ಗುರುವಾರ , ಜನವರಿ 27, 2022
27 °C

1,500ಕ್ಕೂ ಅಧಿಕ ಹೆರಿಗೆ ಮಾಡಿಸಿದ ಪಾರ್ವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಂಕೋಲಾ: ತಾಲ್ಲೂಕಿನ ಕುದ್ರಿಗೆ ಗ್ರಾಮದ ಪಾರ್ವತಿ ನಾರಾಯಣ ಮಡಿವಾಳ, 50 ವರ್ಷಗಳಿಗೂ ಅಧಿಕ ಕಾಲ ಸೂಲಗಿತ್ತಿಯಾಗಿ ಸೇವೆಗೈದಿದ್ದಾರೆ. 1,500ಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಿದ್ದಾರೆ. ಹೆರಿಗೆಯ ಸಂದರ್ಭದಲ್ಲಿ ಸಹಾಯ ಮಾಡುವುದಲ್ಲದೇ ಮಗು ಜನಿಸಿದ ಹಲವು ದಿನಗಳವರೆಗೆ ಸುರಕ್ಷಿತವಾಗಿ ಮಗುವಿನ ಆರೈಕೆ ಮಾಡುವುದು ಇವರ ಕಾಳಜಿಯ ಪ್ರತೀಕವಾಗಿದೆ.

90 ವರ್ಷದ ಪಾರ್ವತಿ ಮಡಿವಾಳ, ತಮ್ಮ ತಾಯಿಯ ಮರಣದ ನಂತರ 35ನೇ ವರ್ಷದಲ್ಲಿ ಸೂಲಗಿತ್ತಿಯಾಗಿ ತೊಡಗಿಸಿಕೊಂಡಿದ್ದಾರೆ. 85 ವರ್ಷದವರೆಗೂ ಅವರು ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ತಾಯಿ ಗೌರಿ ಮಡಿವಾಳರಿಂದ ಹೆರಿಗೆ, ಮಗು ಮತ್ತು ಬಾಣಂತಿಯ ಆರೈಕೆ ಕುರಿತು ಅಲ್ಪಸ್ವಲ್ಪ ತಿಳಿದುಕೊಂಡು ಅದನ್ನು ಮುಂದುವರಿಸಿಕೊಂಡು ಬಂದಿದ್ದರು.

ವಾಹನದ ಸೌಲಭ್ಯ ಇಲ್ಲದ ಸಂದರ್ಭದಲ್ಲಿ ದೂರದ ಅಗಸೂರು, ಶಿರಗುಂಜಿ ಮತ್ತಿತರೆಡೆ ನಡೆದುಕೊಂಡು ಹೋಗುತ್ತಿದ್ದರು. ವಾಸರಕುದ್ರಿಗೆ ಗ್ರಾಮ ಪಂಚಾಯಿತಿಯ ಗುಡ್ಡಗಾಡಿನ ಕುಗ್ರಾಮ ಮೇಲಿನಗುಳಿಯಲ್ಲಿ ಮನೆ ಹೊಂದಿದ್ದ ಪಾರ್ವತಿ, ದೂರದ ಊರಿನಿಂದ ತಮ್ಮನ್ನು ಹುಡುಕಿಕೊಂಡು ಬಂದ ಜನರಿಗೆ ನಿರಾಕರಿಸದೆ ಮತ್ತೆ ರಾತ್ರಿಯಲ್ಲಿಯೂ ಸೇವೆ ನೀಡಲು ತೆರಳುತ್ತಿದ್ದರು.

ಜಾತಿಭೇದವಿಲ್ಲದೆ ಮನೆಯ ಸದಸ್ಯರಂತೆ ಮಕ್ಕಳ ಆರೈಕೆಯಲ್ಲಿ ತೊಡಗುತ್ತಿದ್ದರು. ಪಾರ್ವತಿಯವರ ಸೇವೆಯಲ್ಲಿ ಎರಡು ತಲೆಮಾರುಗಳು ಆರೈಕೆ ಪಡೆದುಕೊಂಡಿದ್ದು, ಊರಿನವರು ಗೌರವಪೂರ್ವಕವಾಗಿ ಸ್ಮರಿಸುತ್ತಾರೆ. ಮಗುವಿನ ಹೆರಿಗೆ ಮತ್ತು 12 ದಿನಗಳವರೆಗೆ ಆರೈಕೆ ಮಾಡಿದ್ದಕ್ಕೆ ಪ್ರತಿಯಾಗಿ ಕೇವಲ ಒಂದು ಕೊಳಗ ಅಕ್ಕಿ ಮತ್ತು ತೆಂಗಿನಕಾಯಿ ಪಡೆದುಕೊಳ್ಳುತ್ತಿದ್ದರು.

ಅವರ ಸೂಲಗಿತ್ತಿ ಸೇವೆಯಲ್ಲಿ ಅವಳಿ ಮಕ್ಕಳ ಹೆರಿಗೆ ಮಾಡಿಸಿದ್ದು ಪ್ರಖ್ಯಾತ ವೈದ್ಯರು ಶ್ಲಾಘನೆ ವ್ಯಕ್ತಪಡಿಸಿದ್ದರು. 50 ವರ್ಷಗಳ ಸೂಲಗಿತ್ತಿ ಸೇವೆಯಲ್ಲಿ ಹೆರಿಗೆಯ ಸಂದರ್ಭದಲ್ಲಿ ಬಾಣಂತಿಯರಿಗಾಗಿ ಮಗುವಿಗಾಗಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಪಾರ್ವತಿ ನೆನಪಿಸಿಕೊಳ್ಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.