT