ಬುಧವಾರ, ಅಕ್ಟೋಬರ್ 20, 2021
25 °C

ಸಾರ್ವಜನಿಕರು, ಬಂದರು ಅಧಿಕಾರಿಗಳೊಂದಿಗೆ ಬ್ರಿಜೇಶ್ ಕುಮಾರ್ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ನಗರದ ವಾಣಿಜ್ಯ ಬಂದರಿನ ವಿಸ್ತರಣೆಗೆ ಪರಿಸರ ಅನುಮತಿ ಬಗ್ಗೆ ಸಾರ್ವಜನಿಕರ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಬ್ರಿಜೇಶ್ ಕುಮಾರ್ ತಿಳಿಸಿದ್ದಾರೆ.

ಬಂದರು ವಿಸ್ತರಣೆ ವಿರೋಧಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಅಲ್ಲದೇ ಕಾಮಗಾರಿ ಹಮ್ಮಿಕೊಳ್ಳಲು ಬಂದರು ಇಲಾಖೆಯೂ ಅನುಮತಿಗೆ ಕಾಯುತ್ತಿದೆ. ಈ ಹಿನ್ನೆಲೆಯಲ್ಲಿ ವಾಸ್ತವ ಸ್ಥಿತಿ ಅರಿತುಕೊಳ್ಳಲು ಅವರು ನಗರಕ್ಕೆ ಸೋಮವಾರ ಭೇಟಿ ನೀಡಿದರು. ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರು ಮತ್ತು ಬಂದರು ಇಲಾಖೆಯ ಅಧಿಕಾರಿಗಳ ಜೊತೆ ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಯೋಜನೆಯ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವ್ಯಾಪ್ತಿಯಲ್ಲಿ ಬರುವ ಗೊಂದಲಗಳನ್ನು ಕಾನೂನು ಪ್ರಕಾರ ಬಗೆಹರಿಸಲಾಗುವುದು. ಯೋಜನೆಯಿಂದ ಪರಿಸರ ಪರಿಣಾಮ ವರದಿಯನ್ನು (ಇ.ಐ.ಎ) ಮತ್ತೊಮ್ಮೆ ಸಿದ್ಧಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಆದರೆ, ಮೂರು– ನಾಲ್ಕು ವರ್ಷಗಳ ಹಿಂದೆ ಅಂತಿಮವಾದ ವರದಿಯನ್ನು ಮತ್ತೊಮ್ಮೆ ತಯಾರಿಸಲು ಕಾನೂನಿನಲ್ಲಿ ಅವಕಾಶ ಇದೆಯೋ ಎಂದು ಗೊತ್ತಿಲ್ಲ. ಈ ಬಗ್ಗೆ ತಜ್ಞರನ್ನು ಸಂಪರ್ಕಿಸಿ ನಿರ್ಧರಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಮೀನುಗಾರರೂ ಸೇರಿದಂತೆ ಕಡಲತೀರದ ಬಳಕೆದಾರರಿಗೆ ಯೋಜನೆಯ ಬಗ್ಗೆ ಆತಂಕವಿರುವುದು ಗೊತ್ತಾಗಿದೆ. ಮೀನುಗಾರರಿಗೆ ನಿಜವಾಗಿಯೂ ಸಮಸ್ಯೆಯಾಗಿದೆ. ಆದರೆ, ಈ ವಿಚಾರದಲ್ಲಿ ಹೆಚ್ಚು ಒತ್ತು ಕೊಡಲು ಮಂಡಳಿಗೆ ಅಧಿಕಾರವಿಲ್ಲ. ಕಡಲತೀರವು ಕಡಿಮೆಯಾಗುತ್ತದೆ ಎಂದು ನಾಗರಿಕರಲ್ಲೂ ಭಯವಿದೆ. ಈ ಎರಡೂ ವಿಷಯಗಳ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಹೇಳಿದರು.

ಸಾರ್ವಜನಿಕರ ಆಕ್ಷೇಪ:

ರಾಜೇಶ ನಾಯ್ಕ ಮಾತನಾಡಿ, ‘ಜನರಿಗೆ ಮಾರಕವಾಗುವ ಯೋಜನೆ ಬೇಡ. ಹಾಗಾಗಿ ಬಂದರು ವಿಸ್ತರಣೆಯ‌ನ್ನು ರದ್ದು ಮಾಡಿ’ ಎಂದು ಆಗ್ರಹಿಸಿದರು.

ವಿಕಾಸ ತಾಂಡೇಲ ಮಾತನಾಡಿ, ‘ಬಂದರಿನಲ್ಲಿ ಈಗಾಗಲೇ ಇರುವ ಜೆಟ್ಟಿಯನ್ನೇ ಮೇಲ್ದರ್ಜಗೇರಿಸಲು ಸಾಧ್ಯವಿದೆ. ಈ ಭಾಗದಲ್ಲಿ ಅಳಿವಿನ ಅಂಚಿನಲ್ಲಿರುವ ಜಲಚರಗಳಿವೆ. ಹವಳದ ದಿಬ್ಬವಿದೆ. ಈಗಾಗಲೇ ಹೆಚ್ಚುತ್ತಿರುವ ಕಡಲ್ಕೊರೆತಕ್ಕೆ ಮಾನವ ನಿರ್ಮಿತ ತಪ್ಪುಗಳು ಕಾರಣ ಎಂದು ಈಗಾಗಲೇ ಪ್ರಕಟಿತ ವಿವಿಧ ವರದಿಗಳಲ್ಲಿವೆ. ಹಾಗಾಗಿ ಬಂದರು ಕಾಮಗಾರಿ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ಪಟ್ಟಿಯಲ್ಲಿ ಕಾಳಿ ಹೆಸರಿಲ್ಲ’:

‘ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಗುರುತಿಸಿದ, ದೇಶದ ಮಲಿನ ನದಿಗಳ ಪಟ್ಟಿಯಲ್ಲಿ ಕಾಳಿ ನದಿಯ ಹೆಸರಿಲ್ಲ’ ಎಂದು ಬ್ರಿಜೇಶ್ ಕುಮಾರ್ ಸ್ಪಷ್ಟಪಡಿಸಿದರು.

‘ಕೇಂದ್ರ ಮಂಡಳಿಯು ಇಡೀ ದೇಶದಲ್ಲಿ 42 ನದಿಗಳನ್ನು ಮಲಿನವೆಂದು ಗುರುತಿಸಿದೆ. ಕಾಳಿ ನದಿಯ ತಟದಲ್ಲಿ ಸೂಕ್ಷ್ಮ ಕೈಗಾರಿಕೆಗಳು ಇರುವ ಕಾರಣ ಈ ಭಾಗದ ಜನರಿಗೆ ಆತಂಕವಿರುವುದು ಸಹಜ. ಈ ಬಗ್ಗೆ ಜನರಲ್ಲಿ ಎಚ್ಚರಿಕೆ ಇರುವುದು ಉತ್ತಮ’ ಎಂದೂ ಹೇಳಿದರು.

‘ಸಮುದ್ರದಲ್ಲಿ ಕಲ್ಮಶ ನೀರನ್ನು ಬಿಡುವ ಬಗ್ಗೆ ನಿಯಮಾವಳಿಗಳಿವೆ. ಹಡಗು, ದೋಣಿಗಳನ್ನು ತೊಳೆದು, ತೈಲ ಮಿಶ್ರಿತ ನೀರನ್ನು ಸಮುದ್ರಕ್ಕೆ ಹರಿಸುವುದಕ್ಕೂ ಇದು ಅನ್ವಯವಾಗುತ್ತದೆ. ನಿಯಮದ ಉಲ್ಲಂಘನೆಯಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವಸಂತ ರೆಡ್ಡಿ, ಮಂಡಳಿಯ ಕಾರವಾರ ಕಚೇರಿಯ ಪರಿಸರ ಅಧಿಕಾರಿ ಡಾ.ಎಚ್.ಲಕ್ಷ್ಮೀಕಾಂತ, ಸಹಾಯಕ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ, ಬಂದರು ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ತಾರಾನಾಥ ರಾಥೋಡ್, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ‍ಪಿ.ನಾಗರಾಜು, ವಿವಿಧ ಅಧಿಕಾರಿಗಳು, ಸಾರ್ವಜನಿಕರು ಇದ್ದರು.

––––

* ಬಂದರು ಇಲಾಖೆ ಮತ್ತು ಯೋಜನೆ ವಿರೋಧಿಸುತ್ತಿರುವವರ, ಇಬ್ಬರ ಹೇಳಿಕೆಗಳನ್ನೂ ನ್ಯಾಯಾಲಯದ ಮುಂದೆ ಇಡಲಾಗಿದೆ. ಅದರ ಸೂಚನೆಯಂತೆ ಮುಂದುವರಿಯಲಾಗುವುದು.

– ಬ್ರಿಜೇಶ್ ಕುಮಾರ್, ಅಧ್ಯಕ್ಷ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ.

* ಕಡಲತೀರದಿಂದ ಸಮೀಪವೇ ಜನವಸತಿಯಿದೆ. ಜನರಿಗೆ ಮನರಂಜನೆಗೆ ಇರುವ ಏಕೈಕ ಜಾಗವಿದು. ಯೋಜನೆಯಿಂದ ಕೋಣೆನಾಲಾದ ನೀರು ಹರಿಯಲೂ ಸಮಸ್ಯೆಯಾಗಲಿದೆ.

– ಡಾ.ನಿತಿನ್ ಪಿಕಳೆ, ನಗರಸಭೆ ಅಧ್ಯಕ್ಷ.

* ಪಶ್ಚಿಮ ಘಟ್ಟವು ಪರಿಸರ ಸೂಕ್ಷ್ಮದಲ್ಲಿ ಕೆಂಪು ವಲಯದಲ್ಲಿದೆ. ಅದಿರು ಸಾಗಣೆ ಮುಂತಾದ ಉದ್ದಿಮೆಗಳೂ ಕೆಂಪು ಪಟ್ಟಿಯಲ್ಲಿವೆ. ಯೋಜನೆಗೆ ಅನುಮತಿ ಕೊಡುವುದಕ್ಕೆ ನಮ್ಮ ಆಕ್ಷೇಪವಿದೆ.

– ಪ್ರೀತಂ ಮಾಸೂರಕರ್, ಎಂಜಿನಿಯರ್.

* ಕಡಲತೀರವು ಮೀನುಗಾರರಿಗೆ ಸೇರಿವೆ. ನೌಕಾನೆಲೆಗೆ 24 ಕಡಲತೀರಗಳನ್ನು ಕಳೆದುಕೊಂಡಿದ್ದೇವೆ. ಟ್ಯಾಗೋರ್ ತೀರಕ್ಕಾಗಿ ಮತ್ತೆ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಡಿ.

– ಗಣಪತಿ ಮಾಂಗ್ರೆ, ಮೀನುಗಾರರ ಮುಖಂಡ‌.

* ಬಂದರಿನಲ್ಲಿ ಸರಕು ಸಂಗ್ರಹಿಸಲು ಜಾಗವಿಲ್ಲ. ಆ ಬಗ್ಗೆ ಕೇಳಿದರೆ ಬಂದರು ಅಧಿಕಾರಿಗಳು ಎದುರಿನ ಗುಡ್ಡ ತೆರವು ಮಾಡುವುದಾಗಿ ಸಮಜಾಯಿಷಿ ಕೊಡುತ್ತಾರೆ.

– ರಾಜು ತಾಂಡೇಲ, ಅಧ್ಯಕ್ಷ, ಜಿಲ್ಲಾ ಸಹಕಾರ ಮೀನು ಮಾರಾಟ ಒಕ್ಕೂಟ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು