ಬಡತನದಲ್ಲಿ ಅರಳಿದ ‘ಪವಿತ್ರ ಗಾನ’

ಶುಕ್ರವಾರ, ಜೂನ್ 21, 2019
22 °C

ಬಡತನದಲ್ಲಿ ಅರಳಿದ ‘ಪವಿತ್ರ ಗಾನ’

Published:
Updated:
Prajavani

ಕಾರವಾರ: ‘ಕೋಟಿ ಪಲ್ಲವಿ ಹಾಡುವ ಕನಸು ಇದು... ಕನಸುಗಾರನ ಕಣ್ಣಿನ ಬೆಳಕು ಇದು...’ ಹೀಗೆಂದು ಆಕೆ ಮುಗ್ಧ ಕಂಠದಿಂದ ಹಾಡುತ್ತಿದ್ದರೆ ಎಂಥವರೂ ತಲೆದೂಗದೆ ಇರಲಾರರು. ಇದೇ ಹಾಡಿನ ಸಾಲುಗಳ ಭಾವಾರ್ಥ ಕೂಡ ಅವರ ಸಂಗೀತ ಪಯಣದಲ್ಲಿ ಅನುಭವಿಸಿದ ಏರಿಳಿತಗಳನ್ನು ಹೇಳಬಲ್ಲದು.

ಹೌದು, ಅವರ ಹೆಸರು ಪವಿತ್ರಾ. ಭಟ್ಕಳ ತಾಲ್ಲೂಕಿನ ಸರ್ಪನಕಟ್ಟೆಯ ಹಡಿನ್‌ಬಾಳೆಹಿತ್ಲುದವರು. ಬಡ ಕುಟುಂಬದ ಅವರಿಗೆ ಅದೇನೇನೋ ಸಾಧನೆ ಮಾಡಬೇಕೆಂಬ ಹಂಬಲ. ಉನ್ನತ ಶಿಕ್ಷಣವನ್ನು ಪಡೆಯಬೇಕೆಂಬ ಹಂಬಲ ಬಡತನದಿಂದಾಗಿ ಪೂರ್ಣಗೊಳ್ಳಲಿಲ್ಲ. ಆದರೆ ಈಗ, ‘ಗುರಿ ಮುಟ್ಟುವವರೆಗೆ ಸಂಗೀತ ಬಿಡಲಾರೆ’ ಎಂಬ ಪಣತೊಟ್ಟು ಮುನ್ನಡೆಯುತ್ತಿದ್ದಾರೆ.

ಹನುಮಾನ ನಗರದ ಶ್ರೀಧರ್ ನಾಯ್ಕ ಅವರನ್ನು ವಿವಾಹವಾದ ಅವರು, ಕುಟುಂಬದ ಆರ್ಥಿಕ ನಿರ್ವಹಣೆಗಾಗಿ ಸಣ್ಣ‍ಪುಟ್ಟ ಕಂಪನಿಗಳಲ್ಲಿ ಉದ್ಯೋಗ ಮಾಡಿದರು. ಇದು ಒಂದು ಕಡೆಯಾದರೆ, ಮನೆಯವರ ಸಹಕಾರದಿಂದಾಗಿ ಅವರು ಸಂಗೀತ ಕ್ಷೇತ್ರಕ್ಕೂ ಧುಮಿಕಿದರು.

ವಾರಕ್ಕೊಮ್ಮೆ ಬೆಂಗಳೂರಿಗೆ:

‘ಬಾಲ್ಯದಿಂದಲೂ ಸಂಗೀತದ ಮೇಲೆ ಅಪಾರ ಗೌರವ, ಆಸಕ್ತಿ. ಮುಂದೆ ಬೆಳೆಯುತ್ತ, ಇದೇ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಮಹದಾಸೆ ಬೆಳೆಯಿತು. ಹೀಗಾಗಿ, ಮನೆಯಲ್ಲೇ ಟಿ.ವಿ, ಯೂಟ್ಯೂಬ್‌ಗಳನ್ನು ನೋಡಿ ಸಂಗೀತದ ಅಭ್ಯಾಸ ಶುರು ಮಾಡಿದ್ದೆ. ನಂತರದಲ್ಲಿ ಸಮಯ ಸಿಕ್ಕಾಗಲೆಲ್ಲ ನನಗೆ ನಾನೇ ಹಾಡುಗಳನ್ನು ಗುನುಗಲು ಶುರು ಮಾಡಿದ್ದೆ’ ಎಂದು ಪವಿತ್ರಾ ವಿವರಿಸಿದರು.

‘ನನ್ನ ಕನಸಿನ ಬಗ್ಗೆ ಕೆಲವರಿಗೆ ಹೇಳಿಕೊಂಡಾಗ, ಬೆಂಗಳೂರಿನಲ್ಲಿ ತರಬೇತಿ ಪಡೆಯಲು ತಿಳಿಸಿದರು. ಹಣದ ಸಹಾಯವನ್ನೂ ಕೆಲವರು ಮಾಡಿದರು. ಇದರಿಂದಾಗಿ ಕೆಲಸ ಮುಗಿದ ಬಳಿಕ ಪ್ರತಿ ಶನಿವಾರ ರಾತ್ರಿ ರೈಲಿನಲ್ಲಿ ಅಲ್ಲಿಗೆ ತೆರಳಿ, ಡಾ.ವರ್ಧನ್ ಬಾಲು ಎನ್ನುವವರ ಬಳಿ ಸಂಗೀತ ಅಭ್ಯಾಸ ಮಾಡುತ್ತಿದೆ. ನಂತರ ಅಲ್ಲಿಂದ ಭಾನುವಾರ ರಾತ್ರಿ ಊರಿಗೆ ಹೊರಟು ಬರುತ್ತಿದ್ದೆ’ ಎಂದರು. 

‘ಅವರ ಬಳಿ ಕೆಲವು ವರ್ಷ ತರಬೇತಿ ಪಡೆದು, ನಂತರ ಸ್ಥಳೀಯವಾಗಿ ಕೆಲವರ ಬಳಿ ಸಂಗೀತ ಅಭ್ಯಾಸ ಮಾಡಿದೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ. ಸ್ಪರ್ಧಿಸಿ, ಬಹುಮಾನಗಳನ್ನು ಗೆದ್ದೆ. ಆದರೆ, ‘ಮದುವೆಯಾದವಳಿಗೆ, ಕುಟುಂಬ ಇರುವವಳಿಗೆ ಇದೆಲ್ಲ ಸುಮ್ಮನೆ ಯಾಕೆ?’ ಎಂದು ಕೆಲವರು ಮೂದಲಿಸಿದರು. ಅಪಮಾನಗಳನ್ನೂ ಮಾಡಿದರು. ಧೈರ್ಯಗುಂದದೇ ನನ್ನ ಕಾರ್ಯವನ್ನು ಮುಂದುವರಿಸಿ, ಈಗ ಸ್ವಂತ ‘ಪವಿತ್ರ ಗಾನಸಿರಿ’ ಎಂಬ ಆರ್ಕೆಸ್ಟ್ರಾವನ್ನೂ ಪ್ರಾಂಭಿಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿದರು.

‘ಮೂವರು ಕಾಯಂ ಗಾಯಕರು ಹಾಗೂ ಇಬ್ಬರು ಅತಿಥಿ ಹಾಡುಗಾರರ ಜತೆಗೂಡಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೇನೆ. ಕುಟುಂಬದವರೂ ಆಗಿರುವ ಶಂಕರ್ ನಾಯ್ಕ ಕೋಣಾರ ಅವರು ನನಗೆ ಬೆನ್ನೆಲುಬಾಗಿ ನಿಂತರು’ ಎಂದು ಅವರು ತಮ್ಮ ಸಂಗೀತ ಪಯಣದ ಏಳುಬೀಳುಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ಹಲವಾರು ಸ್ಪರ್ಧೆಗಳಲ್ಲಿ ಭಾಗಿ: ಪವಿತ್ರಾ, ವಿವಿಧ ಕನ್ನಡ ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದಾರೆ. ಝೀ ಕನ್ನಡ ವಾಹಿನಿಯ ಸರಿಗಮಪ, ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ, ಚಂದನ ವಾಹಿನಿಯ ಗಾನ ಚಂದನ, ಮಧುರ ಮಧುರವೀ ಮಂಜುಳ ಗಾನ ಮುಂತಾದ ಕಾರ್ಯಕ್ರಮಗಳಲ್ಲಿ ಹಲವು ಸುತ್ತುಗಳವರೆಗೆ ಭಾಗವಹಿಸಿದ್ದಾರೆ.

ವಿವಿಧ ಪ್ರಶಸ್ತಿ, ಬಹುಮಾನಗಳನ್ನೂ ತಮ್ಮದಾಗಿಸಿಕೊಂಡಿರುವ ಅವರು, ತಮ್ಮಂತೆಯೇ ಇರುವ ಬಡ ಗಾಯಕ– ಗಾಯಕರಿಗೆ ಊರಿನಲ್ಲೇ ತರಬೇತಿ ನೀಡಿ ಅಣಿಗೊಳಿಸಬೇಕೆಂಬ ಹಂಬಲವನ್ನೂ ಹೊಂದಿದ್ದಾರೆ. ‘ಒಂದಲ್ಲ ಒಂದು ದಿನ ನನ್ನ ಆಸೆ ಪರಿಪೂರ್ಣಗೊಳ್ಳುತ್ತದೆಂಬ ನಂಬಿಕೆ’ ಎನ್ನುತ್ತಾರೆ ಅವರು. ಅವರನ್ನು ಮೊ.ಸಂ: 94831 07106ಗೆ ಸಂಪರ್ಕಿಸಬಹುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !