ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಘನಾಶಿನಿ ನೀರಿನಲ್ಲಿ ‘ಪಚ್ಚಲೆ’ ಕೃಷಿ: ಸ್ನೇಹಕುಂಜ ಸಂಸ್ಥೆಯ ಮಾರ್ಗದರ್ಶನ

ರಾಜ್ಯದ ಎರಡನೇ ಕೇಂದ್ರವೆಂಬ ಹೆಗ್ಗಳಿಕೆ: ಸ್ನೇಹಕುಂಜ ಸಂಸ್ಥೆಯ ಮಾರ್ಗದರ್ಶನ
Last Updated 14 ಫೆಬ್ರುವರಿ 2021, 10:49 IST
ಅಕ್ಷರ ಗಾತ್ರ

ಕಾರವಾರ: ಅತ್ಯಂತ ಅಪರೂಪದ ಹಾಗೂ ಹೆಚ್ಚು ಬೇಡಿಕೆಯುಳ್ಳ ‘ಪಚ್ಚಲೆ’ಯ ಸಾಕಣೆಯು ಇದೇ ಮೊದಲ ಬಾರಿಗೆ ಉತ್ತರ ಕನ್ನಡದಲ್ಲೂ ಆರಂಭವಾಗಿದೆ. ಕುಮಟಾ ತಾಲ್ಲೂಕಿನ ಐಗಳಕೂರ್ವೆಯಲ್ಲಿ ಆರಂಭವಾಗಿರುವ ಕೃಷಿಯು ರಾಜ್ಯದಲ್ಲೇ ಎರಡನೇ ಪ್ರಯತ್ನವೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕಪ್ಪೆ ಚಿಪ್ಪಿಗೆ ಸಾಮ್ಯತೆ ಹೊಂದಿರುವ ‘ಪಚ್ಚಲೆ’ಯು ಸಿಹಿ ಮತ್ತು ಉಪ್ಪು ನೀರು ಸಮಾನವಾಗಿರುವ ಅಳಿವೆ ಪ್ರದೇಶದಲ್ಲಿ ಹೆಚ್ಚು ಬೆಳೆಯುತ್ತವೆ. ಈ ಜಲಚರಗಳ ಮೇಲೆ ಗಟ್ಟಿಯಾದ ಚಿಪ್ಪು ಇದ್ದು, ಅದರ ಅಂಚು ಹಸಿರು ಬಣ್ಣದಿಂದ ಕೂಡಿದೆ. ಅದರೊಳಗಿರುವ ಮಾಂಸವು ಹೇರಳವಾದ ಪೌಷ್ಟಿಕಾಂಶದಿಂದ ಕೂಡಿದೆ. ಪಚ್ಚಲೆಯ ಕೃತಕ ಕೃಷಿ ಪದ್ಧತಿಯು ಕೇರಳದಲ್ಲಿ ಈಗಾಗಲೇ ಪ್ರಸಿದ್ಧವಾಗಿದೆ. ಉಡುಪಿ ಜಿಲ್ಲೆಯ ಕೋಡಿ ಕನ್ಯಾನದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಇದರ ಕೃಷಿಯನ್ನು ಶಂಕರ ಕುಂದರ್ ಆರಂಭಿಸಿದರು.

ಪಚ್ಚಲೆಯ ಸಾಕಣೆಯಲ್ಲಿ ಮೀನುಗಾರರ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಅವಕಾಶಗಳು ಇರುವುದನ್ನು ಹೊನ್ನಾವರದ ಕಾಸರಕೋಡಿನ ‘ಸ್ನೇಹಕುಂಜ ಸಂಸ್ಥೆ’ ಗುರುತಿಸಿತು. ಈ ನಿಟ್ಟಿನಲ್ಲಿ ಕುಮಟಾ ತಾಲ್ಲೂಕಿನ ಅಘನಾಶಿನಿ ನದಿಯ ಅಳಿವೆ ಪ್ರದೇಶದಲ್ಲಿ ಸಮೀಪದ 15 ಜನರನ್ನು ಆಯ್ಕೆ ಮಾಡಿಕೊಂಡಿತು. ಅವರಿಗೆ ‘ನಬಾರ್ಡ್’ ಸಂಸ್ಥೆಯ ಹಣಕಾಸು ನೆರವಿನೊಂದಿಗೆ ಪಚ್ಚಲೆಯ ಬೆಳೆಸಲು ತರಬೇತಿ ಹಾಗೂ ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡುತ್ತಿದೆ. ಅಲ್ಲದೇ ಅಗತ್ಯ ಹಣಕಾಸಿನ ಸಹಾಯವನ್ನೂ ಒದಗಿಸುತ್ತಿದೆ.

‘ಶಂಕರ ಕುಂದರ್ ಅವರ ಮಾರ್ಗದರ್ಶನದಲ್ಲಿ ಐಗಳಕೂರ್ವೆಯಲ್ಲಿ ಈಗಾಗಲೇ 15 ರೆಪ್ಪಗಳನ್ನು (ಪಂಜರ ಮಾದರಿಯ ಉಪಕರಣ) ಅಳವಡಿಸಲಾಗಿದೆ. ಅವುಗಳಿಗೆ ಕೇರಳದಿಂದ ತರಲಾಗಿರುವ ಪಚ್ಚಲೆಯ ಮರಿಗಳನ್ನಿಟ್ಟು ಅಘನಾಶಿನಿಯಲ್ಲಿ ಇಳಿ ಬಿಡಲಾಗಿದೆ’ ಎಂದು ಸ್ನೇಹಕುಂಜ ಸಂಸ್ಥೆಯ ಪ್ರಮುಖರಾದ ಅರುಣ್ ವಿವರಿಸಿದರು.

ವಿದೇಶದಲ್ಲೂ ಉತ್ತಮ ಬೇಡಿಕೆ:

‘ಒಂದು ರೆಪ್ಪದಲ್ಲಿ (ಪಂಜರ) ಸುಮಾರು 200 ಹಗ್ಗಗಳನ್ನು ಕಟ್ಟಲು ಸಾಧ್ಯವಿದೆ. ಅವುಗಳಲ್ಲಿ ಒಟ್ಟು 40 ಸಾವಿರ ಪಚ್ಚಲೆಗಳನ್ನು ಬೆಳೆಸಲು ಸಾಧ್ಯವಿದೆ. 120ರಿಂದ 130 ದಿನಗಳಲ್ಲಿ ಅವುಗಳನ್ನು ನೀರಿನಿಂದ ಹೊರತಂದು ಮಾರಾಟ ಮಾಡಬಹುದು. ಮಾರುಕಟ್ಟೆಯಲ್ಲಿ ಪ್ರಸ್ತುತ ಪ್ರತಿ ಪಚ್ಚಲೆಗೆ ಸರಾಸರಿ ₹ 4 ದರವಿದೆ. ಇದರ ಪ್ರಕಾರ ಒಂದು ಸಲಕ್ಕೆ ₹ 80 ಸಾವಿರ ಆದಾಯ ಪಡೆಯಲು ಸಾಧ್ಯವಿದೆ’ ಎಂದು ಅರುಣ್ ವಿವರಿಸಿದರು.

‘ಪಚ್ಚಲೆಯ ಮಾಂಸವು ನಮ್ಮ ದೇಶದಲ್ಲಿ ಗೋವಾ, ಮಹಾರಾಷ್ಟ್ರದಲ್ಲಿ ಹಾಗೂ ವಿದೇಶಗಳಲ್ಲೂ ಉತ್ತಮ ಬೇಡಿಕೆ ಹೊಂದಿದೆ. ಇದರ ಸಾಕಣೆಯ ಮೂಲಕ ಸ್ಥಳೀಯರ ಆರ್ಥಿಕತೆ ಬಲ ನೀಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ರೆಪ್ಪ ನಿರ್ಮಾಣ ಹಾಗೂ ಪಚ್ಚಲೆ ಮರಿಗಳ ಖರೀದಿಗೆ ತಗಲುವ ವೆಚ್ಚವನ್ನು ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮತ್ಸ್ಯ ಸಂಪದ ಯೋಜನೆಯಡಿ ಭರಿಸಲು ಅವಕಾಶವಿದೆ’ ಎಂದೂ ತಿಳಿಸಿದರು.

ಆಸಕ್ತರು ಹೆಚ್ಚಿನ ಮಾಹಿತಿಗೆ ಮೊಬೈಲ್ ದೂರವಾಣಿ ಸಂಖ್ಯೆ: 86608 41322 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT