ಸ್ವಚ್ಛತೆಯಲ್ಲಿ ಜನರ ಸಹಭಾಗಿತ್ವ ಕಡಿಮೆ: ದೇಶಪಾಂಡೆ ಬೇಸರ

7
ಕಡಲತೀರದಲ್ಲಿ ಸ್ವಚ್ಛಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ

ಸ್ವಚ್ಛತೆಯಲ್ಲಿ ಜನರ ಸಹಭಾಗಿತ್ವ ಕಡಿಮೆ: ದೇಶಪಾಂಡೆ ಬೇಸರ

Published:
Updated:
Deccan Herald

ಕಾರವಾರ: ‘ಸ್ವಚ್ಛ ಭಾರತದ ಕನಸು ನನಸಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಧಾನ್ಯ ಕೊಡುತ್ತಿವೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಜನರು ಇದರಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಮಾಜಾಳಿ ಕಡಲತೀರದಲ್ಲೇ ಇದು ಸ್ಪಷವಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.

ಗಾಂಧಿ ಜಯಂತಿ ಅಂಗವಾಗಿ ತಾಲ್ಲೂಕಿನ ಮಾಜಾಳಿ ಕಡಲ ತೀರದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾರಂಭಕ್ಕೂ ಮುನ್ನ ಕಡಲತೀರದಲ್ಲಿ ನಡೆದುಕೊಂಡು ಹೋದ ಅವರು, ಬಯಲು ಶೌಚದಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ್ದರು. ತಮ್ಮ ಭಾಷಣದಲ್ಲಿ ಇದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಮಾಜಾಳಿ ಕಡಲತೀರವನ್ನು ಈ ಹಿಂದೆಯೂ ಸ್ವಚ್ಛಗೊಳಿಸಲಾಗಿತ್ತು. ಆದರೆ, ಮತ್ತೆ ನೈರ್ಮಲ್ಯ ಮರೆಯಾಗಿದೆ. ಈ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಬೇಕು’ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

‘ಮಹಾತ್ಮ ಗಾಂಧಿಗೆ ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸಬೇಕು ಎಂದರೆ ನಮ್ಮ ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಹಲವಾರು ಕಾಯಿಲೆಗಳನ್ನು ದೂರವಿಡಬಹುದು’ ಎಂದು ಕಿವಿಮಾತು ಹೇಳಿದರು. 

ಇದೇವೇಳೆ, ಪೆಪ್ಸಿ ಕಂಪನಿ ತನ್ನ ಸಾರ್ವಜನಿಕ ಜವಾಬ್ದಾರಿ ಯೋಜನೆಯಡಿ ಗ್ರಾಮದ 800 ಕುಟುಂಬಗಳಿಗೆ ನೀಡಿದ ಹಸಿ ಮತ್ತು ಒಣ ಕಸದ ಬುಟ್ಟಿಗಳನ್ನು ವಿತರಿಸಲಾಯಿತು. 

ಇದಕ್ಕೂ ಮೊದಲು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸಾರ್ವಜನಿಕರು ಸೇರಿದಂತೆ 2 ಸಾವಿರಕ್ಕೂ ಅಧಿಕ ಮಂದಿ ಕಡಲತೀರವನ್ನು ಸ್ವಚ್ಛಗೊಳಿಸಿದರು. 

ಸಚಿವ ದೇಶಪಾಂಡೆ ಅವರು ಇದಕ್ಕೂ ಮೊದಲು ಕಾರವಾರ ನಗರಸಭೆ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಕಡಲತೀರದಲ್ಲೇ ಮಲ ವಿಸರ್ಜನೆ: ಮಾಜಾಳಿಯ ಕಡಲತೀರದಲ್ಲಿ ಸ್ಥಳೀಯ ಕೆಲವರು ಮಲ ವಿಸರ್ಜನೆ ಮಾಡಿದ್ದರು. ಅದನ್ನು ತಿಳಿಯದೇ ಕೆಲವು ಹಿರಿಯ ಅಧಿಕಾರಿಗಳೂ ಸೇರಿದಂತೆ ಹಲವರು ತುಳಿದು ಮುಜುಗರಕ್ಕೀಡಾದರು. ಬಯಲು ಶೌಚ ಮಾಡಬಾರದು ಎಂದು ಸಾಕಷ್ಟು ತಿಳಿವಳಿಕೆ ನೀಡುತ್ತಿದ್ದರೂ ತಿದ್ದಿಕೊಳ್ಳದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೀತಲ್ ಪವಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !