ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಣಕ್ಕೆ ಪ್ರಯಾಣ: ಪ್ರಯಾಣಿಕರು ಹೈರಾಣ

ಕಾಲ್ನಡಿಗೆಯಲ್ಲಿ ಸಾಗಲೂ ಅಯೋಗ್ಯವಾಗಿರುವ ರಸ್ತೆ
Last Updated 11 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಶಿರಸಿ: ‘ತ್ರಾಣವಿದ್ದರೆ ಯಾಣ’ ಎಂಬ ಮಾತು ಹಳೆಯದು. ಈಗ ತ್ರಾಣವಿದ್ದರೂ ಯಾಣಕ್ಕೆ ತಲುಪುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿರುವ ಯಾಣಕ್ಕೆ ಸಾಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರವಾಸಿಗರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.

ಕುಮಟಾ ಹಾಗೂ ಶಿರಸಿ ಎರಡು ಮಾರ್ಗಗಳಿಂದ ಯಾಣಕ್ಕೆ ತಲುಪಬಹುದು. ಉತ್ತರ ಕರ್ನಾಟಕ ಭಾಗಗಳಿಂದ ಬರುವವರು ಶಿರಸಿ–ದೇವನಳ್ಳಿ–ವಡ್ಡಿ–ಗೋಕರ್ಣ (ರಾಜ್ಯ ಹೆದ್ದಾರಿ 143) ರಸ್ತೆಯಲ್ಲಿ ಸಾಗಿ, ಯಾಣಕ್ಕೆ ತಲುಪುತ್ತಾರೆ. ಈ ಹೆದ್ದಾರಿಯಲ್ಲಿ ಶಿರಸಿಯಿಂದ 40 ಕಿ.ಮೀ ಸಾಗಿದರೆ, ಅಡ್ಡ ತಿರುವಿನಲ್ಲಿ ಮೂರು ಕಿ.ಮೀ ರಸ್ತೆಯಿದೆ. ಈ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಲೂ ಪ್ರಯಾಸ ಪಡಬೇಕಾದ ಸ್ಥಿತಿಯಿದೆ.

‘ಕರಾವಳಿ ಭಾಗದಿಂದ ಕೆಲವು ಪ್ರವಾಸಿಗರು ಬಂದರೆ, ಇನ್ನು ಕೆಲವರು ಶಿರಸಿ ಮಾರ್ಗವಾಗಿ ಬರುತ್ತಾರೆ. ಎರಡೂ ಕಡೆಯಿಂದ ಬರುವವರು ಒಳಗಿನ ಮೂರು ಕಿ.ಮೀ ರಸ್ತೆಯಲ್ಲಿ ಸಾಗಿಯೇ ಯಾಣ ತಲುಪಬೇಕು. ಆದರೆ, ಈ ರಸ್ತೆಯ ಸ್ಥಿತಿ ನೋಡಿದರೆ, ನಮಗೆ ಸ್ಥಳೀಯರಿಗೇ ನಾಚಿಕೆಯಾಗುತ್ತದೆ. ನಿತ್ಯ ನೂರಾರು ಪ್ರವಾಸಿಗರು ಬರುವ ರಸ್ತೆ ಸಹ ನಿರ್ಲಕ್ಷ್ಯಕ್ಕೊಳಗಾಗಿದೆ’ ಎನ್ನುತ್ತಾರೆ ವಿ.ಆರ್.ಹೆಗಡೆ ಮತ್ತಿಘಟ್ಟ.

‘ವಾರದ ಹಿಂದೆ ಈ ರಸ್ತೆಯಲ್ಲಿ ಬಂದಿದ್ದ ಕಾರೊಂದು ಹೊಂಡದಲ್ಲಿ ಸಿಕ್ಕಿಕೊಂಡಿತ್ತು. ನಂತರ ಜೆಸಿಬಿ ತಂದು ಕಾರನ್ನು ಮೇಲೆತ್ತಲಾಯಿತು. ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ಗುಂಡಿ ದಾಟಿಸಲು ಹೋಗಿದ್ದ ಪ್ರವಾಸಿಗರೊಬ್ಬರ ಕಾರಿನ ಚೇಂಬರ್ ಒಡೆದಿದೆ. ವಾಹನದಲ್ಲಿ ಕುಳಿತುಕೊಂಡು ಪ್ರಯಾಣಿಸಲು ಸಾಧ್ಯವಾಗದೇ, ಮಹಿಳೆಯೊಬ್ಬರು ಕಾಲ್ನಡಿಗೆಯಲ್ಲಿ ಹೋಗಿ, ನಂತರ ಹೃದಯಾಘಾತಕ್ಕೆ ಒಳಗಾದರು. ಇಷ್ಟಾದರೂ, ಈ ತಾಣದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನಹರಿಸಿಲ್ಲ’ ಎಂದು ಅವರು ಆರೋಪಿಸಿದರು.

‘ವಡ್ಡಿ ಘಟ್ಟದಲ್ಲಿ 40 ಕಿ.ಮೀ.ಯಿಂದ 46 ಕಿ.ಮೀ ತನಕ ಕೂಡ ರಸ್ತೆ ಹಾಳಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿರುವ ಶಿರಸಿ–ಕುಮಟಾ ರಸ್ತೆಯ ವಿಸ್ತರಣೆ ಕಾರಣಕ್ಕೆ ಸಂಚಾರ ಬಂದ್ ಆದರೆ ಕರಾವಳಿ ಹೋಗುವವರು ಇದೇ ಮಾರ್ಗದಲ್ಲಿ ಹೋಗಬೇಕು. ಜಿಲ್ಲಾಡಳಿತ ವಿಶೇಷ ಲಕ್ಷ್ಯವಹಿಸಿ ಈ ರಸ್ತೆ ದುರಸ್ತಿಗೊಳಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಎನ್.ವಿ.ವೈದ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT