ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾಪುರ| ಕೊಳೆತ ತ್ಯಾಜ್ಯ ಕೊಂಡೊಯ್ಯುವ ಪಿಡಿಒ

ಪಿಡಿಒ ವಿಶ್ವನಾಥ್‌ ಕೆಲಸಕ್ಕೆ ಜನರಿಂದ ಮೆಚ್ಚುಗೆ
Last Updated 12 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಸಿದ್ದಾಪುರ: ಸದಾ ಕಸ ವಿಲೇವಾರಿ ಸಮಸ್ಯೆ ಎದುರಿಸುತ್ತಿದ್ದ ಸಿದ್ದಾಪುರ ಗ್ರಾ.ಪಂ ಇದೀಗ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ಸಿಕ್ಕಿದ್ದು ಶಾಶ್ವತ ಜಾಗದ ನಿರೀಕ್ಷೆಯಲ್ಲಿದೆ.

ಜಿಲ್ಲೆಯಲ್ಲೇ ಅತೀಹೆಚ್ಚು ಗ್ರಾ.ಪಂ ಸದಸ್ಯರನ್ನು ಹೊಂದಿರುವ ಸಿದ್ದಾಪುರ ಗ್ರಾ.ಪಂಚಾಯಿತಿಯಲ್ಲಿ ದಶಕಗಳಿಂದ ಕಸದ ವಿಲೇವಾರಿ ಸಮಸ್ಯೆ ಇದ್ದು, ಕಸದ ವಿಲೇವಾರಿಗಾಗಿ ಹತ್ತಾರು ಪ್ರತಿಭಟನೆಗಳು ನಡೆದಿವೆ. ಗ್ರಾ.ಪಂ ವ್ಯಾಪ್ತಿಯಲ್ಲಿ ಕಸದ ವಿಲೇವಾರಿಗೆ ಜಾಗವಿಲ್ಲದೇ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಗ್ರಾ.ಪಂ ಪಿಡಿಒ ತನ್ನ ಸ್ವಂತ ಜಾಗದಲ್ಲಿ ಕೊಳೆತ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದು, ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ತ್ಯಾಜ್ಯ ವಿಲೇವಾರಿ: ಈ ಹಿಂದೆ ಗ್ರಾ.ಪಂ ವ್ಯಾಪ್ತಿಯಲ್ಲಿ ಕಸದ ವಿಲೇವಾರಿಗೆ ಜಾಗವಿಲ್ಲದೇ ಅರಣ್ಯದಂಚಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು. ಅರಣ್ಯದಂಚಿನಲ್ಲಿ ಕಸದ ವಿಲೇವಾರಿ ಮಾಡುವುದಕ್ಕೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತ್ಯಾಜ್ಯವು ಪಟ್ಟಣದಲ್ಲೇ ರಾಶಿಯಾಗಿ ಕೊಳೆತು ನಾರುತ್ತಿತ್ತು. ಬಳಿಕ ಪಿಡಿಒ ವಿಶ್ವನಾಥ್ ಕಾಳಜಿಯಿಂದ ಗ್ರಾ.ಪಂ ಆವರಣದಲ್ಲೇ ಕಸವನ್ನು ವಿಂಗಡಿಸಲಾಗುತ್ತಿತ್ತು. ಇದೀಗ ಗ್ರಾ.ಪಂನ ಮಾರುಕಟ್ಟೆಯ ಆವರಣದ ಒಂದು ಭಾಗದಲ್ಲಿ ಕಸವನ್ನು ಬೇರ್ಪಡಿಸಿ, ಕಸವನ್ನು ವಿಶ್ವನಾಥ್ ಅವರ ಪಿರಿಯಾಪಟ್ಟಣದ ಸ್ವಂತ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತಿದೆ.

ವಿಂಗಡಿಸಿದ ಬಾಟಲಿಗಳು, ಪ್ಲಾಸ್ಟಿಕ್, ರಬ್ಬರ್‌ನ ಕಸಗಳನ್ನು ಶೇಖರಣೆ ಮಾಡಲಾಗುತ್ತಿದ್ದು, ಖಾಸಗಿ ಕಂಪೆನಿ ಗ್ರಾ.ಪಂಗೆ ಹಣವನ್ನು ನೀಡಿ ತ್ಯಾಜ್ಯವನ್ನು ಕೊಂಡೊಯ್ಯುತ್ತಿದ್ದಾರೆ. ಇದರಿಂದ ಗ್ರಾ.ಪಂಗೂ ಆದಾಯ ಲಭಿಸಿದಂತಾಗಿದೆ.

ಜಾಗದ ಕೊರತೆ:ಸಿದ್ದಾಪುರ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಕಸವು ಕೂಡ ಹೆಚ್ಚು ಉತ್ಪತಿಯಾಗುತ್ತಿದೆ. ಒಂದೆಡೆ ಕಸ ಹೆಚ್ಚಾಗುತ್ತಿದ್ದರೂ, ಸೂಕ್ತ ವಿಲೇವಾರಿಗೆ ಜಾಗವಿಲ್ಲದ ಕಾರಣ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ.

ಹಲವು ಬಾರಿ ಜಿಲ್ಲಾಡಳಿತ, ಜಿ.ಪಂಗೆ ಮನವಿ ಸಲ್ಲಿಸಿ ಸರ್ಕಾರಿ ಜಾಗ ಗುರುತಿಸಲು ಮನವಿ ಸಲ್ಲಿಸಿದ್ದರೂ, ಈವರೆಗೂ ಸೂಕ್ತ ಜಾಗ ಲಭಿಸಿಲ್ಲ. ಗ್ರಾಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗವನ್ನು ಹಲವು ಬಾರಿ ಸರ್ವೆ ಮಾಡಲಾಗಿದ್ದರೂ, ಹಲವಾರು ಕಾರಣಗಳಿಂದ ಕಸ ವಿಲೇವಾರಿಗೆ ಜಾಗ ದೊರೆತಿಲ್ಲ. ಈ ಹಿಂದೆ ಕಾವೇರಿ ನದಿಯ ದಡದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದು, ಹಲವು ಯುವಕ ಸಂಘಗಳ ಪರಿಶ್ರಮದಿಂದ ಇದೀಗ ನದಿ ದಡ ಸ್ವಚ್ಛವಾಗಿದೆ. ಆದರೆ, ಕಸದ ವಿಲೇವಾರಿ ಸಮಸ್ಯೆ ತಾತ್ಕಾಲಿಕವಾಗಿ ನಿವಾರಣೆಯಾಗಿದ್ದರೂ ಕೂಡ ಶಾಶ್ವತ ಪರಿಹಾರ ಕಾಣಬೇಕಾದರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಸೂಕ್ತ ಜಾಗ ಸಿಗಬೇಕಾಗಿದೆ.

ಎಲ್ಲೆಂದರಲ್ಲಿ ಹಾಕಿದ ಕಸ ಮತ್ತೆ ಮನೆಗೆ!:

ಗ್ರಾ.ಪಂ ವತಿಯಿಂದ ಪ್ರತಿ ದಿನ ಕಸ ಪಡೆಯಲು ಟ್ರ್ಯಾಕ್ಟರ್‌ ಮೂಲಕ ತೆರಳುತ್ತಿದ್ದು, ಗ್ರಾ.ಪಂನ ಸಿಬ್ಬಂದಿಗಳು ಕಸವನ್ನು ಪಡೆದು, ರಸ್ತೆ ಬದಿಯ ಕಸದ ತೊಟ್ಟಿಯಿಂದ ಕಸವನ್ನು ತೆಗೆಯುತ್ತಿದ್ದಾರೆ. ಆದರೆ ಕೆಲವರು ಕಸವನ್ನು ರಸ್ತೆ ಬದಿಯಲ್ಲೇ ಸುರಿಯುತ್ತಿದ್ದು, ಕಳೆದ ಎರಡು ದಿನಗಳಿಂದ ಪಿಡಿಒ ನೇತೃತ್ವದಲ್ಲಿ ಕಸ ಹಾಕುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಸಾರ್ವಜನಿಕರಿಂದ ಮಾಹಿತಿಯನ್ನು ಪಡೆದು, ಸಿ.ಸಿ ಟಿವಿ ಕ್ಯಾಮೆರಾ ಪರಿಶೀಲಿಸಿ ಕಸ ಹಾಕಿದ ವ್ಯಕ್ತಿಯನ್ನು ಗುರುತಿಸಿ ಕಸವನ್ನು ಮರಳಿ ಕಸ ಹಾಕಿದ ಮನೆಗೆ ನೀಡಲಾಗುತ್ತಿದೆ. ಕಸವನ್ನು ಮರಳಿ ನೀಡುವುದರೊಂದಿಗೆ ಕಸ ಎಲ್ಲೆಂದರಲ್ಲಿ ಹಾಕದಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ.

ಪ್ಲಾಸ್ಟಿಕ್ ನಿಷೇಧ:ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಿದ್ದರೂ, ಹಲವು ಅಂಗಡಿ ಮಾಲಿಕರು ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸುತ್ತಿದ್ದು, ಗ್ರಾ.ಪಂ ದಾಳಿ ನಡೆಸಿ ಸುಮಾರು 300 ಕೆ.ಜಿ ಪ್ಲಾಸ್ಟಿಕ್ ಕೈಚೀಲಗಳನ್ನು ವಶಪಡಿಸಿಕೊಂಡಿದ್ದಾರೆ. ಸಂತೆಯಲ್ಲಿಯೂ ಕೂಡ ಕೈಚೀಲಗಳನ್ನು ಬಳಸಲಾಗುತ್ತಿದ್ದು, ಕೈಚೀಲಗಳನ್ನು ವಶಪಡಿಸಿ, ದಂಡ ವಿಧಿಸಲಾಗಿದೆ. ಪೇಪರ್ ಹಾಗೂ ಬಟ್ಟೆಯ ಕೈಚೀಲಗಳನ್ನು ಆಡಳಿತ ಮಂಡಳಿಯ ವತಿಯಿಂದ ನೀಡಲಾಗಿದ್ದು, ವ್ಯಾಪಾರಸ್ಥರಲ್ಲಿ ಅರಿವು ಮೂಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT