ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಯಿಸಿಟ್ಟ ಆಹಾರ ಸೆಕೆಯಿಂದ ಹಾಳು: ಮಧ್ಯಾಹ್ನದ ಬಿಸಿಯೂಟಕ್ಕೆ ಒತ್ತಾಯ

Last Updated 3 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ಕಾರಣದಿಂದಾಗಿ ಮುಚ್ಚಲಾಗಿದ್ದ ಶಾಲೆಗಳು ಹಂತಹಂತವಾಗಿ ಪುನರಾರಂಭ ಆಗುತ್ತಿವೆ. ಆದರೆ, ಮಧ್ಯಾಹ್ನದ ಬಿಸಿಯೂಟದ ಬದಲು ಬೇಳೆ ಕಾಳು ಕೊಡುವುದನ್ನು ಮುಂದುವರಿಸಲಾಗಿದೆ. ಇದರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ ಎಂದು ಪಾಲಕರು ಅಳಲು ತೋಡಿಕೊಂಡಿದ್ದಾರೆ.

ಮಧ್ಯಾಹ್ನದ ಬಿಸಿಯೂಟವನ್ನು ನೆಚ್ಚಿಕೊಂಡಿರುವ ನೂರಾರು ಬಡ ವಿದ್ಯಾರ್ಥಿಗಳಿದ್ದಾರೆ. ಅವರ ಪಾಲಕರು ಬೆಳಿಗ್ಗೆ ಕೂಲಿ ಕೆಲಸಕ್ಕೆಂದು ಮನೆಗಳಿಂದ ಹೊರ ಹೋಗುತ್ತಾರೆ. ಅದಕ್ಕೂ ಮೊದಲು ಆಹಾರ ಪದಾರ್ಥಗಳನ್ನು ಬೇಯಿಸಿಡುತ್ತಾರೆ. ಮಕ್ಕಳಿಗೆ ಬುತ್ತಿಗೂ ಅದೇ ಆಹಾರವನ್ನು ತುಂಬಿಸಿ ಕಳುಹಿಸುತ್ತಾರೆ.

ಕೆಲವು ದಿನಗಳಿಂದ ಜಿಲ್ಲೆಯಲ್ಲಿ, ವಿಶೇಷವಾಗಿ ಕರಾವಳಿಯಲ್ಲಿ ಮಧ್ಯಾಹ್ನ ಬಿಸಿಲಿನ ಝಳ ಹೆಚ್ಚಿದೆ. ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ದಾಖಲಾಗುತ್ತಿದೆ. ಇದರಿಂದ ಮಕ್ಕಳು ಶಾಲೆಯಿಂದ ಪುನಃ ಮನೆಗೆ ಬರುವಷ್ಟರಲ್ಲಿ ಆಹಾರ ಹಳಸುತ್ತಿದೆ. ಬುತ್ತಿಯಲ್ಲೂ ರುಚಿ ಬದಲಾಗುತ್ತಿರುವುದಾಗಿ ಮಕ್ಕಳು ದೂರುತ್ತಿದ್ದಾರೆ ಎಂದು ಪಾಲಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಲಾಕ್‌ಡೌನ್ ಸಂದರ್ಭದಲ್ಲಿ ತರಗತಿಗಳು ಇಲ್ಲದಿದ್ದರೂ ಮಕ್ಕಳಿಗೆ ಆಹಾರದ ಕೊರತೆ ಆಗದಂತೆ ಸರ್ಕಾರ ಬೇಳೆ ಕಾಳುಗಳನ್ನು ನೀಡಿದ ಕ್ರಮ ಶ್ಲಾಘನೀಯ. ಆದರೆ, ಈಗ ತರಗತಿಗಳು ಪುನರಾರಂಭವಾಗಿವೆ. ಮಕ್ಕಳೂ ಶಾಲೆಗಳಿಗೆ ಹೋಗುತ್ತಿದ್ದಾರೆ. ಬಿಸಿಯೂಟದ ಸಿಬ್ಬಂದಿಯೂ ಕರ್ತವ್ಯದಲ್ಲಿದ್ದಾರೆ. ಹಾಗಾಗಿ ಶಾಲೆಗಳಲ್ಲೇ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಬಿಸಿಯೂಟ ನೀಡುವುದು ಸೂಕ್ತ. ಶುಚಿ, ರುಚಿಯಾದ ಆಹಾರ ಮಕ್ಕಳಿಗೆ ಸಿಕ್ಕಂತಾಗುತ್ತದೆ’ ಎನ್ನುವುದು ಕೂಲಿ ಕಾರ್ಮಿಕ, ಗೋಕರ್ಣದ ಮಂಜುನಾಥ ನಾಯ್ಕ ಅವರ ಅಭಿಪ್ರಾಯವಾಗಿದೆ.

‘ಶಾಲೆಗಳಲ್ಲಿ ಮಕ್ಕಳಿಗೆ ಬೇಳೆ, ಕಾಳು ಬದಲು ಬಿಸಿಯೂಟವನ್ನೇ ಕೊಡುವುದು ಸೂಕ್ತ. ಯಾವುದೇ ಮಕ್ಕಳೂ ಆಹಾರದಿಂದ ವಂಚಿತರಾಗಬಾರದು. ಈ ಹಿಂದೆ ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಕೊಡಲೂ ಸರ್ಕಾರ ಮೀನಮೇಷ ಮಾಡಿತ್ತು. ಬಳಿಕ, ಅಂಗನವಾಡಿ ಕಾರ್ಯಕರ್ತರ ಒಕ್ಕೂಟಗಳ ಒತ್ತಾಯಕ್ಕೆ ಮಣಿದು ವಿತರಿಸಿದರು’ ಅಕ್ಷರದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಯಮುನಾ ಗಾಂವ್ಕರ್ ಹೇಳಿದ್ದಾರೆ.

‘ಇದೇರೀತಿ, ಶಾಲಾ ಮಕ್ಕಳ ವಿಚಾರದಲ್ಲಿ ಕೂಡ ಆಗಬೇಕು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುವ ಪ್ರದೇಶದಲ್ಲೇ ಅಡುಗೆ ಮಾಡಿ ಕೊಡುವುದನ್ನೂ ಪರಿಶೀಲಿಸಬಹುದು. ಒಟ್ಟಿನಲ್ಲಿ ಆಹಾರವನ್ನು ಅಡುಗೆ ಮಾಡಿಯೇ ಕೊಡುವ ಪದ್ಧತಿ ಶುರುವಾಗಬೇಕು’ ಎಂದು ಒತ್ತಾಯಿಸಿದ್ದಾರೆ.

‘ಗಮನಕ್ಕೆ ತರಲಾಗುವುದು’

‘ಶಾಲಾ ಮಕ್ಕಳಿಗೆ ಬಿಸಿಯೂಟ ಆರಂಭಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಅಲ್ಲಿಂದ ನಿರ್ದೇಶನ ಬಂದರೆ ಜಿಲ್ಲೆಯಲ್ಲೂ ಶುರು ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ. ಪ್ರಿಯಾಂಗಾ ತಿಳಿಸಿದ್ದಾರೆ.

‘ಮಕ್ಕಳಿಗೆ ಆಗಸ್ಟ್ ನಂತರದ ಅವಧಿಗೂ ಬೇಳೆ, ಕಾಳು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನದ ಬಿಸಿಯೂಟದ ಅಗತ್ಯವಿರುವ ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿರುವ ಬಗ್ಗೆ ಈ ಹಿಂದೆಯೂ ತಿಳಿಸಲಾಗಿದೆ. ಬೇಯಿಸಿಟ್ಟ ಆಹಾರ ಸೆಕೆಯಿಂದ ಹಾಳಾಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT