ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಶಾಲೆ ಮಕ್ಕಳು ಸರ್ಕಾರಿ ಶಾಲೆಯೆಡೆಗೆ

ಶಾಸಕರ ಮಾದರಿ ಶಾಲೆ ನಂ.2ರಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭ
Last Updated 29 ಮೇ 2019, 14:24 IST
ಅಕ್ಷರ ಗಾತ್ರ

ಶಿರಸಿ: ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದ ಪಾಲಕರು ಸರ್ಕಾರಿ ಶಾಲೆಗಳೆಡೆಗೆ ಮುಖ ಮಾಡಿದ್ದಾರೆ. ನಗರದ ಶಾಸಕರ ಸರ್ಕಾರಿ ಮಾದರಿ ಶಾಲೆ ನಂ.2ರಲ್ಲಿ ಒಂದನೇ ತರಗತಿ ಇಂಗ್ಲಿಷ್ ಮಾಧ್ಯಮಕ್ಕೆ 11 ಮಕ್ಕಳು, 6ನೇ ತರಗತಿ ಇಂಗ್ಲಿಷ್ ಮಾಧ್ಯಮಕ್ಕೆ ಖಾಸಗಿ ಶಾಲೆಗಳಿಂದ ಬಂದಿರುವ 40 ಮಕ್ಕಳು ಪ್ರವೇಶ ಪಡೆದಿದ್ದಾರೆ.

ಸೋಮವಾರ ಶಾಲಾ ಪ್ರಾರಂಭೋತ್ಸವ, ಇಂಗ್ಲಿಷ್ ಮಾಧ್ಯಮ ತರಗತಿ ಉದ್ಘಾಟನಾ ಕಾರ್ಯಕ್ರಮ ಈ ಶಾಲೆಯಲ್ಲಿ ನಡೆಯಿತು. ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ ಕಾರ್ಯಕ್ರಮ ಉದ್ಘಾಟಿಸಿದರು. ಬಡಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ದೊರೆಯಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಪ್ರಾರಂಭಿಸಿರುವ ಯೋಜನೆಯಿಂದ, ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಉತ್ಸುಕರಾಗಿದ್ದಾರೆ. ಮಾತೃಭಾಷೆಯ ಬಗ್ಗೆ ಅಭಿಮಾನ ಇರಬೇಕು. ಆದರೆ, ದುರಭಿಮಾನ ಇರಬಾರದು. ಎಲ್ಲ ಭಾಷೆಗಳನ್ನು ಮುಕ್ತ ಮನಸ್ಸಿನಿಂದ ಕಲಿಯಬೇಕು. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಿಸಬೇಕು’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಿಸಿರುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಖಾಸಗಿಯವರ ಪೈಪೋಟಿ ಎದುರಿಸಲು ಸುಲಭವಾಗುತ್ತದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಮಾತನಾಡಿ, ‘ತಾಲ್ಲೂಕಿನ ಎಲ್ಲ ಶಾಲೆಗಳಿಗೆ ಶೇ 97ರಷ್ಟು ಪಠ್ಯಪುಸ್ತಕ ವಿತರಣೆ ಆಗಿದೆ. ವಾರದೊಳಗೆ ಸಮವಸ್ತ್ರ ವಿತರಿಸಲಾಗುವುದು. ಎರಡು ಕಡೆ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಶಿಕ್ಷಣ, ಬಿಳೂರಿನಲ್ಲಿ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲಾಗಿದೆ’ ಎಂದರು. ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ನಗರಸಭೆ ಸದಸ್ಯರಾದ ವೀಣಾ ಶೆಟ್ಟಿ, ರಾಘು ಶೆಟ್ಟಿ, ನಿವೃತ್ತ ಪ್ರಾಚಾರ್ಯ ಎಸ್.ಐ.ಭಟ್ಟ, ಡಯಟ್ ಪ್ರಾಚಾರ್ಯ ಬಿ.ವಿ.ನಾಯ್ಕ, ವೆಂಕಟೇಶ ಪಟಗಾರ, ಹಫೀಜ್ ಖಾನ್, ವಸಂತ ಭಂಡಾರಿ ಇದ್ದರು. ಅಶೋಕ ಭಜಂತ್ರಿ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ದಾಖಲಾತಿ ಆಂದೋಲನ ನಡೆಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT