ಸ್ವಂತ ಉದ್ದಿಮೆಯ ಕನಸು ಕಂಡಿದ್ದ ಪ್ಯಾಟ್ಸನ್

7
ಕಾಬೂಲ್‌ನಲ್ಲಿ ಹತ್ಯೆಗೀಡಾದ ಬಾಣಸಿಗ

ಸ್ವಂತ ಉದ್ದಿಮೆಯ ಕನಸು ಕಂಡಿದ್ದ ಪ್ಯಾಟ್ಸನ್

Published:
Updated:
Deccan Herald

ಕಾರವಾರ:  ಕಾಬೂಲ್‌ನಲ್ಲಿ ಅಪರಿಚಿತ ಅಪಹರಣಕಾರರಿಂದ ಹತ್ಯೆಗೀಡಾದ ಇಲ್ಲಿಗೆ ಸಮೀಪದ ಕಡವಾಡದ ಕ್ರಿಶ್ಚಿಯನ್ ವಾಡಾ ನಿವಾಸಿ ಪ್ಯಾಟ್ಸನ್ ರೋಡ್ರಿಗಸ್ (39), ಸ್ವದೇಶಕ್ಕೆ ಮರಳಿ ಸ್ವಂತ ಉದ್ಯೋಗ ಆರಂಭಿಸಬೇಕು ಎಂಬ ಹಂಬಲದಲ್ಲಿದ್ದರು ಎಂದು ಅವರ ಆತ್ಮೀಯರು ದುಃಖಿತರಾಗುತ್ತಾರೆ.

‘ಅವರು ಇನ್ನೊಂದು ಸ್ವಲ್ಪ ಕಾಲ ಅಲ್ಲಿದ್ದು, ಹಣ ಸಂಪಾದಿಸಿ ತಾಯ್ನಾಡಿಗೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಅವರ ಬಾಳಲ್ಲಿ ವಿಧಿ ಬೇರೆಯದೇ ಆಟವಾಡಿತು. ಇದೀಗ ಅವರ ಕುಟುಂಬಕ್ಕೆ ಹೇಗೆ ಸಾಂತ್ವನ ಹೇಳಬೇಕೋ ತಿಳಿಯುತ್ತಿಲ್ಲ’ ಎನ್ನುತ್ತಾರೆ ಅವರ ಸೋದರ ಸಂಬಂಧಿ ಅಸಿತ್ ಡಿಸಿಲ್ವಾ.

ಪ್ಯಾಟ್ಸನ್ ಅವರ ತಂದೆ 75 ವರ್ಷದ ಹಿರಿಯರಾದ ಜೆರೇಮಿ ರೋಡ್ರಿಗಸ್ ಅವರಿಗೆ ಮಗನ ಸಾವಿನ ವಿಚಾರ ತಿಳಿದ ಕೂಡಲೇ ತಮ್ಮ ಪತ್ನಿ, ಸೊಸೆ ಮತ್ತು ಮೊಮ್ಮಗನಿಗೆ ವಿಚಾರ ತಿಳಿಸಲಿಲ್ಲ. ಅವರಿಗೆ ತಿಳಿದರೆ ಎಲ್ಲಿ ಆಘಾತಕ್ಕೆ ಒಳಗಾಗುತ್ತಾರೋ ಎಂದು ದುಗುಡವನ್ನೆಲ್ಲ ಮನಸ್ಸಿನಲ್ಲೇ ಹಿಡಿದಿಟ್ಟುಕೊಂಡರು. ಅವರಿಗೆಲ್ಲ ಮಗನ ಅಪಹರಣವಾಗಿದೆ ಎಂದಷ್ಟೇ ಹೇಳುತ್ತಾ ಸಂಕಟವನ್ನೆಲ್ಲ ನುಂಗಿಕೊಂಡರು.

ಜೆರೇಮಿ ಅವರಿಗೆ ಗುರುವಾರ ಕರೆ ಮಾಡಿದ ವ್ಯಕ್ತಿಯೊಬ್ಬರು, ‘ನಿಮ್ಮ ಮಗ ಅಫ್ಗಾನಿಸ್ತಾನದಲ್ಲಿದ್ದಾರಾ’ ಎಂದು ಕೇಳಿದರು. ಅದಕ್ಕವರು ‘ಹೌದು’ ಎಂದು ಹೇಳಿದಾಗ, ‘ಹಾಗಾದರೆ ಕಾಬೂಲ್‌ನಲ್ಲಿ ನಿಮ್ಮ ಮಗನ ಹತ್ಯೆಯಾಗಿದೆ’ ಎಂದು ಹೇಳಿ ಫೋನಿಟ್ಟರು. ಅವರು ಯಾರೆಂದು ಜೆರೇಮಿ ಅವರಿಗೆ ತಿಳಿದಿಲ್ಲ. ಬಳಿಕ ಪೊಲೀಸರೊಬ್ಬರೂ ಇದೇ ವಿಚಾರ ತಿಳಿಸಿದರು. ಭಾರತೀಯನೂ ಸೇರಿ ಮೂವರು ವಿದೇಶಿಯರನ್ನು ಅಲ್ಲಿ ಅಪಹರಣ ಮಾಡಿದ್ದ ಸಂಗತಿ ಮಾಧ್ಯಮಗಳ ಮೂಲಕ ತಿಳಿದಿತ್ತು. ಅದನ್ನೇ ಮನೆಯವರ ಜತೆ ಹಂಚಿಕೊಂಡು, ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಂಡರು.

ಮಧ್ಯಪ್ರಾಚ್ಯದಲ್ಲಿ ನೂರಾರು ಕರಾವಳಿಗರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಕಡಿಮೆ ಇರುವ ಕಾರಣ ಇಲ್ಲಿನವರು ಹೊರ ಊರುಗಳಿಗೆ ಹೋಗುತ್ತಾರೆ. ಭಟ್ಕಳ, ಹೊನ್ನಾವರ ಭಾಗದವರು ಅರಬ್ ದೇಶಗಳಿಗೆ ಹೋಗುವುದು ಸಾಮಾನ್ಯ ಸಂಗತಿ. ಆದರೆ, ಹೆಚ್ಚಿನ ವೇತನದ ಆಸೆಗೆ ಅಫ್ಗಾನಿಸ್ತಾನದಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ರೀತಿ ಒಂದಷ್ಟು ವರ್ಷ ವಿದೇಶಗಳಲ್ಲಿ ಕೆಲಸ ಮಾಡಿ ನಂತರ ಸ್ವದೇಶಕ್ಕೆ ಮರಳಿ ತಮ್ಮದೇ ಆದ ಉದ್ಯೋಗ ಆರಂಭಿಸುತ್ತಾರೆ. ಆದರೆ, ಪ್ಯಾಟ್ಸನ್ ಅವರ ಪಾಲಿಗೆ ಇದು ಸಾಧ್ಯವಾಗದೇ ಇರುವುದು ದುಃಖದ ಸಂಗತಿ ಎನ್ನುತ್ತಾರೆ ಅವರ ಗೆಳೆಯರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !