ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಪಾಠಕ್ಕೆ ಶಿಕ್ಷಿತ ತಾಯಂದಿರ ಒಲವು: ಬೇಸರ

ಕಾರವಾರ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್
Last Updated 5 ಸೆಪ್ಟೆಂಬರ್ 2019, 12:42 IST
ಅಕ್ಷರ ಗಾತ್ರ

ಕಾರವಾರ: ‘ತಾಯಿಯೇ ಮೊದಲ ಗುರು. ಆದರೆ, ಈಗ ಶಿಕ್ಷಣ ಹೊಂದಿರುವ ಹಲವು ತಾಯಂದಿರು ತಮ್ಮ ಮಕ್ಕಳಿಗೆ ಮನೆಯಲ್ಲಿ ಬೋಧನೆ ಮಾಡುತ್ತಿಲ್ಲ. ಮನೆಪಾಠಕ್ಕೆ ಕಳುಹಿಸಲು ಗಮನ ಹರಿಸುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಬೇಸರವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹಿಂದಿನ ಗುರುಕುಲ ಪದ್ಧತಿ ಮತ್ತು ಈಗಿನ ಶಿಕ್ಷಣ ವ್ಯವಸ್ಥೆಯಿಂದ ಸಮಾಜದ ಮೇಲೆ ಆಗಿರುವ ಪರಿಣಾಮಗಳೇನು ಎಂದು ಪರಾಮರ್ಶೆ ಮಾಡಬೇಕಾಗಿದೆ. ಶಿಕ್ಷಕರಿಗೂ ಗೊತ್ತಿಲ್ಲದ ಹಲವು ವಿಷಯಗಳಲ್ಲಿ ಮಕ್ಕಳು ಪರಿಣತರಾಗಿದ್ದಾರೆ. ಕಲಿಕೆಗೆ ಇಂದು ಅವಕಾಶಗಳು ಜಾಸ್ತಿಯಾಗಿವೆ. ಹಾಗಾಗಿ, ಗುರುಗಳೂ ಕಾಲಕಾಲಕ್ಕೆ ತಮ್ಮ ಜ್ಞಾನವನ್ನು ಪರಿಷ್ಕರಣೆ ಮಾಡುತ್ತಿರಬೇಕು’ ಎಂದು ಸಲಹೆ ನೀಡಿದರು.

‘ಶಿಕ್ಷಣವೆಂದರೆ ಶಿಕ್ಷೆ ಕೊಟ್ಟು ಕಲಿಸುವುದೇಅಥವಾ ಪ್ರೀತಿ ಕೊಟ್ಟು ಅರಿವು ಮೂಡಿಸುವುದೇ ಎಂದು ಯೋಚಿಸಬೇಕು. ಸಾಂಪ್ರದಾಯಿಕ ಶಿಕ್ಷಣದ ಜೊತೆಗೇ ಹೊಸತನಕ್ಕೆ ಎಲ್ಲರೂ ಒಗ್ಗಿಕೊಳ್ಳಬೇಕು’ ಎಂದರು.

‘ಶಿಕ್ಷಕರ ವರ್ಗದಲ್ಲಿ ಒಂದಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಬೀದಿಗಿಳಿದು ಹೋರಾಡುತ್ತಿರುವುದೂ ಆಡಳಿತದ ಗಮನದಲ್ಲಿದೆ. ಶಿಕ್ಷಕರು ಒಳ್ಳೆಯ ಸಮಾಜ ರೂಪಿಸುತ್ತಾರೆ. ಹಾಗಾಗಿ ಜ್ಞಾನಾಭಿವೃದ್ಧಿಗೆ ಓದುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಇದರಲ್ಲಿ ಸಿಗುವ ಆನಂದ ಮತ್ಯಾವುದರಲ್ಲೂ ಇಲ್ಲ’ ಎಂದು ಹೇಳಿದರು.

ಉಪನ್ಯಾಸಕ ಮಾಣೇಶ್ವರ ನಾಯ್ಕ ಮಾತನಾಡಿ, ‘ಶಿಕ್ಷಣ ಜೀವನದ ಅವಿಭಾಜ್ಯ ಅಂಗ. ಗುರುವಿಲ್ಲದ ಶಿಕ್ಷಣಕ್ಕೆ ಮಹತ್ವವಿಲ್ಲ. ಶಿಕ್ಷಕರು ಮಕ್ಕಳ ಪಾಲಿಗೆ ದಿಕ್ಸೂಚಿಯಾಗಬೇಕು’ ಎಂದು ಸಲಹೆ ನೀಡಿದರು.

‘ಸಮಾಜದಲ್ಲಿ ಯಾರೋ ಒಬ್ಬರು ತಪ್ಪು ಮಾಡಿದರೆ ಅಷ್ಟಾಗಿ ಪರಿಣಾಮ ಬೀರದು. ಆದರೆ, ತಪ್ಪು ಮಾಡಿದರೆ ಇಡೀ ಸಮಾಜದ ಮೇಲೆ ಪರಿಣಾಮವಾಗುತ್ತದೆ. ನಮ್ಮ ನಡವಳಿಕೆಯನ್ನು ಸಮಾಜವು ಬಹಳ ಹತ್ತಿರದಿಂದ ಗಮನಿಸುತ್ತದೆ. ಹಾಗಾಗಿ, ನಾವು ಇಡುವ ಪ್ರತಿ ಹೆಜ್ಜೆಯೂ ಜವಾಬ್ದಾರಿಯಿಂದ ಕೂಡಿರಬೇಕು’ ಎಂದು ಅಭಿಪ‍್ರಾಯಪಟ್ಟರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಕೊಠಾರಕರ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ರವೀಂದ್ರ ಪವಾರ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ಆರ್ ನಾಯಕ ಸ್ವಾಗತಿಸಿದರು. ಬಾಲಮಂದಿರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಗಣೇಶ ಬಿಷ್ಟಣ್ಣನವರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರ ವಿವಿಧ ಸಂಘಟನೆಗಳ ಪ್ರಮುಖರು ವೇದಿಕೆಯಲ್ಲಿದ್ದರು.

ಸಾಧಕರಿಗೆ ಸನ್ಮಾನ:‘ನಲಿ ಕಲಿ’ ಯೋಜನೆಯಲ್ಲಿ ಉತ್ತಮವಾಗಿಕರ್ತವ್ಯ ನಿರ್ವಹಿಸಿರುವ ಮೂವರು ಶಿಕ್ಷಕಿಯರಿಗೆ ತಲಾ ₹ 5 ಸಾವಿರ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಶೇಜವಾಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಮಿತಾ ನಾಯ್ಕ, ಚೆಂಡಿಯಾ ನಂ.1 ಹಿರಿಯ ಪ್ರಾಥಮಿಕ ಶಾಲೆಯ ಮಮತಾ ಪೈ ಹಾಗೂ ಶಿರ್ವೆ ಹಿರಿಯ ಪ್ರಾಥಮಿಕ ಶಾಲೆಯ ಚಂದ್ರಪ್ರಭಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ, ಶಿಕ್ಷಕರ ಮಕ್ಕಳನ್ನು ಪುರಸ್ಕರಿಸಲಾಯಿತು. ಸೃಜನ್ ಸಚಿನ್ ಕಾಮತ್ (621 ಅಂಕ), ಪ್ರಾಚಿ ಜೈದೀಪ ಗೋ‍ಪಶಿಟ್ಕರ್ (615 ಅಂಕ) ಹಾಗೂ ನಂದಿನಿ ಪ್ರಶಾಂತ ಸಾವಂತ್ (610 ಅಂಕ) ಅಭಿನಂದನೆ ಪಡೆದುಕೊಂಡರು.ಇದೇ ಸಂದರ್ಭದಲ್ಲಿ,2018–19ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕ, ಶಿಕ್ಷಕಿಯರನ್ನೂ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT