ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿರಂಗ ಪ್ರಚಾರ 21ರ ಸಂಜೆಯೇ ಮುಕ್ತಾಯ, ಮತದಾನಕ್ಕೆ ಜಿಲ್ಲಾಡಳಿತದ ಸಿದ್ಧತೆ ಪೂರ್ಣ

ಲೋಕಸಭೆ ಚುನಾವಣೆಗೆ ಎರಡನೇ ಹಂತದ ಮತದಾನ 23ರಂದು
Last Updated 20 ಏಪ್ರಿಲ್ 2019, 12:07 IST
ಅಕ್ಷರ ಗಾತ್ರ

ಕಾರವಾರ:‘ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಏ.21ರಂದು ಸಂಜೆ 6ಕ್ಕೆ ಅಂತ್ಯಗೊಳ್ಳಲಿದೆ. ಕ್ಷೇತ್ರದ ಮತದಾರರಲ್ಲದ ಪ್ರಚಾರಕರುಮತದಾನಕ್ಕಿಂತ 48 ಗಂಟೆಗಳ ಮೊದಲುಹೊರಹೋಗಬೇಕು. ಅಭ್ಯರ್ಥಿಗಳು ಸಹಾಯಕ ಚುನಾವಣಾ ಅಧಿಕಾರಿಗಳ ಅನುಮತಿ ಪಡೆದುಮನೆಮನೆ ಪ್ರಚಾರ ಮಾಡಬಹುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತದಾನದ ದಿನದ 48 ಗಂಟೆಗಳ ಅವಧಿಯಲ್ಲಿ ಮಾಧ್ಯಮಗಳಲ್ಲಿ ಚುನಾವಣಾ ವಿಷಯದ ಚರ್ಚೆ, ಪ್ರಚಾರ, ಸಂದರ್ಶನ ಜಾಹೀರಾತು, ಅಭಿಪ್ರಾಯಗಳ ಪ್ರಸಾರವನ್ನು ನಿಷೇಧಿಸಲಾಗಿದೆ. ಅಲ್ಲದೇ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ’ ಎಂದು ಹೇಳಿದರು.

ಮೊಬೈಲ್, ಕ್ಯಾಮೆರಾ ನಿಷೇಧ:‘ಏ.23ರಂದು ನಡೆಯುವ ಮತದಾನದಲ್ಲಿ ಮತದಾರರು ಮೊಬೈಲ್ ಫೋನ್, ಕ್ಯಾಮೆರಾಗಳನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗುವಂತಿಲ್ಲ. ಮತಗಟ್ಟೆಗಳಲ್ಲಿ ಇವುಗಳ ಬಳಕೆ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಒಂದುವೇಳೆ ಮತದಾರರು ಬಳಕೆ ಮಾಡಿದರೆ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ಪರಿಶೀಲಿಸಿ ವಶಪಡಿಸಿಕೊಳ್ಳಬಹುದು’ ಎಂದು ಸ್ಪಷ್ಟಪಡಿಸಿದರು.

ಮತದಾನದ ದಿನದಂದು ಮತದಾರರಿಗೆ ರಾಜಕೀಯ ಪಕ್ಷದಿಂದ ಅಥವಾ ಅಭ್ಯರ್ಥಿಯಿಂದ ವಾಹನದ ವ್ಯವಸ್ಥೆ ಮಾಡುವಂತಿಲ್ಲ. ಅಭ್ಯರ್ಥಿ, ರಾಜಕೀಯ ಪಕ್ಷದ ಏಜೆಂಟ್ ಹಾಗೂ ಕಾರ್ಯಕರ್ತರು ತಲಾ ಒಂದು ವಾಹನವನ್ನು ಬಳಸಬಹುದು. ಆದರೆ, ಐವರಿಗಿಂತ ಹೆಚ್ಚು ಜನರು ಅದರಲ್ಲಿ ಪ್ರಯಾಣಸುವಂತಿಲ್ಲ. ಮತಗಟ್ಟೆಯಿಂದ 200 ಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗುವುದು ಎಂದು ತಿಳಿಸಿದರು.

ಮತಗಟ್ಟೆಯಿಂದ 100 ಮೀ.ಸುತ್ತಳತೆಯಲ್ಲಿ ಪ್ರಚಾರ ಮಾಡುವಂತಿಲ್ಲ. ಅಲ್ಲದೇ ಮತಗಟ್ಟೆ ಏಜೆಂಟರು ಒಂದು ಮೇಜು, ಎರಡು ಕುರ್ಚಿಗಳು, ಒಂದು ಛತ್ರಿ, ಹಾಗೂ 3x1.5 ಅಡಿ ಅಳತೆಯ ಬ್ಯಾನರ್ ಅಳವಡಿಸಿಕೊಳ್ಳಬಹುದು. ಆದರೆ, ಏಜೆಂಟರು ಮೊಬೈಲ್ ತರುವಂತಿಲ್ಲ ಎಂದು ನಿಯಮ ತಿಳಿಸಿದರು.

ಬಿಗಿ ಭದ್ರತೆ:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ‘ಚುನಾವಣೆಯ ಸಂಬಂಧ ಏ.23ರಂದು ಜಿಲ್ಲೆಯಾದ್ಯಂತ ಸುಮಾರು 3,300 ಪೊಲೀಸ್ ಹಾಗೂ ಇತರ ಭದ್ರತಾ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. 10 ಡಿವೈಎಸ್‌ಪಿಗಳು, 23 ಇನ್‌ಸ್ಪೆಕ್ಟರ್‌ಗಳು, 48 ಪಿಎಸ್‌ಐಗಳು, 111 ಎಎಸ್‌ಐಗಳು, 1,058 ಹಿರಿಯ ಕಾನ್‌ಸ್ಟೆಬಲ್‌ಗಳು, 1,000 ಗೃಹರಕ್ಷಕ ದಳದ ಸಿಬ್ಬಂದಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 12 ತಂಡಗಳು, ಕೇಂದ್ರ ಮೀಸಲು ಪಡೆಯ ಏಳು ತುಕಡಿಗಳಿಂದ 300 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ’ ಎಂದು ಅಂಕಿ ಅಂಶ ನೀಡಿದರು.

‘80 ಮತಗಟ್ಟೆಗಳಿಂದ ವೆಬ್ ಕಾಸ್ಟಿಂಗ್, 30 ಮತಗಟ್ಟೆಗಳಲ್ಲಿ ವಿಡಿಯೊ ಚಿತ್ರೀಕರಣ ಹಾಗೂ 200 ಮತಗಟ್ಟೆಗಳಿಗೆ ಮೈಕ್ರೊ ಆಬ್ಸರ್ವರ್‌ಗಳನ್ನು ನಿಯುಕ್ತಿಗೊಳಿಸಲಾಗುವುದು. ಮತದಾನ ನಡೆಯುವ ದಿನಕ್ಕಿಂತ 48 ಗಂಟೆ ಮೊದಲು ಕ್ಷೇತ್ರದಾದ್ಯಂತ ಮದ್ಯ ಮಾರಾಟವನ್ನು ಸಂ‍ಪೂರ್ಣ ನಿಷೇಧಿಸಲಾಗಿದೆ’ ಎಂದುಮಾಹಿತಿ ನೀಡಿದರು.

ನಿಯಮದ ಉಲ್ಲಂಘನೆ:‘ಸ್ವೀಪ್’ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಶನ್ ಮಾತನಾಡಿ, ‘ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಒಟ್ಟು 25 ಎಫ್‌ಐಆರ್‌ಗಳು, 133 ಘೋರ ಮೊಕದ್ದಮೆಗಳುದಾಖಲಾಗಿವೆ. ಇವುಗಳಿಂದ ₹ 26.25 ಲಕ್ಷ ನಗದು, 32,680 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರ ಬೆಲೆ ₹ 62.04 ಲಕ್ಷ ಎಂದು ಅಂದಾಜಿಸಲಾಗಿದೆ. ಅಲ್ಲದೇ ಚುನಾವಣಾ ಪ್ರಚಾರ ಸಾಮಗ್ರಿ, ವಾಹನಗಳು, ಬಂಗಾರದ ಒಡವೆಗಳು ಸೇರಿದಂತೆ ಒಟ್ಟು ₹ 2.81 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮತದಾರರಿಗೆ ಹಂಚಲು ತರಲಾಗಿದ್ದ ₹ 53 ಲಕ್ಷ ಮೌಲ್ಯದ ಸೀರೆ ಮುಂತಾದ ಉಡುಗೊರೆಗಳನ್ನೂ ವಶಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಅಧಿಕಾರಿ, ಸಹಾಯಕ ಅಧಿಕಾರಿ ನಿಯೋಜನೆ:ಜಿಲ್ಲೆಯಲ್ಲಿರುವಒಟ್ಟು 1,437 ಮತಗಟ್ಟೆಗಳಿಗೆ ತಲಾಒಬ್ಬ ಪ್ರಮುಖ ಅಧಿಕಾರಿ, ಸಹಾಯಕ ಅಧಿಕಾರಿಗಳು ಹಾಗೂಇಬ್ಬರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಡಾ.ಕೆ.ಹರೀಶಕುಮಾರ್ ತಿಳಿಸಿದರು.

ಮೊಹಮ್ಮದ್ ರೋಶನ್ ಮಾತನಾಡಿ, ‘ಜಿಲ್ಲೆಯಲ್ಲಿ 11 ಸಖಿ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಈ ಬಾರಿ ಅವುಗಳಿಗೆ ನೀಲಿ ಬಣ್ಣ ಬಳಿಯಲಾಗಿದೆ. ಹಳಿಯಾಳ ತಾಲ್ಲೂಕಿನ ಗರಡೊಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 136 ಹಾಗೂ ಯಲ್ಲಾಪುರ ತಾಲ್ಲೂಕಿನ ಕೋಟೆಮನೆಯ ಮತಗಟ್ಟೆ ಸಂಖ್ಯೆ 85ನ್ನು ಬುಡಕಟ್ಟು ಸಂಸ್ಕೃತಿಯ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್, ಐಎಎಸ್ ಪ್ರೊಬೆಷನರ್ ದಿಲೀಶ್ ಸಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT