ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರ್ನಾಟಕದ ಕಾಶ್ಮೀರ’ದಲ್ಲಿ ಸೊರಗಿದ ಉದ್ಯಾನಗಳು!

ಕಾರವಾರ ಪಾರ್ಕ್‌ಗಳಿಗೆ ನಿರ್ವಹಣೆಯ ಕೊರತೆ: ಅಭಿವೃದ್ಧಿ ಪಡುವಂತೆ ನಾಗರಿಕರ ಒತ್ತಾಯ
Last Updated 11 ನವೆಂಬರ್ 2019, 19:41 IST
ಅಕ್ಷರ ಗಾತ್ರ

ಪ್ರಾಕೃತಿಕವಾಗಿ ಸುಂದರವಾಗಿ ಕಾರವಾರದಲ್ಲಿ ಉದ್ಯಾನಗಳ ನಿರ್ವಹಣೆಯಾಗುತ್ತಿಲ್ಲ ಎಂಬುದು ನಾಗರಿಕರ ಬೇಸರ. ನಗರದ ಉದ್ಯಾನಗಳ ಸ್ಥಿತಿಗತಿ ಹೇಗಿದೆ, ನಗರಸಭೆ ಅಧಿಕಾರಿಗಳು ಏನು ಹೇಳುತ್ತಾರೆ... ಇತ್ಯಾದಿ ವಿಚಾರಗಳ ಬಗ್ಗೆ ಈ ವಾರದ ‘ನಮ್ಮ ನಗರ ನಮ್ಮ ಧ್ವನಿ’ಯಲ್ಲಿ ಮಾಹಿತಿಯಿದೆ.

ಕಾರವಾರ:‘ಕರ್ನಾಟಕ ಕಾಶ್ಮೀರ’ ಎಂದೇ ಪ್ರಸಿದ್ಧವಾಗಿರುವ ನಗರದ ಸುತ್ತಲೂ ಅಚ್ಚ ಹಸಿರಿನ ಕಾಡು. ಪಕ್ಕದಲ್ಲಿ ಸದಾ ತುಂಬಿ ಹರಿಯುವ ಕಾಳಿ ನದಿ. ಎದುರು ವಿಶಾಲವಾಗಿ ಚಾಚಿಕೊಂಡಿರುವ ಅರಬ್ಬಿ ಸಮುದ್ರ. ಇವುಗಳ ಜೊತೆಗೆ ಸುಂದರವಾಗಿ ಕಂಗೊಳಿಸಬೇಕಾಗಿದ್ದ ನಗರದ ಉದ್ಯಾನಗಳು ಮಾತ್ರ ಸೊರಗಿವೆ.

ನಗರದಲ್ಲಿರುವ ಸಣ್ಣ ಸಣ್ಣ ಉದ್ಯಾನಗಳ ನಿರ್ವಹಣೆಯೇ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ ಎಂಬುದು ನಾಗರಿಕರ ಬೇಸರವಾಗಿದೆ. ಮರಗಿಡಗಳ ನಡುವೆ ಹೆಜ್ಜೆ ಹಾಕುವಾಗ ಸಿಗುವ ಸಂತಸ ಕಡಲತೀರದಲ್ಲಿ ನಡೆಯುವಾಗ ಆಗುವ ಅನುಭವಕ್ಕಿಂತ ಭಿನ್ನವಾಗಿರುತ್ತದೆ. ಹಾಗಾಗಿ ಉದ್ಯಾನಗಳ ಅಭಿವೃದ್ಧಿ ಅಗತ್ಯ ಎಂಬುದು ಹಲವು ಸಮಯದ ಬೇಡಿಕೆಯಾಗಿದೆ.

ಮಕ್ಕಳ ಉದ್ಯಾನ, ಗಾಂಧಿ ಪಾರ್ಕ್, ಹಬ್ಬುವಾಡದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಎದುರು, ಕೆ.ಎಚ್‌.ಬಿ ಕಾಲೊನಿಯಲ್ಲಿ ಎರಡು ಉದ್ಯಾನಗಳು ನಗರಸಭೆ ನಿಯಂತ್ರಣದಲ್ಲಿವೆ. ಕಾಳಿ ರಿವರ್ ಗಾರ್ಡನ್ ಹಾಗೂ ಯುದ್ಧನೌಕೆ ಸಮೀಪದ ಉದ್ಯಾನಗಳು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯ ಉಸ್ತುವಾರಿಯಲ್ಲಿವೆ.

‘ನಗರದಲ್ಲಿಸಣ್ಣ ಸಣ್ಣ ಉದ್ಯಾನಗಳಿರುವ ಕಾರಣ ಅವುಗಳ ನಿರ್ವಹಣೆ ಬಲು ಸುಲಭ ಎನ್ನುವುದು ನನ್ನ ಭಾವನೆ. ನಿರಂತರವಾಗಿ ನಿರ್ವಹಣೆ ಮಾಡುತ್ತಿದ್ದರೆ ಸ್ಥಳೀಯ ಆಡಳಿತಕ್ಕೂ ಹೆಚ್ಚಿನ ಹೊರೆಯಾಗದು. ಆದರೆ, ಈ ಬಗ್ಗೆ ಯಾಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ’ ಎನ್ನುತ್ತಾರೆ ಕೋಡಿಬಾಗದ ದರ್ಶನ್ ರೇವಣಕರ್.

‘ಬಹುತೇಕ ಉದ್ಯಾನಗಳಲ್ಲಿ ಸಂಜೆಯ ನಂತರ ಬೆಳಕಿನ ವ್ಯವಸ್ಥೆಯಿಲ್ಲ. ಹಾಗಾಗಿ ಮಹಿಳೆಯರು, ಯುವತಿಯರು ಆ ಕಡೆ ಹೋಗಲೂ ಹಿಂಜರಿಯುತ್ತಾರೆ. ದೊಡ್ಡ ಮರಗಳು ಬೆಳೆದ ಮಾತ್ರಕ್ಕೇ ಉದ್ಯಾನವಾಯ್ತು ಎಂದರ್ಥವಲ್ಲ. ಅವುಗಳಕೆಳಗೆ ನಡೆದುಕೊಂಡು ಹೋಗಲು ಸೂಕ್ತ ಪಾದಚಾರಿ ಮಾರ್ಗ ನಿರ್ಮಾಣವಾಗಬೇಕು. ಹೂವಿನ ಗಿಡಗಳು ಇರಬೇಕು. ಹುಲ್ಲಿನ ಹಾಸು ಇರಬೇಕು’ ಎಂದು ಅವರು ಪ್ರತಿಪಾದಿಸಿದರು.

ಆಟಿಕೆ ಅಳವಡಿಸಿ:‘ಮಳೆಗಾಲದಲ್ಲಿ ಉದ್ಯಾನದ ತುಂಬ ನೀರು ನಿಲ್ಲುತ್ತದೆ. ಅದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅದರಿಂದ ನಮಗೆ ತೊಂದರೆ ತಪ್ಪಿದ್ದಲ್ಲ’ ಎನ್ನುತ್ತಾರೆ ಕೆ.ಎಚ್.ಬಿ ಹೊಸ ಬಡಾವಣೆಯ ಗೃಹಿಣಿ ಮೈತ್ರಿ. ಇದೇ ಉದ್ಯಾನದ ಬೇಲಿಗೆ ಸ್ಥಳೀಯರು ‘ನಗರಸಭೆಯ ಸೊಳ್ಳೆ ಉದ್ಯಾನ’ ಎಂದು ಫಲಕವೊಂದನ್ನು ಈಚೆಗೆ ಅಳವಡಿಸಿ ವಿನೂತನವಾಗಿ ಆಕ್ರೋಶ ಹೊರಹಾಕಿದ್ದರು!.

‘ಕೆ.ಎಚ್.ಬಿ ಬಡಾವಣೆಯ ವಾಣಿಜ್ಯ ವ್ಯವಹಾರದ ಕಟ್ಟಡಗಳುಅತಿ ಕಡಿಮೆ. ಮನೆಗಳೇ ಹೆಚ್ಚಿರುವ ಕಾರಣ ಇಲ್ಲಿನ ಉದ್ಯಾನವನ್ನು ಅಭಿವೃದ್ಧಿ ಪಡಿಸಿದರೆ ಬಹಳ ಅನುಕೂಲವಾಗುತ್ತದೆ. ನೂರಾರು ಮಕ್ಕಳೂ ಇರುವ ಕಾರಣ ಆಟಿಕೆಗಳನ್ನು ಅಳವಡಿಸಬೇಕು. ಸಂಜೆ, ರಜಾ ದಿನಗಳಲ್ಲಿ ಒಂದಷ್ಟು ಕಾಲ ಹೊರಗಿನ ತಾಜಾ ಗಾಳಿ ಉಸಿರಾಡುತ್ತ ಸಂತಸ ಪಡಲು ಸೂಕ್ತವಾಗಿರುತ್ತದೆ’ ಎನ್ನುವ ಸಲಹೆ ಅವರದ್ದಾಗಿದೆ.

ಕಾರವಾರದ ಬಹುಪಾಲು ಉದ್ಯಾನಗಳಲ್ಲಿ ಮಳೆಗಾಲ ಕಾಡು, ಕುರುಚಲು ಗಿಡಗಳು ಬೆಳೆದರೆ, ಬೇಸಿಗೆಯಲ್ಲಿ ನೆಲ ಒಣಗಿರುತ್ತದೆ. ಗಿಡಗಳಿಗೆ ನೀರಿನ ವ್ಯವಸ್ಥೆಯೂ ಆಗಬೇಕಿದೆ. ಉಪ್ಪು ನೀರು ಹೆಚ್ಚು ಬರುವ ಕಾರಣ ನಗರಸಭೆ ಗಮನ ಹರಿಸಬೇಕು ಎನ್ನುವುದೂ ಅವರ ಮನವಿಯಾಗಿದೆ.

ಪುಟಾಣಿಗಳಿಗೇ ಒಂದು ಉದ್ಯಾನ:‘ಮಳೆಗಾಲವಾದ್ದರಿಂದಉದ್ಯಾನಗಳ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಇನ್ನು ಕೆಲವು ದಿನಗಳಲ್ಲಿ ಒಂದೊಂದೇ ಕಾಮಗಾರಿಗಳನ್ನು ಆರಂಭಿಸಲಾಗುತ್ತದೆ’ ಎನ್ನುತ್ತಾರೆ ನಗರಸಭೆ ಆಯುಕ್ತ ಯೋಗೇಶ್ವರ್.

ಹಬ್ಬುವಾಡ ರಸ್ತೆಯಲ್ಲಿ ಬಸ್ ಡಿಪೋ ಎದುರು ಇರುವ ಉದ್ಯಾನವನ್ನು ಚಿಕ್ಕಮಕ್ಕಳಿಗೆಂದೇ ಮೀಸಲಾಗಿಡುವ ಯೋಚನೆಯಿದೆ. ಅಲ್ಲಿರುವಎರಡು ಬಾವಿಗಳನ್ನು ಮುಚ್ಚಿ, ಮರಳು ತಂದು ಹಾಕಲಾಗುವುದು. ತಾಯಂದಿರು ತಮ್ಮ ಮಕ್ಕಳನ್ನು ಅಲ್ಲಿ ಬಿಟ್ಟುಕೊಂಡು ಸ್ವಲ್ಪ ಹೊತ್ತು ಕಳೆಯಲುಪ್ರಶಸ್ತವಾಗಿದೆ. ಅದಕ್ಕೆ₹ 3 ಲಕ್ಷದ ಅಂದಾಜುಪಟ್ಟಿಮಾಡಲಾಗಿದೆ ಎಂದರು.

ಮಕ್ಕಳ ಉದ್ಯಾನದಲ್ಲಿ ಕಳೆದ ಬಾರಿ ₹ 10 ಲಕ್ಷ ವೆಚ್ಚದಲ್ಲಿಅಳವಡಿಸಲಾಗಿದ್ದ ಕ್ರೀಡಾ ಸಾಮಗ್ರಿ ಈಗ ದುರಸ್ತಿಗೆ ಬಂದಿವೆ. ಅವುಗಳಅಭಿವೃದ್ಧಿಗೆ₹ 5 ಲಕ್ಷದ ಟೆಂಡರ್ ಕರೆಯಲಾಗಿದೆ.ಗಾಂಧಿ ಪಾರ್ಕ್ ಮತ್ತು ಮಕ್ಕಳ ಉದ್ಯಾನದಲ್ಲಿಬೆಂಚುಗಳು, ಬೇಲಿ ಅಳವಡಿಸಿ ಹೊಸದಾಗಿ ಗಿಡಗಳನ್ನು ನೆಡಲಾಗುತ್ತದೆ ಎಂದರು.

ಅಲ್ಲಿದ್ದ ಎರಡು ಕಾರಂಜಿಗಳಲ್ಲಿ ಒಂದು ಚಾಲನೆಯಲ್ಲಿದೆ. ಮತ್ತೊಂದರಲ್ಲಿ ನೀರು ಹೊರ ಬರುತ್ತಿದೆ. ಅದನ್ನು ದುರಸ್ತಿ ಮಾಡಿಸಲಾಗುವುದು.ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಚಿಂತಿಸಲಾಗಿದೆ. ಆದರೆ, ಅವುಗಳನ್ನು ಕಿಡಿಗೇಡಿಗಳು ಕದಿಯುತ್ತಾರೆ. ಬೆಳಕಿನ ವ್ಯವಸ್ಥೆ ಮಾಡಿದರೆ ಒಡೆದು ಹಾಳುಗೆಡವುತ್ತಾರೆ.ಈ ಬಗ್ಗೆಜನರ ಸಹಕಾರ ಅಗತ್ಯ ಎಂದು ಅವರು ಬೇಸರಿಸಿದರು.

***

ಅಂಕಿ ಅಂಶ

77,000 -ಕಾರವಾರದ ಜನಸಂಖ್ಯೆ

6 - ನಗರಭೆಯ ಉದ್ಯಾನಗಳು

₹ 10 ಲಕ್ಷ - ವೆಚ್ಚದಲ್ಲಿ ಮಕ್ಕಳ ಉದ್ಯಾನದ ಆಟಿಕೆಗಳು

₹ 5 ಲಕ್ಷ - ನಿರ್ವಹಣೆಗೆ ಟೆಂಡರ್ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT